More

    ಪ್ರಶಾಂತ ದೇವರಿಂದ ಗರಗ ಪುರಪ್ರವೇಶ

    ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಪ್ರಶಾಂತ ದೇವರು ಭಾನುವಾರ ಪುರ ಪ್ರವೇಶ ಮಾಡಿದರು. ಇದರಿಂದ ವೀರಶೈವ ಪಂಚಮಸಾಲಿ ಮಠಾಧೀಶರ ಒಕ್ಕೂಟಕ್ಕೆ ಹಿನ್ನಡೆಯುಂಟಾಗಿದ್ದು, ದೇಸಾಯಿ ಕುಟುಂಬವನ್ನೇ ಟಾರ್ಗೆಟ್ ಮಾಡಿದ್ದ ಕೆಲವರಿಗೆ ಭಾರಿ ಮುಖಭಂಗ ಉಂಟಾಗಿದೆ.

    ಗರಗ ಕಲ್ಮಠಕ್ಕೆ ಜಂಗಮ ಸಮಾಜದವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬಾರದು. ಈ ಮಠಕ್ಕೆ ಹಿಂದಿನಿಂದಲೂ ಪಂಚಮಸಾಲಿ ಸಮಾಜದವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತ ಬರಲಾಗಿದೆ. ಆದರೆ, ಈಗ ಜಂಗಮ ಸಮಾಜದವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಕೆಲ ಲಿಂಗಾಯತ ಸ್ವಾಮೀಜಿಗಳು ಜು. 29ರಂದು ಶನಿವಾರ ದೇವಸ್ಥಾನದ ಟ್ರಸ್ಟ್ ಸದಸ್ಯರೊಂದಿಗೆ ಸಭೆ ನಡೆಸಿದ್ದರು. ಸಭೆ ಗೊಂದಲದಲ್ಲೇ ಮುಕ್ತಾಯವಾಗಿತ್ತು.

    ಟ್ರಸ್ಟ್ ಸದಸ್ಯರು ಹಾಗೂ ಗರಗ, ಹಂಗರಕಿ ಗ್ರಾಮದ ಭಕ್ತರು ಪ್ರಶಾಂತ ದೇವರನ್ನೇ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ನೇರವಾಗಿ ಹೇಳಿದ್ದರು. ಆ ಪ್ರಕಾರವಾಗಿ ಭಾನುವಾರ ಪೊಲೀಸ್ ಠಾಣೆ ಬಳಿ ಇರುವ ಜಯಕೀರ್ತಿ ಪ್ರೌಢಶಾಲೆಯಲ್ಲಿ ಸೇರಿದ ಗರಗ, ಹಂಗರಕಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತರು ಪ್ರಶಾಂತ ದೇವರನ್ನು ಗರಗ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಿದರು. ಪೂರ್ಣಕುಂಭ ಹೊತ್ತ ಸುಮಂಗಲೆಯರು, ಡೊಳ್ಳು, ಜಾಂಜ್, ಭಜನೆ ಮೇಳದವರು ಮೆರವಣಿಗೆಗೆ ಮೆರುಗು ತಂದರು. ದಾರಿಯುದ್ದಕ್ಕೂ ಭಕ್ತರು ಪ್ರಶಾಂತ ದೇವರ ಮೇಲೆ ಪುಷ್ಪ ವೃಷ್ಟಿ ಸುರಿಸಿದರು. ಇವರಿಗೆ ವಿವಿಧ ಮಠಾಧೀಶರು ಸಾಥ್ ನೀಡಿದರು.
    ಮೆರವಣಿಗೆಯು ಗರಗ ಮಡಿವಾಳೇಶ್ವರರ ಮಠಕ್ಕೆ ತಲುಪಿದ ನಂತರ ಪ್ರಶಾಂತ ದೇವರು ಕರ್ತೃ ಗದ್ದುಗೆಗೆ ನಮಸ್ಕರಿಸಿ ಆಗಮಿಸಿದ ಭಕ್ತರಿಗೆ ದರ್ಶನ ನೀಡಿದರು. ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ನೂರಾರು ಪೊಲೀಸರಿಂದ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಜಾತ್ಯತೀತ ಪರಂಪರೆ ಉಳಿಸಿ, ಬೆಳೆಸಿಕೊಂಡು ಬಂದಿರುವ ಗರಗ ಕಲ್ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಪುರ ಪ್ರವೇಶದ ಮೆರವಣಿಗೆಯಲ್ಲಿ ಪ್ರಶಾಂತ ದೇವರನ್ನು ಮುಸ್ಲಿಂ ಸಮಾಜದ ಹಿರಿಯರೊಬ್ಬರು ಹೂವಿನ ಮಾಲೆ ಹಾಕಿ ಮುಸ್ಲಿಂ ಸಂಪ್ರದಾಯದಂತೆ ಆಲಂಗಿಸಿಕೊಂಡು ಸ್ವಾಗತ ಕೋರಿದ್ದು, ಸರ್ವಧರ್ಮ ಭಾವೈಕ್ಯಕ್ಕೆ ಸಾಕ್ಷಿಯಾಯಿತು.

    ಮಠ ಎಂದರೆ ಭಕ್ತರು-ಸ್ವಾಮೀಜಿಗಳ ನಡುವಿನ ಸಂಬಂಧವಾಗಿದ್ದು, ಗುರು ಬೇಕೆಂದರೆ ಭಕ್ತರು ನಿರ್ಣಯ ಮಾಡುತ್ತಾರೆ. ನಾನು ಯಾವುದೇ ವಿವಾದಕ್ಕೆ ತಲೆ ಕೆಡಿಸಿಕೊಳ್ಳದೆ ನಮ್ಮ ಪೂಜೆ ಮತ್ತು ಅಧ್ಯಯನದ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ನನ್ನನ್ನು ವಿರೋಧ ಮಾಡುವವರಿಗೆ ಭಕ್ತರೇ ಉತ್ತರ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಎಲ್ಲ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಠ ಹಾಗೂ ಭಕ್ತರ ಉದ್ಧಾರಕ್ಕಾಗಿ ಕೆಲಸ ಮಾಡುತ್ತೇನೆ.
    I ಪ್ರಶಾಂತ ದೇವರು ಉತ್ತರಾಧಿಕಾರಿ ಕಲ್ಮಠ, ಗರಗ

    ಮಠ ಒಂದೇ ಕುಟುಂಬದ ಮಠವಲ್ಲ. ಒಂದು ವೇಳೆ ಒಂದೇ ಕುಟುಂಬಕ್ಕೆ ಸೇರಿದ್ದರೆ ಪ್ರಶಾಂತ ದೇವರ ಪುರಪ್ರವೇಶದಲ್ಲಿ ಇಷ್ಟು ಜನ ಪಾಲ್ಗೊಳ್ಳುತ್ತಿರಲಿಲ್ಲ. ಸಮಾಜದಲ್ಲಿ ಎಲ್ಲರದ್ದೂ ಒಂದೇ ನಿಲುವು ಇರುವುದಿಲ್ಲ. ಪ್ರತಿಷ್ಠಿತ ಮಠ ಬೆಳೆಯಲು ಸವಾಲುಗಳು ಇದ್ದೇ ಇರುತ್ತವೆ. ಈ ಹಿಂದೆ ಕೂಡ ಸಾಕಷ್ಟು ಸವಾಲುಗಳಿದ್ದವು. ಮುಂದೆಯೂ ಬರಬಹುದು. ಅವುಗಳಿಗೆ ಭಕ್ತರೇ ಉತ್ತರ ಕೊಡುತ್ತಾರೆ.

    I ಅಶೋಕ ದೇಸಾಯಿ, ಕಾರ್ಯಾಧ್ಯಕ್ಷ ಗರಗ ಕಲ್ಮಠ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts