More

    ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಪೂರೈಸಿ

    ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿವ ನೀರು ಮತ್ತು ನೈರ್ಮಲೀಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸಿ ಮತ್ತು ಜಿಲ್ಲಾ ನೋಡಲ್ ಅಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಮಹಾಂತಗೌಡ ಪಾಟೀಲ್ ಇತರರಿದ್ದರು.

    ಜಿಲ್ಲಾ ನೋಡಲ್ ಅಧಿಕಾರಿ ಬಸವಣ್ಣೆಪ್ಪ ತಾಕೀತು ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ

    ಗಂಗಾವತಿ: ಕುಡಿವ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಬೇಕಿದ್ದು, ಪ್ರತಿಯೊಬ್ಬರಿಗೂ ಶುದ್ಧೀಕರಣ ಘಟಕದ ನೀರನ್ನೇ ಪೂರೈಸುವಂತೆ ಎಸಿ ಮತ್ತು ಜಿಲ್ಲಾ ನೋಡಲ್ ಅಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಸೂಚನೆ ನೀಡಿದರು.

    ನಗರದ ತಾಪಂ ಮಂಥನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕುಡಿವ ನೀರು ಮತ್ತು ನೈರ್ಮಲೀಕರಣ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಒದಗಿಸಬೇಕಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು. ವಾಂತಿ-ಭೇದಿ ಪ್ರಕರಣ ಪತ್ತೆಯಾಗದಂತೆ ಎಚ್ಚರಿಕೆವಹಿಸಬೇಕು. ನೈರ್ಮಲೀಕರಣಕ್ಕೆ ಆದ್ಯತೆ ನೀಡಬೇಕಿದ್ದು, ನೀರು ಪೂರೈಕೆಯ ಬೋರ್‌ವೆಲ್ ಬಳಿ ಹಾಗೂ ಪೈಪ್‌ಲೈನ್ ಮೂಲಕ ಮನೆಗೆ ಪೂರೈಕೆಯಾಗುವ ನೀರಿನ ಪರೀಕ್ಷೆ ನಡೆಸಿ ಕುಡಿಯಲು ಯೋಗ್ಯ ಇದೆಯೋ, ಇಲ್ಲವೋ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕೆಂದರು.

    ಜಾಗೃತಿ ಮೂಡಿಸಿ: ಕಾದಾರಿಸಿದ ನೀರನ್ನು ಕುಡಿಯಬೇಕಿದ್ದು, ತಾಲೂಕಿನ ಎಲ್ಲ ಶಾಲೆಗಳು, ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ಕಳಪೆ ರಸಗೊಬ್ಬರ ಪೂರೈಕೆಯಾಗದಂತೆ ಕ್ರಮವಹಿಸಬೇಕು. ಮಳೆ ಬರದಿದ್ದರೆ ಮೇವಿನ ಕೊರತೆ ಉಂಟಾಗಬಹುದಾಗಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

    ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಮುಂದಿನ 10 ದಿನಗಳಲ್ಲಿ ಮಳೆ ಆಗದಿದ್ದರೆ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಲಿದೆ ಎಂಬುದನ್ನು ಪಟ್ಟಿ ಮಾಡಿ. ಕುಡಿವ ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನೀರು ಪೋಲಾಗದಂತೆ ಜನರಲ್ಲಿ ಜಾಗೃತಿ ಮೂಡಿಸಿ ಎಂದರು. ತಾಪಂ ಇಒ ಮಹಾಂತಗೌಡ ಪಾಟೀಲ್, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಅರಣ್ಯಾಧಿಕಾರಿ ಎಂ.ಶ್ರೀನಿವಾಸ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts