More

    ಗಂಗೊಳ್ಳಿಗೆ ಬೇಕಿದೆ ಶಾಶ್ವತ ಹೊರಠಾಣೆ

    ರಾಘವೇಂದ್ರ ಪೈ ಗಂಗೊಳ್ಳಿ
    ಜಿಲ್ಲೆಯ ಅತಿ ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಶಾಶ್ವತ ಪೊಲೀಸ್ ಹೊರಠಾಣೆ ಆರಂಭಿಸಬೇಕೆಂಬ ನಾಗರಿಕರ ಕೂಗು ದಿನೇ ದಿನೇ ಹೆಚ್ಚುತ್ತಿದ್ದು, ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಈವರೆಗೆ ಸ್ಪಂದಿಸದಿರುವುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 1994ರಲ್ಲಿ ಗಂಗೊಳ್ಳಿಯಲ್ಲಿ ನಡೆದ ಕೋಮುಗಲಭೆ ಬಳಿಕ ಇಲ್ಲಿನ ಖಾಸಗಿ ಕಟ್ಟಡದಲ್ಲಿ 1995ರ ಜೂನ್ 8ರಂದು ನೂತನ ಪೊಲೀಸ್ ಠಾಣೆ ಆರಂಭಿಸಲಾಗಿತ್ತು. ಎಂಟು ವರ್ಷ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಠಾಣೆಯನ್ನು 2003ರಲ್ಲಿ ಗಂಗೊಳ್ಳಿಯಿಂದ 6 ಕಿ.ಮೀ. ದೂರದ ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಿಸಲಾಗಿದ್ದ ಇಲಾಖೆಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಗಂಗೊಳ್ಳಿಯಿಂದ ಠಾಣೆಯನ್ನು ತ್ರಾಸಿಗೆ ಸ್ಥಳಾಂತರಿಸಿರುವುದನ್ನು ನಾಗರಿಕರು ತೀವ್ರವಾಗಿ ವಿರೋಧಿಸಿದ್ದರು. ಆರಂಭದಲ್ಲಿದ್ದ ತಾತ್ಕಾಲಿಕ ಪೊಲೀಸ್ ಹೊರಠಾಣೆಯಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದಿರುವುದರಿಂದ ಸಿಬ್ಬಂದಿಗೆ ಕಾರ್ಯನಿರ್ವಹಿಸುವುದು ಕಷ್ಟಕರವಾಗಿತ್ತು. ವಿವಿಧ ಕಡೆ ಭದ್ರತೆಗಾಗಿ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ನಿಯೋಜನೆ ಮಾಡುತ್ತಿರುವುದು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಸಿಬ್ಬಂದಿ ನಿಯೋಜಿಸಲಾಗುತ್ತಿದ್ದುದರಿಂದ ಹೊರಠಾಣೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿರಲಿಲ್ಲ. 2003ರಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಪಟ್ಟಂತೆ ಹೊರಠಾಣೆ ಸಮೀಪದಲ್ಲೇ ಘರ್ಷಣೆ ಸಂಭವಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಇಲಾಖೆ ಹೊರಠಾಣೆಯಲ್ಲಿ ಇಬ್ಬರು ಸಿಬ್ಬಂದಿ ನಿಯೋಜಿಸುತ್ತಿದೆ. 2014ರಲ್ಲಿ ನಡೆದ ಗಲಭೆ ಮುಂತಾದ ಘಟನೆಗಳ ಹಿನ್ನೆಲೆಯಲ್ಲಿ ಗಂಗೊಳ್ಳಿ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಮೂರು ಬೈಕುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. 2014ರಿಂದ ಗಂಗೊಳ್ಳಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನ ಕಾಯಂ ನೆಲೆಯೂರಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನ ಹಾಗೂ ಸಿಬ್ಬಂದಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಬದಲು ಗಂಗೊಳ್ಳಿಯಲ್ಲಿ ಶಾಶ್ವತ ಪೊಲೀಸ್ ಹೊರಠಾಣೆ ನಿರ್ಮಿಸುವುದು ಸೂಕ್ತ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಗಂಗೊಳ್ಳಿಯಲ್ಲಿ ಆರಂಭಿಸಲಾಗಿರುವ ಪೊಲೀಸ್ ಹೊರಠಾಣೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ದೂರು ನೀಡಲು ಅಥವಾ ಇನ್ನಿತರ ಸಮಸ್ಯೆಗಳಿಗೆ ದೂರದ ತ್ರಾಸಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ತುರ್ತು ಸಂದರ್ಭ 6 ಕಿ.ಮೀ. ದೂರದಿಂದ ಪೊಲೀಸರು ಗಂಗೊಳ್ಳಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಗಂಗೊಳ್ಳಿಯಲ್ಲಿ ಶಾಶ್ವತ ಸುಸಜ್ಜಿತ ಪೊಲೀಸ್ ಹೊರಠಾಣೆ ಆರಂಭಿಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇಲಾಖೆಯ ಅಧಿಕಾರಿಗಳು ಸೂಕ್ತ ಸರ್ಕಾರಿ ಸ್ಥಳದ ಕೊರತೆಯ ನೆಪವೊಡ್ಡಿ ನಾಗರಿಕರ ಬೇಡಿಕೆ ಈಡೇರಿಸಿಲ್ಲ. ಗಂಗೊಳ್ಳಿಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿದ್ದು, ಇವುಗಳನ್ನು ಗುರುತಿಸಿ ಸೂಕ್ತ ನಿವೇಶನದಲ್ಲಿ ಶಾಶ್ವತ ಪೊಲೀಸ್ ಠಾಣೆ ನಿರ್ಮಿಸಲು ಗೃಹ ಇಲಾಖೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗಬೇಕು. ಗಂಗೊಳ್ಳಿಯ ಜನರು ನೆಮ್ಮದಿಯ ಜೀವನ ನಡೆಸಲು ಇಲಾಖೆ ಸಹಕರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಗಂಗೊಳ್ಳಿಯಲ್ಲಿ ಶಾಶ್ವತ ಹೊರಠಾಣೆ ತೆರಯಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೇವೆ. ಈಗಿರುವ ಪೊಲೀಸ್ ಹೊರಠಾಣೆಯಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ಪದೇ ಪದೆ ನಡೆಯುವ ಸಣ್ಣಪುಟ್ಟ ಘರ್ಷಣೆ, ಅಕ್ರಮ ಚಟುವಟಿಕೆ ಮೊದಲಾದವುಗಳನ್ನು ನಿಯಂತ್ರಿಸಲು ಗಂಗೊಳ್ಳಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಅಗತ್ಯವಿದೆ. ಶಾಶ್ವತ ಪೊಲೀಸ್ ಹೊರಠಾಣೆ ಆರಂಭಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಸಹಕರಿಸಬೇಕು
    ಬಿ.ಸದಾನಂದ ಶೆಣೈ, ಮಾಜಿ ಮಂಡಲ ಪ್ರಧಾನರು ಗಂಗೊಳ್ಳಿ

    ಗಂಗೊಳ್ಳಿಯಲ್ಲಿ ಈಗ ಆರಂಭಿಸಲಾಗಿರುವ ಪೊಲೀಸ್ ಹೊರಠಾಣೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಹೊರಠಾಣೆಗೆ ಸಮರ್ಪಕ ಸಿಬ್ಬಂದಿ ನಿಯೋಜನೆ ಕೂಡ ಆಗುತ್ತಿಲ್ಲ. ಹೀಗಾಗಿ ಗಂಗೊಳ್ಳಿಯ ಶಾಶ್ವತ ಪೊಲೀಸ್ ಹೊರಠಾಣೆ ಆರಂಭಿಸಿ ಸಮರ್ಪಕ ಸಿಬ್ಬಂದಿ ನಿಯೋಜಿಸಲು ಸರ್ಕಾರ ಮುಂದಾಗಬೇಕು.
    ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts