More

    ತುಂಗಭದ್ರಾ ನದಿ ತೀರದಲ್ಲಿ ಪುಷ್ಕರೋತ್ಸವಕ್ಕೆ ಅದ್ದೂರಿ ಚಾಲನೆ

    ಗಂಗಾವತಿ: 12 ವರ್ಷಕ್ಕೊಮ್ಮೆ ಬರುವ ಪುಷ್ಕರೋತ್ಸವಕ್ಕೆ ತಾಲೂಕಿನ ಆನೆಗೊಂದಿ ಬಳಿ ತುಂಗಭದ್ರಾ ನದಿ ತೀರದಲ್ಲಿ ಶುಕ್ರವಾರ ಚಾಲನೆ ನೀಡಲಾಗಿದ್ದು, ಡಿ.1 ರವರೆಗೂ ಮುಂದುವರಿಯಲಿದೆ.

    ದೇವತೆಗಳು ಪುಷ್ಕರ ಸಂದರ್ಭದಲ್ಲಿ ನದಿ ಮೂಲಕ ಸಂಚರಿಸುವರು ಎಂಬ ನಂಬಿಕೆಯಿದ್ದು, ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ನದಿಗೆ ಪುಷ್ಕರೋತ್ಸವ ಸಂಭ್ರಮ ಒದಗಿಬಂದಿದೆ. ಚೆನ್ನೈನ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಮತ್ತು ತುಂಗಭದ್ರಾ ಪುಷ್ಕರಣ ಕುಂಭ ಮೇಳ ಸರ್ವಧರ್ಮ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ್ದು, ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಗ್ರಾಮದಿಂದ ಕುಂಭ ಮೆರವಣಿಗೆಯೊಂದಿಗೆ ಚಿಂತಾಮಣಿಯ ಹೋಮ ಕುಂಡಲಕ್ಕೆ ಆಹ್ವಾನಿಸಿದ್ದು, ನದಿ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

    ಅದ್ದೂರಿ ವ್ಯವಸ್ಥೆ: ಚೆನ್ನೈ ಮೂಲದ ಶಂಕರಚಾರ್ಯ ಪೀಠದ ಋತ್ವಿಜರ ತಂಡ ಚಿಂತಾಮಣಿಗೆ ಆಗಮಿಸಿದ್ದು, ವಿಶೇಷ ಹೋಮ ಕುಂಡಲದ ವ್ಯವಸ್ಥೆ ಮಾಡಲಾಗಿದೆ. ನಿತ್ಯವೂ ಹೋಮ ನಡೆಯಲಿದ್ದು, ಮೊದಲ ದಿನದಂದು ದೇವತಾ ಆಹ್ವಾನ ಹೋಮ ನೆರವೇರಿಸಲಾಯಿತು. ಸಂಜೆ ವೇಳೆ ತುಂಗಾರತಿ ವ್ಯವಸ್ಥೆ ಮಾಡಲಾಗಿದ್ದು, ನದಿ ತೀರದ ಖೂಳಮಂಟಪದ ಮೇಲೆ ಪುಷ್ಕರೋತ್ಸವ ಪೂರ್ಣಗೊಳ್ಳುವವರೆಗೂ ತುಂಗಾರತಿ ಮಾಡಲಾಗುತ್ತಿದೆ.

    ಪುಷ್ಕರದ ಮೊದಲ ದಿನದಂದು ಪಾಲ್ಗೊಂಡಿದ್ದ ಶಾಸಕ ಪರಣ್ಣಮುನವಳ್ಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಷ್ಕರೋತ್ಸವಕ್ಕೆ ಚಾಲನೆ ನೀಡಿದರು. ರಾಜ ವಂಶಸ್ಥರಾದ ರಾಜಾ ಕೃಷ್ಣದೇವರಾಯ, ರಾಣಿ ರತ್ನಕುಮಾರಿ, ಮುಖಂಡರಾದ ಡಿ.ಎಂ.ಸುರೇಶ, ಪದ್ಮನಾಭ, ಸುಮಂತ ಕುಲ್ಕರ್ಣಿ, ಮಂಜುನಾಥಗೌಡ, ಚಂದ್ರಶೇಖರ್, ರಾಜೇಶ್ವರಿ ಸುರೇಶ, ಹರಿಹರ ದೇವರಾಯ ಇತರರಿದ್ದರು.

    ಚಿಕ್ಕಜಂತಕಲ್: ತಾಲೂಕಿನ ಚಿಕ್ಕಜಂತಕಲ್‌ನಲ್ಲಿ ತುಂಗಭದ್ರಾ ಪುಷ್ಕರೋತ್ಸವಕ್ಕೆ ಶಾಸಕ ಬಸವರಾಜ ದಢೇಸುಗೂರು ಚಾಲನೆ ನೀಡಿದರು. ಸ್ಥಳೀಯರೊಂದಿಗೆ ಆಯೋಜಿಸಿರುವ ಪುಷ್ಕರೋತ್ಸವ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಪುಷ್ಕರೋತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದು, ಆರೋಗ್ಯದತ್ತ ಗಮನಹರಿಸಿ ಎಂದರು.

    ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಮುಖಂಡರಾದ ನಾಗರಾಜ ಬಿಲ್ಗಾರ್, ಸ್ವರಾಜ್, ಸತ್ಯನಾರಾಯಣ ಇತರರಿದ್ದರು.

    ತುಂಗಭದ್ರಾ ನದಿ ತೀರದಲ್ಲಿ ಪುಷ್ಕರೋತ್ಸವಕ್ಕೆ ಅದ್ದೂರಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts