More

    ಸಾಮಾನ್ಯಸಭೆಯ ನಡಾವಳಿ ಕಡತ ನಾಪತ್ತೆ: ಕೇಸ್ ದಾಖಲಿಸಲು ಮುಂದಾದ ನಗರಸಭೆ ಅಧ್ಯಕ್ಷೆ ಮಾಲಾಶ್ರೀ

    ಗಂಗಾವತಿ: ಸಾಮಾನ್ಯಸಭೆಯ ನಡಾವಳಿ ಕಡತವನ್ನೇ ನಾಪತ್ತೆ ಮಾಡಿರುವ ಅಧಿಕಾರಿಗಳು, ಆಡಳಿತ ಸದಸ್ಯರು, ವಿನಾಕರಣ ಆಡಳಿತದಲ್ಲಿ ನನ್ನ ಪತಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಆರೋಪಿಸುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ದೂರಿದರು.

    ನಗರಸಭೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಯಮದಂತೆ ಆಡಳಿತ ನಡೆಸುತ್ತಿದ್ದು, ಯಾವುದೇ ಒತ್ತಡಕ್ಕೆ ಮಣಿದು ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ನೀಡಿಲ್ಲ. ಕೆಲ ದಿನಗಳ ಹಿಂದೆ ನಡೆದ ಸಾಮಾನ್ಯಸಭೆ ನಡಾವಳಿ ಕಡತಕ್ಕೆ ಸಹಿ ಹಾಕಿ, ಕೇಸ್‌ವರ್ಕರ್‌ಗೆ ನೀಡಿದ್ದೇನೆ. ಆದರೆ ನಡಾವಳಿಗೆ ಸಹಿ ಮಾಡಿಲ್ಲವೆಂದು ಸುಳ್ಳು ಆರೋಪ ಹೊರಿಸುತ್ತಿದ್ದು, ಕಡತವೇ ನೀಡಿಲ್ಲ ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಹೇಳುತ್ತಿದ್ದಾರೆ. ಕಡತ ನಾಪತ್ತೆ ಕುರಿತು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

    ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಹೊಸದಾಗಿ ರೂಪಿಸಿರುವ ನಡಾವಳಿಗೆ ಸಹಿ ಹಾಕುವಂತೆ ಒತ್ತಡ ಹಾಕುತ್ತಿದ್ದು, ರುಜು ಮಾಡಿಲ್ಲ. ಸಾಮಾನ್ಯಸಭೆಯಲ್ಲಿ 24/7 ಕುಡಿವ ನೀರು ಮತ್ತು ಒಳಚರಂಡಿ ಯೋಜನೆ ನಗರಸಭೆ ಸುಪರ್ದಿಗೆ ಪಡೆಯಲು ವಿರೋಧಿಸಿದವರೇ ಈಗ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. 5ಕ್ಕಿಂತ ಹೆಚ್ಚು, ಅಧ್ಯಕ್ಷರ ಅಪ್ಪಣೆ ಮೇರೆಗೆ ವಿಷಯಗಳಿಗೆ ಅನುಮೋದನೆ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೆ ತಮ್ಮ ಅನುಕೂಲಕ್ಕೆ ತಕ್ಕಂತೆ 12ಕ್ಕೂ ಹೆಚ್ಚು ವಿಷಯಗಳಿಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.

    ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಯಾವುದೇ ಅನುದಾನ ಬಳಸುವಂತಿಲ್ಲ, ಚೆಕ್ ನೀಡುವಂತಿಲ್ಲ. ಆದರೆ, ನನ್ನ ಗಮನಕ್ಕಿಲ್ಲದೆ 1.30 ಕೋಟಿ ರೂ. ಮೊತ್ತವನ್ನು ಗುತ್ತಿಗೆ ಕಂಪನಿಗೆ ನೀಡಲಾಗಿದೆ. ಆಡಳಿತ ಪಕ್ಷದ ಕೆಲ ಸದಸ್ಯರು ಅಧಿಕಾರಿಗಳೊಂದಿಗೆ ಕೂಡಿಕೊಂಡು ಅನುಕೂಲಸಿಂಧು ಆಡಳಿತಕ್ಕೆ ಅವಕಾಶ ನೀಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಅವಿಶ್ವಾಸ, ಜಿಲ್ಲಾಡಳಿತಕ್ಕೆ ದೂರು ನೀಡಲು ಮುಂದಾಗುತ್ತಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಇದ್ದಷ್ಟು ದಿನ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಬಯಸಿದ್ದೇನೆ. ನಗರಸಭೆ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆ?, ಬೇಡವೆ ಎಂಬುದು ಇನ್ನೂ ನಿರ್ಧರಿಸಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts