More

    ಉಚ್ಚಿಲ ಬಡಾ ಗ್ರಾಮದಲ್ಲಿ ತಾಜ್ಯ ವಿಲೇವಾರಿಗೆ ಸ್ಥಳವಿಲ್ಲ

    ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿ ಬೆಳೆಯುತ್ತಿರುವ ಉಚ್ಚಿಲ ಬಡಾ ಗ್ರಾಮದಲ್ಲಿ ತಾಜ್ಯ ವಿಲೇವಾರಿಗೆ ಸೂಕ್ತ ಜಮೀನು ಇಲ್ಲದೆ ಗ್ರಾಮಸ್ಥರು ದಿನನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಮೂಡುಬೆಟ್ಟು ಪರಿಸರದ ಕೃಷಿ ಭೂಮಿ ಮಧ್ಯೆ ಹಾದುಹೋಗಿರುವ ತೋಡು ಕೋಳಿ ತ್ಯಾಜ್ಯ ಹಾಗೂ ಇತರ ಘನ ತ್ಯಾಜ್ಯಗಳಿಂದ ತುಂಬಿ ಮಲಿನಗೊಂಡು ದುರ್ನಾತ ಬೀರುತ್ತಿದೆ. ಈ ಭಾಗದಲ್ಲಿ ಜನ ಕೃಷಿ ಮಾಡುತ್ತಿದ್ದು, ಮಲಿನ ನೀರಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಗಾಗಿ ಇಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಹಲಗೆ ಹಾಕಿ ನೀರನ್ನು ಭತ್ತ ಕೃಷಿಗೆ ಬಳಕೆ ಮಾಡಲಾಗುತ್ತಿದೆ. ಕೆಲವು ತಿಂಗಳಿನಿಂದ ಈ ಭಾಗದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಕೋಳಿ ತ್ಯಾಜ್ಯ ತಂದು ಎಸೆಯುತ್ತಿರುವುದರಿಂದ ಅದು ನೀರಿನಲ್ಲಿ ಕೊಳೆತು ಕೃಷಿ ಗದ್ದೆಗಳಿಗೆ ಹರಿಯುತ್ತಿದೆ. ಪರಿಣಾಮ ಗದ್ದೆಗೆ ಇಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತೋಡಿನ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳು ತುಂಬಿ ನೀರು ಹರಿಯಲು ತೊಡಕಾಗಿದೆ.

    ಸರ್ಕಾರಿ ಜಮೀನು ಕೊರತೆ: ಗ್ರಾಮದಲ್ಲಿ ಸೂಕ್ತ ಸರ್ಕಾರಿ ಜಮೀನಿನ ಕೊರತೆ ಇದ್ದು, ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪನೆಗಾಗಿ ಹಲವೆಡೆ ಜಾಗ ಗುರುತಿಸಿದರೂ ಗ್ರಾಮಸ್ಥರ ವಿರೋಧದಿಂದ ಅದು ಕಾರ್ಯಗತವಾಗಿಲ್ಲ. ಪ್ರಸ್ತುತ ಬೆಳಪುವಿನಲ್ಲಿ ನಿರ್ಮಾಣ ಮಾಡಲುದ್ದೇಶಿಸಿರುವ ಬೃಹತ್ ಘನತ್ಯಾಜ್ಯ ಸಂಸ್ಕರಣ ಘಟಕಕ್ಕೆ ಉಚ್ಚಿಲ ಬಡಾ ಗ್ರಾಪಂನ ಘನ ತ್ಯಾಜ್ಯ ಸಾಗಾಟ ಮಾಡುವ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ. ಅದು ಕಾರ್ಯಗತವಾದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗಲಿದೆ.

    ಐದಾರು ತಿಂಗಳಿನಿಂದ ಈ ಪರಿಸರದಲ್ಲಿ ಕೋಳಿ ತ್ಯಾಜ್ಯ ಸಹಿತ ಘನತ್ಯಾಜ್ಯವನ್ನು ಫ್ಲಾಸ್ಟಿಕ್ ಚೀಲಗಳಲ್ಲಿ ತಂದು ಸೇತುವೆ ಬಳಿ ಎಸೆಯಲಾಗುತ್ತಿದೆ. ಈ ಬಗ್ಗೆ ಗ್ರಾಪಂ ಗಮನಕ್ಕೂ ತರಲಾಗಿದೆ. ತ್ಯಾಜ್ಯದ ಪರಿಣಾಮ ನೀರು ಮಲಿನಗೊಂಡು ದುರ್ನಾತ ಬೀರುತ್ತಿದೆ.
    ಸಂತೋಷ್ ಜೆ.ಶೆಟ್ಟಿ, ಕೃಷಿಕ ಮೂಡುಬೆಟ್ಟು ಬರ್ಪಾಣಿ

    ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೋಳಿ ತ್ಯಾಜ್ಯದ ವಿಷಯ ಪ್ರಸ್ತಾಪವಾಗಿದೆ. ವಾಹನಗಳಲ್ಲಿ ತಂದು ಎಸೆಯುವವರನ್ನು ಪತ್ತೆ ಹಚ್ಚಿ ಸಾರ್ವಜನಿಕರು ತಿಳಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಪ್ರದೇಶದಲ್ಲಿ ಸಿಸಿ ಕ್ಯಾವರಾ ಅಳವಡಿಕೆ ಬಗ್ಗೆಯೂ ಚರ್ಚಿಸಲಾಗಿದೆ. ಇಲ್ಲಿನ ತೋಡು ಸ್ವಚ್ಛಗೊಳಿಸಲು ಕ್ರಮ ವಹಿಸಲಾಗುವುದು. ಜನವರಿ ತಿಂಗಳಿನಿಂದ ಪ್ರಾಯೋಗಿಕವಾಗಿ ಗ್ರಾಮದ ಒಂದು ವಾರ್ಡ್ ಮತ್ತು ವಾಣಿಜ್ಯ ಮಳಿಗೆಗಳಿಂದ ಒಣ ಕಸ ಸಂಗ್ರಹಿಸಲಾಗುತ್ತದೆ. ಕಸ ಸಂಗ್ರಹಿಸಿಡಲು ಚೀಲಗಳನ್ನು ನೀಡಲಾಗುತ್ತಿದ್ದು, ಮನೆಗಳಿಗೆ 50 ರೂ.ಹಾಗೂ ವಾಣಿಜ್ಯ ಮಳಿಗೆಗಳಿಗೆ 100 ರೂ.ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.
    ಕುಶಾಲಿನಿ, ಬಡಾ ಗ್ರಾಪಂ ಪಿಡಿಒ

    ಹೇಮನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts