More

    ಲಾಕ್​ಡೌನ್​ ತಂದ ನಲಿವು; ಸ್ವಚ್ಛ ಗಂಗಾ ನದಿಯಲ್ಲಿ ಎರಡು ಡಾಲ್ಫಿನ್​ಗಳ ಸ್ವಚ್ಛಂದ ವಿಹಾರ!

    ಮೇರಠ್​: ಮನುಷ್ಯ ತಾನೊಬ್ಬ ಬಹಳ ಬುದ್ಧಿವಂತ ಎಂದು ಭಾವಿಸಿದ್ದಾನೆ. ಇದೇ ಅಹಂಭಾವದಲ್ಲಿ ಆತ ನದಿ, ತೊರೆ, ಕೆರೆಗಳನ್ನು ಬಿಡದೆ ಎಲ್ಲ ಜಲಮೂಲಗಳನ್ನು ಕಲುಷಿತಗೊಳಿಸಿ ಗೆದ್ದಂತೆ ಬೀಗುತ್ತಿದ್ದಾನೆ. ಜಲಚರಗಳಿಗೆ ವಿಷವುಣಿಸಿ, ಅವುಗಳನ್ನು ಹಿಡಿದು ತಿಂದು ಅದೇ ವಿಷವನ್ನು ಜೀರ್ಣಿಸಿಕೊಳ್ಳುತ್ತಿದ್ದಾನೆ.

    ಆದರೆ, ವಿಶ್ವಮಾರಿಯಾಗಿ ಕಾಡುತ್ತಿರುವ ಕರೊನಾ ಸೋಂಕಿನಿಂದಾಗಿ ವಿಶ್ವಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಇದರಿಂದಾಗಿ ಬುದ್ಧಿವಂತ ಮಾನವ ಕಲುಷಿತಗೊಳಿಸಿದ್ದ ಗಾಳಿ, ನೀರು, ಜಲಮೂಲಗಳಲ್ಲೆವೂ ಸ್ವಚ್ಛವಾಗುತ್ತಿವೆ. ಅಲ್ಲದೆ, ಅಳಿವಿನಂಚಿನಲ್ಲಿದ್ದ ಪ್ರಾಣಿಗಳು ಕೂಡ ಸ್ವಚ್ಛಗೊಂಡಿರುವ ಜಲಮೂಲಗಳಲ್ಲಿ ಸಂತಸದಿಂದ ವಿಹರಿಸಿ ನಲಿಯುತ್ತಿವೆ.

    ಇದಕ್ಕೆ ಮೇರಠ್​ನಲ್ಲಿ ಹರಿಯುವ ಗಂಗಾ ನದಿಯೇ ಒಳ್ಳೆಯ ಉದಾಹರಣೆ. ಈ ಭಾಗದಲ್ಲಿ ಗಂಗಾ ನದಿ ಕುಡಿಯುವುದಿರಲಿ, ಕೈಕಾಲು ತೊಳೆಯಲು ಭಯಪಡುವಷ್ಟು ಕಲುಷಿತಗೊಂಡಿದೆ. ಹಾಗಾಗಿ, ಈ ನದಿಯಲ್ಲಿ ಈ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿದ್ದ ಗ್ಯಾಂಜೆಸ್​ ಡಾಲ್ಫಿನ್​ಗಳು ಅಳಿವಿನಂಚನ್ನು ತಲುಪಿದ್ದವು.

    ಆದರೆ ಲಾಕ್​ಡೌನ್​ನಿಂದಾಗಿ ಕಾರ್ಖಾನೆಗಳು ಹರಿಸುತ್ತಿದ್ದ ಅಪಾಯಕಾರಿ ತ್ಯಾಜ್ಯದ ಸೇರ್ಪಡೆ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದಲ್ಲಿ ಗಂಗಾ ನದಿ ಸ್ವಚ್ಛವಾಗಿದೆ. ಅಲ್ಲದೆ, ಮಾನವನ ಚಟುವಟಿಕೆಗಳು ಕ್ಷೀಣಿಸಿರುವುದರಿಂದ ನದಿಯ ಮೂಲ ನಿವಾಸಿಗಳಾದ ಗ್ಯಾಂಜೆಸ್​ ರಿವರ್​ ಡಾಲ್ಫಿನ್​ಗಳ ಜೋಡಿಯೊಂದು ನದಿಯ ತಟಕ್ಕೆ ಸನಿಹವಾಗಿ ಬಂದು ಸ್ವಚ್ಛಂದವಾಗಿ ವಿಹರಿಸುತ್ತಿದೆ.

    ಇದನ್ನು ಗಮನಿಸಿದ ಭಾರತೀಯ ಅರಣ್ಯ ಸೇವೆಗಳ (ಐಎಫ್​ಎಸ್​) ಅಧಿಕಾರಿ ಆಕಾಶ್​ ದೀಪ್​ ಬದ್ವಾನ್​, ಅದರ ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

    ಗ್ಯಾಂಜೆಸ್​ ರಿವರ್​ ಡಾಲ್ಫಿನ್​ಗಳು ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿಯಾಗಿದೆ. ಅದೊಮ್ಮೆ ಇವು ಗಂಗಾ-ಬ್ರಹ್ಮಪುತ್ರಾ-ಮೇಘನಾ ನದಿ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಈಗ ಅವು ಅಳಿವಿನಂಚನಲ್ಲಿವೆ. ಇವು ಸಿಹಿನೀರಿನಲ್ಲಿ ವಾಸಿಸುತ್ತವೆ. ಇವುಗಳ ಕಣ್ಣು ತುಂಬಾ ಸಣ್ಣದಾಗಿರುವ ಕಾರಣ, ಅವುಗಳಿಗೆ ಕಣ್ಣು ಕಾಣಿಸುವುದಿಲ್ಲ. ಇಂಥ ಡಾಲ್ಫಿನ್​ಗಳನ್ನು ಮೇರಠ್​ನ ಗಂಗಾ ನದಿಯಲ್ಲಿ ಕಂಡು ತುಂಬಾ ಸಂತೋಷವಾಯಿತು ಎಂದು ಟ್ವೀಟ್​ ಮಾಡಿದ್ದಾರೆ.

    ಕೇರಳದಲ್ಲಿ ಅರಮನೆಯನ್ನೇ ಕಟ್ಟಿದ ಅನಿವಾಸಿ ಭಾರತೀಯ ತೈಲೋದ್ಯಮಿ ಮೃತದೇಹ ತರಲು ಕುಟುಂಬಕ್ಕೆ ಇದೆಂಥ ಸಂಕಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts