ಗಂಗಾವತಿ: ಆನೆಗೊಂದಿಯ ಐತಿಹಾಸಿಕ ಪ್ರಸಿದ್ದ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಾಲಯ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಮೊದಲ ಹಂತದಲ್ಲಿ ಗರ್ಭಗುಡಿ ಕಾಮಗಾರಿ ಪೂರ್ಣಗೊಂಡಿದೆ.
ವಿಜಯನಗರ ಅರಸರ ಆಡಳಿತಾವಧಿಯ ವಾಲಿಪರ್ವತದಲ್ಲಿ ದೇಗುಲ ನಿರ್ಮಾಣವಾಗಿದ್ದು, ನೆಲಮಟ್ಟದಿಂದ 200 ಅಡಿ ಎತ್ತರದಲ್ಲಿದೆ. ಆನೆಗೊಂದಿ ರಾಜರ ಅರಾಧ್ಯದೈವವಾಗಿದ್ದು, ಸನಿಹದಲ್ಲಿ ಹಂಪಿಯಲ್ಲಿರುವಂತೆ ಆನೆಗಳ ಸಾಲು ಮಂಟಪವಿದೆ. ದೇವಾಲಯ ವ್ಯಾಪ್ತಿಯಲ್ಲಿ ವಾಲಿ ಪರ್ವತ, ಪುಷ್ಕರಣೆ ಇದ್ದು, ಇತ್ತೀಚೆಗೆ 1200 ಗೋವುಗಳನ್ನು ಹೊಂದಿದ ಗೋಶಾಲೆ ಮತ್ತು ಗೋ ಉಪ ಉತ್ಪನ್ನಒಳಗೊಂಡ ಕೈಗಾರಿಕಾ ಘಟಕ ಆರಂಭಿಸಲಾಗಿದೆ. 2021ರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಸಚಿವ ಬಿ.ಶ್ರೀರಾಮುಲು ನೇತೃತ್ವದ ಭಕ್ತರ ತಂಡ ಮುಂದಾಗಿದ್ದು, ಹಳೆಯ ದೇವಾಲಯವನ್ನು ಸಂಪೂರ್ಣ ತೆರವುಗೊಳಿಸಿ ನಿರ್ಮಿಸಲಾಗುತ್ತಿದೆ.
ವಿಜಯನಗರ ವಾಸ್ತುಶೈಲಿ: ದೇವಾಲಯವನ್ನು ವಿಜಯನಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಕಲ್ಲಿನಶಿಲೆಗಳನ್ನು ಮುರುಡೇಶ್ವರದಿಂದ ತರಿಸಲಾಗಿದೆ. ಗರ್ಭಗುಡಿ, ಪ್ರಾಂಗಣ, ಧ್ವಜಸ್ಥಂಬ, ರಾಜಗೋಪುರ ನಿರ್ಮಾಣದ ವಿನ್ಯಾಸ ರೂಪಿಸಲಾಗಿದೆ. ಶಿಲ್ಪಿ ಮೋಹನ ಮುರುಡೇಶ್ವರ ತಂಡ ಈಗಾಗಲೇ ಗರ್ಭಗುಡಿ ನಿರ್ಮಿಸಿದ್ದು, ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಮಗಾರಿಗಾಗಿ ಬೆಟ್ಟದಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಶೇ.40 ಕೆಲಸ ಮುಗಿದಿದ್ದು, ಉತ್ತರ ಭಾರತದ ದೇವಾಲಯಗಳ ಮಾದರಿಯಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಸಂಪ್ರದಾಯ ಮತ್ತು ಶಾಸ್ತ್ರೋಕ್ತ ರೀತಿಯಲ್ಲಿ ಗರ್ಭಗುಡಿ ನಿರ್ಮಾಣವಾಗಿದ್ದು, ನಿತ್ಯವೂ ಕುಂಕುಮಾರ್ಚನೆ, ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ನಿರ್ವಹಣೆಗೆ ಹೈರಾಣ: ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ಗೋಶಾಲೆ ನಿರ್ವಹಣೆಗೆ ಪ್ರತ್ಯೇಕ ಅನುದಾನವಿಲ್ಲ. ಮಾಸಿಕ 8 ಲಕ್ಷ ರೂ. ಬೇಕಿದ್ದು, ಭಕ್ತರೇ ಆಧಾರವಾಗಿದ್ದಾರೆ. 52 ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ನಿತ್ಯ 4 ಟನ್ ಸೆಗಣಿ ಮತ್ತು 2500 ಲೀ.ಗೆಂಜಲು (ಗೋಮೂತ್ರ) ಸಂಗ್ರಹವಾಗುತ್ತಿದೆ. ಮೇವು, ಚಿಕಿತ್ಸೆ, ಕಾರ್ಮಿಕರಿಗೆ ಸೌಲಭ್ಯ ಸೇರಿ ಇತರ ಖರ್ಚು ವೆಚ್ಚ ನಿರ್ವಹಿಸುವಲ್ಲಿ ದೇವಾಲಯ ಸಮಿತಿ ಹೈರಾಣಾಗಿದ್ದು, ಮೇವು ಬೆಳೆಯಲು ಜಿಲ್ಲಾಡಳಿತ ಭೂಮಿ ವ್ಯವಸ್ಥೆ ಮಾಡುತ್ತಿಲ್ಲ. ರೈತರನ್ನೇ ಅವಲಂಬಿಸಬೇಕಾಗಿದೆ. ಗೋಬರ ಗ್ಯಾಸ್ ತಯಾರಿಸಿ, ಕಡಿಮೆ ದರದಲ್ಲಿ ಗ್ರಾಮೀಣ ಜನರಿಗೆ ವಿತರಿಸುವ ಯೋಜನೆ ರೂಪಿಸಿದ್ದು, 6 ಕೋಟಿ ರೂ. ಮೊತ್ತದ ಘಟಕ ನಿರ್ಮಿಸಲು ಹಣದ ಕೊರತೆ ಎದುರಾಗಿದೆ.
ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ದೇವಿ ದರ್ಶನಕ್ಕಾಗಿ ಗರ್ಭಗುಡಿ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಆಡಳಿತ ಮಂಡಳಿ ಸಜ್ಜಾಗಿದ್ದು, ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ ನೇತೃತ್ವದಲ್ಲಿ ಫೆ.19ರಿಂದ 25ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.19ರಂದು ಕಲಶ ಸ್ಥಾಪನೆ, ಧ್ವಜಾರೋಹಣ, ಪುಣ್ಯಾವಾಸನ, ಫೆ.20 ಮತ್ತು 21ರಂದು ಗಣಪತಿ, ವಾಸ್ತು, ನವಗ್ರಹ, ರುದ್ರಹೋಮ, ಫೆ.22ರಂದು ಗಣಪತಿ ಮತ್ತು ಸುದರ್ಶನ ಹೋಮ, ಫೆ.23ರಂದು ಪವಮಾನ ಹೋಮ, ಫೆ.24ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಲಾಕರ್ಷಕ ಹೋಮ, ಪೂರ್ಣಾಹುತಿ, ಫೆ.25 ರಂದು ಗಣಪತಿ ಹೋಮ, 108 ಮಹಾರುದ್ರಾಕುಂಭಾಭಿಷೇಕ ಮತ್ತು ಮಹಾ ಚಂಡಿಯಾಗ ನಡೆಯಲಿದೆ.