More

    ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ; ಗಂಗಾವತಿ-ಹುಲಿಗಿ ಸಂಪರ್ಕ ರಸ್ತೆಯಲ್ಲಿ ಟ್ರಾಫಿಕ್ ಜಾಮ್

    ಗಂಗಾವತಿ: ಕೊನೆಯ ಶ್ರಾವಣ ಶನಿವಾರದ ನಿಮಿತ್ತ ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬಂದಿದ್ದರಿಂದ ಗಂಗಾವತಿ ಮತ್ತು ಹುಲಿಗಿ ಸಂಪರ್ಕ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

    ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು, ಬೆಟ್ಟದಲ್ಲಿ ವಿಶೇಷ ಪೂಜೆ ಮತ್ತು ಹೋಮ ವ್ಯವಸ್ಥೆ ಮಾಡಲಾಗಿತ್ತು. ನಿರಂತರ ಹನುಮಾನ ಚಾಲೀಸ್ ಪಾರಾಯಣ ಹಮ್ಮಿಕೊಂಡಿದ್ದು, ಉತ್ತರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶದಿಂದ ಬಂದಿದ್ದ ಭಕ್ತರು ಒಂದು ಕ್ಷಣವೂ ಬಿಡದಂತೆ ನಿರಂತರ ಪಾರಾಯಣದಲ್ಲಿ ಪಾಲ್ಗೊಂಡಿದ್ದರು. ಭಕ್ತರ ನೂಕುನುಗ್ಗಲು ನಿಯಂತ್ರಿಸಲು ಬೆಟ್ಟ ಹತ್ತಲು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಪ್ರವೇಶ ದ್ವಾರದಿಂದ ಹೋದವರೂ ಚಿಕ್ಕರಾಂಪುರ ಬಳಿ ವಾಪಾಸ್ಸಾಗಬೇಕಿತ್ತು. ಇದರಿಂದ ವಾಹನ ಪಾರ್ಕಿಂಗ್ ಮಾಡಿದ ಜಾಗ 2 ಕಿ.ಮೀ.ದೂರದಲ್ಲಿದ್ದರಿಂದ ಜನ ಪರದಾಡಿದರು. ಚಿಕ್ಕರಾಂಪುರ ವೇದ ಪಾಠಶಾಲೆ ಆವರಣದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

    ವ್ಯಾಪಾರ ಜೋರು: ಎಲ್ಲೆಂದರಲ್ಲಿ ಪ್ರವಾಸಿಗರ ವಾಹನ ನಿಲುಗಡೆಯಿಂದ ನಂದಯ್ಯಕತ್ರಿಯಿಂದ ಸಣಾಪುರ ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, 4 ಗಂಟೆಗಳ ಕಾಲ ವಾಹನಗಳು ನಿಂತಲ್ಲಿ ನಿಂತಿದ್ದವು. ಗ್ರಾಮೀಣ ಠಾಣೆ ಪಿಐ ಎನ್.ಮಂಜುನಾಥ ಮತ್ತು ಪಿಎಸೈ ಶಾರದಮ್ಮ ರಸ್ತೆಯಲ್ಲಿ ನಿಂತು, ವಾಹನಗಳ ಸಂಚಾರಕ್ಕೆ ಅನವು ಮಾಡಿಕೊಟ್ಟರೂ, ಬೈಕ್‌ಗಳ ಬೇಕಾಬಿಟ್ಟಿ ಓಡಾಟದಿಂದ ರೋಸಿಹೋಗಿದ್ದರು. ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಆಂಧ್ರದಿಂದ ಹೆಚ್ಚಿನ ಭಕ್ತರು ಬಂದಿದ್ದರು. ರಸ್ತೆ ಬದಿಯ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಬೆಟ್ಟದ ಮೇಲೆ ಸೆಲ್ಫಿಗಾಗಿ ಯುವಕ, ಯುವತಿಯರು ಮುಗಿಬಿದ್ದಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು. ವಾರದ ಹಿಂದೆ ಚಿರತೆಯೊಂದು ಬೆಟ್ಟದ ಬಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊದೆಗಳತ್ತ ಹೋಗುವ ಪ್ರೇಮಿಗಳಿಗೆ ಪೊಲೀಸರು ಮೇಲಿಂದ ಮೇಲೆ ಜಾಗೃತಿ ಮೂಡಿಸುತ್ತಿದ್ದರು.

    ಕೊನೇ ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಭಕ್ತರ ಸಂಖ್ಯೆ ಹೆಚ್ಚಿದ್ದು, ಯಾವುದೇ ತೊಂದರೆಯಾಗದಂತೆ ದೇವರ ದರುಶನ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ವಾಹನಗಳು ಬಂದಿದ್ದರಿಂದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಲು ಅವಕಾಶವಿದ್ದಿಲ್ಲ. ಹೀಗಾಗಿ ಬೀಳು ಬಿದ್ದ ಹೊಲಗಳಲ್ಲೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

    | ಮಂಜುನಾಥ ಹಿರೇಮಠ, ಕಂದಾಯ ನಿರೀಕ್ಷಕ ಹಾಗೂ ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ

    ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ; ಗಂಗಾವತಿ-ಹುಲಿಗಿ ಸಂಪರ್ಕ ರಸ್ತೆಯಲ್ಲಿ ಟ್ರಾಫಿಕ್ ಜಾಮ್
    ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟದ ರಸ್ತೆಯಲ್ಲಿ ವಾಹನಗಳ ಯರ‌್ರಾಬಿರ‌್ರಿ ಓಡಾಟದಿಂದ ಟ್ರಾಫಿಕ್ ಜಾಮ್ ಆಗಿರುವುದು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts