More

    ಗಂಗೊಳ್ಳಿ ಜೆಟ್ಟಿ ಮರು ನಿರ್ಮಾಣ, ಎರಡು ವರ್ಷಗಳ ಬಳಿಕ ದುರಸ್ತಿ ಆರಂಭ

    ಗಂಗೊಳ್ಳಿ: ಬಹುನಿರೀಕ್ಷಿತ 12 ಕೋಟಿ ರೂ. ವೆಚ್ಚದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಹರಾಜು ಪ್ರಾಂಗಣದ ಸ್ಲಾೃಬ್ ಕುಸಿದು ಎರಡು ವರ್ಷಗಳ ಬಳಿಕ ಮರು ನಿರ್ಮಾಣ ಕಾರ್ಯ ಆರಂಭಗೊಂಡಿದೆ.
    ಕುಸಿದು ಬಿದ್ದಿರುವ ಜೆಟ್ಟಿಯನ್ನು ಒಡೆದು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಜೆಟ್ಟಿಯು 2018ರ ಅ.13ರಂದು ಕುಸಿದು ಬಿದ್ದಿದ್ದು, ಕಳೆದೆರಡು ವರ್ಷಗಳಿಂದ ಮೀನುಗಾರರ ಪ್ರಯೋಜನಕ್ಕೆ ಸಿಕ್ಕಿಲ್ಲ. ಅಲ್ಲದೆ ಎರಡನೇ ಹರಾಜು ಪ್ರಾಂಗಣ ಕೂಡ ಕುಸಿತದ ಭೀತಿಯಲ್ಲಿತ್ತು. ಹೀಗಾಗಿ ಹರಾಜು ಪ್ರಾಂಗಣದ ಮೇಲ್ಛಾವಣಿ ತೆರವುಗೊಳಿಸಿ ಯಾವುದೇ ಅನಾಹುತ ನಡೆಯದಂತೆ ಇಲಾಖೆ ಕ್ರಮಕೈಗೊಂಡಿತ್ತು. ಜೆಟ್ಟಿ ಮರುನಿರ್ಮಾಣ ಕಾರ್ಯ ಕೂಡಲೇ ಪ್ರಾರಂಭಿಸುವಂತೆ ಸ್ಥಳೀಯ ಮೀನುಗಾರರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದ್ದರು.

    ಜೆಟ್ಟಿಯ ಸಂಪೂರ್ಣ ಮರುನಿರ್ಮಾಣ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಶಿಫಾರಸ್ಸಿನಂತೆ ಅಂದಿನ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ 12 ಕೋ.ರೂ. ಮಂಜೂರಾತಿಗೆ 2020ರ ಫೆ.16ರಂದು ನಡೆದ ರಾಜ್ಯ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಟೆಂಡರ್ ಪ್ರಕ್ರಿಯೆ ೊಂದಲದಿಂದ ಕಾಮಗಾರಿ ಆರಂಭ ವಿಳಂಬವಾಗಿತ್ತು. ಮೀನುಗಾರಿಕಾ ಸಚಿವರ ಮಧ್ಯಸ್ಥಿಕೆಯಲ್ಲಿ ಶಾಸಕ ಸುಕುಮಾರ ಶೆಟ್ಟಿ, ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದಿಂದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ಫೆ.26ರಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾಮಗಾರಿಗೆ ಚಾಲನೆ ನೀಡಿದ್ದು, ಕಳೆದ ನಾಲ್ಕೈದು ದಿನಗಳಿಂದ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿದೆ.
    ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತದ ಬಗ್ಗೆ ವಿಜಯವಾಣಿ ನಿರಂತರ ವರದಿ ಪ್ರಕಟಿಸಿ ಇಲಾಖೆಯ ಸಚಿವರ, ಶಾಸಕರ, ಸಂಸದರ ಹಾಗೂ ಅಧಿಕಾರಿಗಳ ಗಮನ ಸೆಳೆದಿತ್ತು.

    150 ಮೀ. ಜೆಟ್ಟಿ ಮಾತ್ರ ಪ್ರಯೋಜನಕ್ಕೆ
    300ಕ್ಕೂ ಅಧಿಕ ಪರ್ಸಿನ್ ಬೋಟುಗಳು, 600ಕ್ಕೂ ಮಿಕ್ಕಿ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿದ್ದು, ಸಾವಿರಾರು ಮೀನುಗಾರರು ಅವಲಂಬಿಸಿರುವ ಬಂದರು ಇದಾಗಿದೆ. ಆದರೆ 405 ಮೀ. ಉದ್ದದ ಮೀನುಗಾರಿಕಾ ಜೆಟ್ಟಿಯಲ್ಲಿ ಈಗ ಕೇವಲ 150 ಮೀ. ಮಾತ್ರ ಮೀನುಗಾರರ ಉಪಯೋಗಕ್ಕೆ ಸಿಗುತ್ತಿದೆ. ಇದರಿಂದ ಬೋಟ್, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ.

    ಅಳಿವೆ ಪ್ರದೇಶದಲ್ಲಿ ಹೂಳು
    ಗಂಗೊಳ್ಳಿ ಅಳಿವೆಯಲ್ಲಿ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಹೂಳೆತ್ತುವ ಕಾಮಗಾರಿ ನಡೆಯದಿರುವುದರಿಂದ ಅಳಿವೆಯಲ್ಲಿ ದೋಣಿ ಹಾಗೂ ಬೋಟುಗಳು ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts