More

    ಮರಳು ಗಣಿಗಾರಿಕೆ; 5 ಅಧಿಕೃತ.. 50ಕ್ಕೂ ಹೆಚ್ಚು ಅನಧಿಕೃತ!

    ಕೇಶವಮೂರ್ತಿ ವಿ.ಬಿ. ಹಾವೇರಿ

    ಜಿಲ್ಲೆಯಲ್ಲಿ ತುಂಗಭದ್ರಾ ನದಿ ತೀರದ ಅಕ್ರಮ ಮರಳು ದಂಧೆ ಬಗೆದಷ್ಟೂ ಬಟಾಬಯಲಾಗುತ್ತಿದೆ. ನದಿ ತೀರದಲ್ಲಿ ಅಧಿಕೃತವಾಗಿ ಮರಳು ತೆಗೆದು ಮಾರಾಟ ಮಾಡಲು ಸರ್ಕಾರದಿಂದ ಅನುಮತಿ ಪಡೆದಿರುವುದು ಕೇವಲ ಐದು ಸ್ಥಳಗಳಲ್ಲಿ ಮಾತ್ರ. ಆದರೆ, ಐವತ್ತಕ್ಕೂ ಅಧಿಕ ಸ್ಥಳಗಳಲ್ಲಿ ಅನಧಿಕೃತ ಮರಳು ದಂಧೆಯ ಅಡ್ಡೆಗಳು ತಲೆ ಎತ್ತಿವೆ.

    ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಸರ್ಕಾರದ ನಿಯಮಾವಳಿ ಪ್ರಕಾರ ಹಣ ಪಾವತಿಸಿ ಮರಳು ಗಣಿಗಾರಿಕೆ ಮಾಡಲು ಅರ್ಹ ಕಂಪನಿಗಳಿಗೆ ಅನುಮತಿ ನೀಡಲಾಗುತ್ತದೆ. ಹೀಗೆ ಅನುಮತಿ ಪಡೆದಿರುವ ಕಂಪನಿಗಳು ಬೆರಳೆಣಿಕೆಯಷ್ಟು ಇದ್ದರೂ, ಅನಧಿಕೃತ ದಂಧೆಕೋರರು ಹಳ್ಳಿ ಹಳ್ಳಿಗಳಲ್ಲಿ ಮರಳು ದಂಧೆ ನಡೆಸುತ್ತಿದ್ದಾರೆ.

    ಜಿಲ್ಲೆಯ ತುಂಗಭದ್ರಾ ನದಿ ವ್ಯಾಪ್ತಿಯ ಐದು ಸ್ಥಳಗಳಲ್ಲಿ ಮರಳು ಗಣಿಗಾರಿಕೆ ಮಾಡಲು ಹಟ್ಟಿ ಗೋಲ್ಡ್ ಮೈನ್ ಲಿಮಿಟೆಡ್ (ಎಚ್​ಜಿಎಂಎಲ್) ಅಧಿಕೃತ ಪರವಾನಗಿ ಪಡೆದುಕೊಂಡ ಏಕೈಕ ಕಂಪನಿಯಾಗಿದೆ. ರಾಣೆಬೆನ್ನೂರ ತಾಲೂಕಿನ ಚಿಕ್ಕಕುರವತ್ತಿ, ಬೇಲೂರಿನ ಎರಡು ಕಡೆಗಳಲ್ಲಿ, ಚಂದಾಪುರ ಹಾಗೂ ಹಾವೇರಿ ತಾಲೂಕು ಗಳಗನಾಥದಲ್ಲಿ ಒಂದು ಸೇರಿ ಐದು ಕಡೆ ಮಾತ್ರ ಅಧಿಕೃತ ಮರಳಿನ ಪಾಯಿಂಟ್​ಗಳಿವೆ. ಈ ಸ್ಥಳದಲ್ಲಿ ಮಾತ್ರ ಮರಳುಗಾರಿಕೆಗೆ ಸರ್ಕಾರ ಅನುಮತಿಸಿದೆ. ಇವುಗಳಿಗೆ 2027-28ರವರೆಗೆ ಅನುಮತಿ ದೊರೆತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

    ಅಧಿಕೃತ ಮರಳಿನ ಪಾಯಿಂಟ್​ಗಳ ಪಕ್ಕದಲ್ಲೇ ಅನಧಿಕೃತ ಮರಳು ಸಂಗ್ರಹ ತಾಣಗಳು ತೆರೆದುಕೊಂಡಿವೆ. ಯಾರಾದರೂ ಪ್ರಶ್ನಿಸಿದರೆ ನಮ್ಮದು ಅಧಿಕೃತ ಎಂದು ಹೇಳಿಕೊಂಡು ಓಡಾಡುತ್ತಾರೆ. ಆಶ್ಚರ್ಯ ಎಂದರೆ ಹಲವು ಗ್ರಾಮಗಳ ಜನರಿಗೆ ಇದು ಅಕ್ರಮ ಎಂದು ತಿಳಿಯುವುದೇ ಇಲ್ಲ. ಅಷ್ಟೊಂದು ವ್ಯವಸ್ಥಿತವಾದ ಜಾಲವನ್ನು ದಂಧೆಕೋರರು ಸೃಷ್ಟಿಸಿಕೊಂಡಿದ್ದಾರೆ.

    ತುಂಗಭದ್ರಾ ನದಿ ತೀರದಲ್ಲಿ ಐದು ಬ್ಲಾಕ್​ಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಜಿಲ್ಲೆಯ ವಿವಿಧೆಡೆ ಹರಿದಿರುವ ವರದಾ, ಧರ್ವ, ಕುಮದ್ವತಿ ನದಿಗಳಲ್ಲಿ ಎಲ್ಲಿಯೂ ಮರಳು ತೆಗೆಯಲು ಅನುಮತಿ ಇಲ್ಲ. ಆದರೆ, ಅಲ್ಲಿಯೂ ಹಲವೆಡೆ ಅಕ್ರಮ ದಂಧೆ ನಡೆಯುತ್ತಿದೆ. ಸರ್ಕಾರ ಜಿಲ್ಲಾಡಳಿತದ ಮೂಲಕ ಇದಕ್ಕೆಲ್ಲ ಬ್ರೇಕ್ ಹಾಕಬೇಕಿದೆ.

    ಗ್ರಾಮಸ್ಥರ ಮೇಲೆ ದರ್ಪ

    ಅಕ್ರಮ ಮರಳು ಗಣಿಗಾರಿಕೆ ಕುರಿತು ಯಾರಾದರೂ ಪ್ರಶ್ನಿಸಿದರೆ ಅಂಥವರ ಮೇಲೆ ದಂಧೆಕೋರರು ದರ್ಪ ತೋರುತ್ತಾರೆ. ಹೇಗಾದರೂ ಮಾಡಿ ಅವರನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸುತ್ತಾರೆ. ಕೆಲವೊಮ್ಮೆ ನೇರಾನೇರ ಧಮ್ಕಿ, ಹಲ್ಲೆ ಮಾಡುತ್ತಾರೆ. ಹೀಗೆ ಬೃಹತ್ ಜಾಲವನ್ನೇ ಸೃಷ್ಟಿಸಿಕೊಂಡಿರುವ ಅಕ್ರಮ ದಂಧೆಕೋರರ ಹಾವಳಿಗೆ ಜಿಲ್ಲಾ ಮರಳು ಕಾರ್ಯಪಡೆ (ಟಾಸ್ಕ್​ಫೋರ್ಸ್) ಸಮಿತಿ ಶಾಶ್ವತವಾಗಿ ಬ್ರೇಕ್ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಿಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ನದಿ ಪರಿಸರಕ್ಕೆ ಹಾನಿ

    ಸರ್ಕಾರದಿಂದ ಅನುಮತಿ ನೀಡಿದಾಗ ಪರಿಸರಕ್ಕೆ ಹಾನಿಯಾಗದಂತೆ ನಿಯಮಾವಳಿ ರೂಪಿಸಲಾಗಿರುತ್ತದೆ. ಗುತ್ತಿಗೆದಾರರು ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅವರ ಲೈಸೆನ್ಸ್ ರದ್ದಾಗುತ್ತದೆ. ಆದರೆ, ಅನಧಿಕೃತ ದಂಧೆಕೋರರಿಗೆ ಯಾವುದೇ ನಿಯಮದ ಹಂಗಿಲ್ಲ. ತಮಗಿಷ್ಟ ಬಂದಂತೆ ನದಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts