More

    ಮಿತಿ ಮೀರಿದೆ ಮರಳು ಮಾಫಿಯಾ!

    ಸರ್ಕಾರಿ ಕಾಮಗಾರಿಗೆ ಮರಳು ಸಿಗದಿದ್ದರೂ, ಖಾಸಗಿ ಕಾಮಗಾರಿಗಳಿಗೆ ಯಥೇಚ್ಚ ದೊರೆಯುತ್ತಿದೆ. ಮಾನಿಟರಿಂಗ್ ಕಮಿಟಿ ಕಣ್ಣೆದುರಿಗೆ ಮರಳು ಸಾಗಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗನೊಬ್ಬ ನಿಯಂತ್ರಿಸುವ ಬಗ್ಗೆ ತಾಲೂಕಾಡಳಿತಕ್ಕೆ ಗೊತ್ತಿದೆ. ನದಿ ತೀರದ ಬಳಿ ಮರಳು ಸಂಗ್ರಹಣೆ ಜತೆಗೆ ಫಿಲ್ಟರ್ ಮರಳು ಮಾಫಿಯ ಮಿತಿ ಮೀರಿದೆ. ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಫಿಲ್ಟರ್ ಮರಳು ತಯಾರಿಕೆ ನಿರಂತರವಾಗಿದೆ. ತುಂಗಭದ್ರಾ ನದಿ ಬತ್ತಿ ಹೋಗುವ ಮುನ್ನವೇ ಮರಳು ಖಾಲಿ ಮಾಡುವ ತಂಡ ದಂಡೆ ಮೇಲೆ ಬೀಡಾರ ಹೂಡಿದೆ. ಈ ಕುರಿತು ವಿಜಯವಾಣಿಯ ಗಂಗಾವತಿ ತಾಲೂಕು ವರದಿಗಾರ ವೀರಾಪುರ ಕೃಷ್ಣ ನೀಡಿದ ವರದಿ ಇಲ್ಲಿದೆ.

    ಗಂಗಾವತಿ: ಮರಳು ವಿಲೇವಾರಿಯ ಸ್ಟಾಕ್ ಟೆಂಡರ್ ವಿಳಂಬದಿಂದ ಮರಳು ಕಳ್ಳರಿಗೆ ವರದಾನವಾಗಿದ್ದು, ರಾಯಲ್ಟಿ ಇಲ್ಲದೆ ಕೋಟ್ಯಂತರ ರೂ. ಬೆಲೆಬಾಳುವ ಮರಳು ಹೊರ ಜಿಲ್ಲೆಗೆ ರಾತ್ರೋರಾತ್ರಿ ಸಾಗಣೆಯಾಗುತ್ತಿದೆ.

    ಭತ್ತದ ಖಣಜ ಎಂದು ಖ್ಯಾತಿ ಪಡೆದಿದ್ದ ತಾಲೂಕಿನಲ್ಲಿ ಮರಳು ಮಾಫಿಯಾ ಮಿತಿ ಮೀರಿದ್ದು, ಮಾನಿಟರಿಂಗ್ ಕಮಿಟಿಗೂ ಮರಳು ಕಳ್ಳರು ಬೆಲೆ ನೀಡುತ್ತಿಲ್ಲ. ತಂಡ ನಾಮಕೇವಾಸ್ತೆ ಆಗಿದ್ದು, ಒಪ್ಪಂದಕ್ಕೆ ಪಿಡಿಒ ಮತ್ತು ಆರ್‌ಐಗಳೇ ಟಾರ್ಗೆಟ್. ಪೊಲೀಸ್ ಗಮನಕ್ಕಿದ್ದರೂ ಸಾಗಣೆ ಮಾತ್ರ ನಿಂತಿಲ್ಲ. ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ತಂಡ ಪೈಪೋಟಿ ಮೇಲೆ ಮರಳು ಕಳವು ಮಾಡುತ್ತಿದ್ದು, ರಾಜಧಾನಿ ಸೇರಿ ಹೊರಜಿಲ್ಲೆಗಳಿಗೆ ರಾತ್ರಿ ವೇಳೆ ಸಾಗಿಸಲಾಗುತ್ತಿದೆ.

    ಎಲ್ಲೆಲ್ಲಿ ಮರಳು: ತಾಲೂಕಿನ ಚಿಕ್ಕಜಂತಕಲ್, ನಾಗನಹಳ್ಳಿ, ವಿನೋಬಾನಗರ, ದೇವಘಾಟ್, ಮಲ್ಲಾಪುರ, ಗೂಗಿಬಂಡಿಕ್ಯಾಂಪ್ ಬಳಿ ತುಂಗಭದ್ರಾ ನದಿ ತೀರದಲ್ಲಿ ಎತ್ತಿನ ಬಂಡಿಯಿಂದ ಮರಳು ಸಂಗ್ರಹಿಸಲಾಗುತ್ತಿದೆ. ಹಿನ್ನೀರು ಪ್ರದೇಶದ ಉಳೇನೂರು, ಮುಷ್ಟೂರು, ಅಯೋಧ್ಯಾ, ನಂದಿಹಳ್ಳಿ, ಕಕ್ಕರಗೋಳ, ಕುಂಟೋಜಿ, ಬರಗೂರಿನಲ್ಲಿ ಟ್ರ್ಯಾಕ್ಟರ್ ಮೂಲಕ, ಆನೆಗೊಂದಿ, ಸಣಾಪುರ ಭಾಗದಲ್ಲಿ ಹರಿಗೋಲು ಮೂಲಕ ಮರಳು ಸ್ಟಾಕ್ ಮಾಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಬಯಲು ಜಾಗದಲ್ಲಿ ಮರಳು ಸಂಗ್ರಹಿಸುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲ.

    ದರ ನಿಗದಿ: ತಾಲೂಕಿನಲ್ಲಿ 8 ಸ್ಟಾಕ್ ಯಾರ್ಡ್‌ಗಳಿದ್ದು, ಪ್ರತಿ 2.50 ಕ್ಯೂಬಿಕ್ ಮೀಟರ್‌ಗೆ 2000ರೂ. ನಿಗದಿಪಡಿಸಿತ್ತು. ಟೆಂಡರ್ ಮೂಲಕ ವಿಲೇವಾರಿ ಹಿನ್ನೆಲೆಯಲ್ಲಿ ಪರವಾನಗಿ ಬೇಕಿತ್ತು. ಕಳೆದ ವರ್ಷದಿಂದ ಟೆಂಡರ್ ವಿಳಂಬವಾಗಿದ್ದು, ಪರವಾನಗಿ ನೀಡುತ್ತಿಲ್ಲ. ಪ್ರತಿ ಟ್ರ್ಯಾಕ್ಟರ್‌ಗೆ 4600 ರೂ.ಗಳಿಂದ 5000ರೂ. ದರ ನಿಗದಿಯಾದರೂ ರಾಯಲ್ಟಿ ಕಟ್ಟುತ್ತಿಲ್ಲ. ಮರಳು ನೀತಿ ಗಾಳಿಗೆ ತೂರಿದ್ದು, ತಿಂಗಳಿಗೊಮ್ಮೆ ಟ್ರ್ಯಾಕ್ಟರ್ ಹಿಡಿಯುವ ಪೊಲೀಸರಿಗೆ ರಾತ್ರಿ ಸಾಗಿಸುವ ಟಿಪ್ಪರ್‌ಗಳು ಕಾಣುತ್ತಿಲ್ಲ.

    ಅವೈಜ್ಞಾನಿಕ ಸಂಗ್ರಹಣೆ
    ಅವೈಜ್ಞಾನಿಕ ರೀತಿಯಲ್ಲಿ ಮರಳು ಸಂಗ್ರಹಿಸುತ್ತಿದ್ದು, ನದಿ ತೀರದಲ್ಲಿ ಅಪಾಯದ ಗುಂಡಿ ಸೃಷ್ಟಿಯಾಗಿವೆ. ನವಲಿ, ಉಳೇನೂರು, ಮುಷ್ಟೂರು ಬಳಿ ಬಲಿ ಪಡೆದ ಪ್ರಕರಣ ದಾಖಲಾದರೂ ತಾಲೂಕಾಡಳಿತ ಎಚ್ಚೆತ್ತುಕೊಂಡಿಲ್ಲ. ಮರಳು ಸಾಗಣೆಗೆ ಕೃಷಿ ಭೂಮಿಯಲ್ಲಿ ಅಡ್ಡದಾರಿ ಮಾಡಿಕೊಂಡಿದ್ದು, ಗ್ರಾಮ ದೇವತೆಗಳಿಗೆ ಚಂದಾ ನೀಡುವ ಮೂಲಕ ರಹದಾರಿ ಮಾಡಿಕೊಂಡಿದ್ದಾರೆ. ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಅವೈಜ್ಞಾನಿಕ ಗುಂಡಿಗಳಿಂದ ನೀರಿಗೆ ಇಳಿಯಲು ಹೆದರುತ್ತಿದ್ದಾರೆ.

    ಅಪಾಯಕಾರಿ ಸಂಗ್ರಹಣೆ
    ನೀರಿನ ರಭಸ ಲೆಕ್ಕಿಸದೆ ಕೊಪ್ಪರಿಕೆಯಲ್ಲಿ ಮರಳು ಸಂಗ್ರಹಿಸುತ್ತಿದ್ದು, ಜೀವದ ಹಂಗು ತೊರೆದು ಮರಳು ಸಾಗಣೆಯಲ್ಲಿ ಕೂಲಿಕಾರರು ತೊಡಗಿಸಿ ಕೊಂಡಿದ್ದಾರೆ. ಸಿಮೆಂಟ್ ಚೀಲದ ಮೂಲಕ ಎತ್ತಿನಬಂಡಿ ಯಲ್ಲಿ ಸಾಗಿಸಲಾಗುತ್ತಿದ್ದು, ಮರಳು ಕಳ್ಳರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಮರಳು ಸಂಗ್ರಹಿಸು ತ್ತಿದ್ದರಿಂದ ನಿಯಂತ್ರಣಕ್ಕೆ ಕಮಿಟಿ ಸದಸ್ಯರು ಹೆದರುತ್ತಿದ್ದು, ಇದನ್ನೇ ಕೆಲ ಸಂಘಟನೆಗಳು ದಂಧೆಯನ್ನಾಗಿ ಮಾಡಿಕೊಂಡಿವೆ.

    ತಾಲೂಕಾಡಳಿತ ಕೈ ಜೋಡಿಸಿರುವ ಸಾಧ್ಯತೆ
    ಚಿಕ್ಕಜಂತಲ್, ವಿನೋಭಾನಗರ, ನಾಗನಹಳ್ಳಿ ಬಳಿ ಜಾತ್ರೆ ರೀತಿಯಲ್ಲಿ ಮರಳು ಸಂಗ್ರಹಿಸುತ್ತಿದ್ದರೂ ಪೊಲೀಸರ ಗಮನಕ್ಕಿಲ್ಲವಂತೆ. ಸ್ಥಳೀಯರಿಗೆ ಮರಳು ಮರೀಚಿಕೆಯಾದರೆ, ಹೊರ ಜಿಲ್ಲೆಗಳಿಗೆ ಯಥೇಚ್ಚವಾಗಿ ದೊರೆಯುತ್ತಿದೆ. ಪ್ರಕರಣ ದಾಖಲಾಗುವ ಮುನ್ನವೇ ರಾಜೀಸಂಧಾನವಾಗುತ್ತಿರುವುದು ತಾಲೂಕಾಡಳಿತ ಕೈ ಜೋಡಿಸಿರುವ ಸಾಧ್ಯತೆಗಳಿವೆ.

    ಮರಳು ಸಾಗಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ರಹಸ್ಯ ಕಾರ್ಯಚರಣೆ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ನಿಗಾವಹಿಸುವಂತೆ ಮಾನಿಟರಿಂಗ್ ಕಮಿಟಿಗೆ ಸೂಚನೆ ನೀಡಲಾಗಿದೆ.
    | ಎಂ.ರೇಣುಕಾ, ತಹಸೀಲ್ದಾರ್, ಗಂಗಾವತಿ

    ಮರಳು ಸಾಗಣೆಯ ಮೇಲೆ ನಿಗಾವಹಿಸಿದ್ದು, ಪೊಲೀಸರ ತಂಡ ಗಸ್ತು ತಿರುಗುತ್ತಿದೆ. ಪರವಾನಗಿ ಇಲ್ಲದೆ, ಸಾಗಿಸುವ ಬಗ್ಗೆ ಗಮನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುವುದು.
    | ಆರ್.ಎಸ್.ಉಜ್ಜನಕೊಪ್ಪ, ಡಿವೈಎಸ್ಪಿ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts