More

    ಗಣೇಶ ಮೂರ್ತಿ ವಿಸರ್ಜನೆ ಅದ್ದೂರಿ: ಡಿಜೆ ಇಲ್ಲದೆ ಹಿಂದು ಮಹಾಮಂಡಳಿ ಮೆರವಣಿಗೆ

    ಗಂಗಾವತಿ: ನಗರದಲ್ಲಿ ಹಿಂದು ಮಹಾಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಗುರುವಾರ ಡಿಜೆ ಇಲ್ಲದೆ ವಿವಿಧ ಜಿಲ್ಲೆಗಳ ಕಲಾ ತಂಡಗಳ ಕುಣಿತದೊಂದಿಗೆ ಗುರುವಾರ ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು.

    ಪ್ರಸಕ್ತ ಸಾಲಿನಲ್ಲಿ ಭಾರತ ಮಾತೆ ಸ್ವರೂಪದ ಮೂರ್ತಿ ಪ್ರತಿಷ್ಠಾಪಿಸಿ, ಅಖಂಡ ಭಾರತ ಪರಿಕಲ್ಪನೆಯ ನಕಾಶೆ ವ್ಯವಸ್ಥೆಗೊಳಿಸಲಾಗಿತ್ತು. 15 ದಿನಗಳಲ್ಲಿ ಪ್ರತಿದಿನ ದಾಸವಾಣಿ, ಸುಗಮ ಸಂಗೀತ, ಭರತ ನಾಟ್ಯ, ಹಿಂದೂಸ್ತಾನಿ ಗಾಯನ, ಶಹನಾಯಿ ವಾದನ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿಸರ್ಜನೆ ದಿನ ಮಂಗಳೂರಿನ ಹುಲಿ ಕುಣಿತ, ಗೊಂಬೆ ಮೇಳ, ಬೆಳಗಾವಿಯ ಡೋಲಕ್, ಹುಬ್ಬಳ್ಳಿಯ ಕಲಾತಂಡ, ಕೀಲು ಕುದುರೆ ಕುಣಿತ, ಶಿವಪುರದ ಹೆಜ್ಜೆ ಮೇಳ, ಜಾಂಜ್ ಪಥಕ್, ಮಹಿಳೆಯರ ಡೊಳ್ಳು ಕುಣಿತ ಸೇರಿ 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಡಿಜೆ ಇಲ್ಲದೆ ಮೆರವಣಿಗೆ ನಡೆಸಲಾಯಿತು. ಹೀಗಾಗಿ ಕಲಾತಂಡಗಳನ್ನು ವೀಕ್ಷಿಸಲು ದ್ದು ರಸ್ತೆ ಬದಿ ಮಹಿಳೆಯರು ನಿಂತಿದ್ದರಿಂದ ಎಂಜಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.

    ಹೆಜ್ಜೆ ಹಾಕಿದ ಶಾಸಕ: ಗಣೇಶ ವಿಸರ್ಜನೆ ಕಾರಣ ಅಧಿವೇಶನ ಮೊಟಕುಗೊಳಿಸಿ ಆಗಮಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ವಿಜಯನಗರ ಜಿಲ್ಲೆ ಪ್ರಭಾರ ಸಿಂಗನಾಳ ವಿರೂಪಾಕ್ಷಪ್ಪ ಸೇರಿ ಇತರ ಮುಖಂಡರು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದರು. ಜಿಲ್ಲಾ ಎಸ್ಪಿ ಅರುಣಾಂಗ್ಷು ಗಿರಿ ನೇತೃತ್ವದ ಪೊಲೀಸರ ತಂಡ ಭದ್ರತೆ ಒದಗಿಸಿತ್ತು. ಮಂಡಳಿ ಪದಾಧಿಕಾರಿಗಳಾದ ಯಮನೂರಪ್ಪ ಚೌಡ್ಕಿ, ನಾಗರಾಜ್ ಚಳಗೇರಿ, ಶಿವಕುಮಾರ ಅದೋನಿ, ಸಂಗಮೇಶ ಅಯೋಧ್ಯಾ, ಕಾಶೀನಾಥ ಚಿತ್ರಗಾರ, ಚನ್ನಪ್ಪ ಮಳಗಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts