More

    ಗಂಗಾ ಕಲ್ಯಾಣಕ್ಕೂ ಲಾಕ್‌ಡೌನ್ ಬರೆ

    ಬೆಳಗಾವಿ: ಬರಡು ನೆಲದಲ್ಲಿ ಗಂಗೆಯನ್ನು ಉಕ್ಕಿಸಬೇಕೆಂಬ ಆಸೆಯಿಂದ ಫಲಾನುಭವಿ ಅನ್ನದಾತರು ಪಡುತ್ತಿರುವ ಭಗೀರಥ ಪ್ರಯತ್ನಕ್ಕೆ ಲಾಕ್‌ಡೌನ್ ಬರೆ ಎಳೆದಿದೆ. ಪರಿಣಾಮವಾಗಿ ಕೊಳವೆಬಾವಿ ಕೊರೆಸಬೇಕೆನ್ನುವ ಇಚ್ಛೆಗೆ ‘ಕಾಲಭಾಗ್ಯ’ ಕೂಡಿಬರುತ್ತಿಲ್ಲ.

    ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಗಾಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಕೊರೆಸಿಕೊಳ್ಳಲು ಅವಕಾಶ ಕಲ್ಪಿಸಿತ್ತು.

    2018-19ನೇ ಸಾಲಿನಲ್ಲಿ ಸೌಲಭ್ಯಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಟೆಂಡರ್ ಪ್ರಕ್ರಿಯೆ ವಿಳಂಬ, ಪ್ರವಾಹ, ಮಳೆ, ಲಾಕ್‌ಡೌನ್‌ನಿಂದಾಗಿ ಸಕಾಲಕ್ಕೆ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ.

    ಬೆಳಗಾವಿ ವಿಭಾಗ ವ್ಯಾಪ್ತಿಯ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಹಾವೇರಿ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಗೆ 2,719 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, 1.5 ವರ್ಷದ ಅವಧಿಯಲ್ಲಿ 1,740 ಫಲಾನುಭವಿಗಳಿಗೆ ಸೌಲಭ್ಯ ಲಭಿಸಿದ್ದು, 978 ಫಲಾನುಭವಿಗಳು ಸೌಲಭ್ಯ ಲಭಿಸುವ ದಿನಕ್ಕಾಗಿ ನಿತ್ಯ ಕಾಯುವಂತಾಗಿದೆ.

    ತಪ್ಪದ ಅಲೆದಾಟ: ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗಂಗಾಕ ಲ್ಯಾಣ ಯೋಜನೆಗಾಗಿ ಅರ್ಜಿ ಸಲ್ಲಿಸಿ ವರ್ಷಗಳ ಕಾಲ ಕಾಯಬೇಕು. ಸರ್ಕಾರದಿಂದ ಒಪ್ಪಿಗೆ ದೊರೆತ ಬಳಿಕ ಟೆಂಡರ್ ಕರೆದು ಕೊಳವೆಬಾವಿ ಕೊರೆಸಲು 5-6 ತಿಂಗಳು ಬೇಕು. ಬಳಿಕ ವಿದ್ಯುತ್ ಸಂಪರ್ಕಕ್ಕಾಗಿ ತಿಂಗಳುಗಟ್ಟಲೇ ಅಲೆದಾಡಬೇಕು. ಒಟ್ಟಿನಲ್ಲಿ ನೀರಾವರಿ ಸೌಲಭ್ಯ ಪಡೆಯಬೇಕೆಂದರೆ ಕನಿಷ್ಠ ಒಂದು ವರ್ಷವಾದರೂ ಕಚೇರಿಗಳಿಗೆ ಲಾನುಭವಿಗಳು ಅಲೆದಾಡಬೇಕು.

    ಸದ್ಯ ಸಕಾರ್ರವು 2018ರ ಡಿಸೆಂಬರ್‌ನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಿದೆ. 2019ರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭದಲ್ಲಿಯೇ ಅತಿವೃಷ್ಟಿ ಸಂಭವಿಸಿದ್ದರಿಂದ ಕೈ ಬಿಡಲಾಯಿತು. ಈ ವರ್ಷ ಲಾಕ್‌ಡೌನ್ ಇನ್ನಿತರ ಅನಾನುಕೂಲತೆಗಳಿಂದ ಮತ್ತೆ ಯೋಜನೆ ಕೈಬಿಡಲಾಗಿದೆ. ಮಳೆಗಾಲ ಮುಗಿದ ತಕ್ಷಣ ಕೊಳವೆಬಾವಿ ಕೊರೆಯಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.

    ಅತಿವೃಷ್ಟಿ ಮತ್ತು ಲಾಕ್‌ಡೌನ್ ಉಂಟಾಗಿದ್ದರಿಂದ ಬೆಳಗಾವಿ ವಿಭಾಗದ 7 ಜಿಲ್ಲೆಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಸಲು ಸಮಸ್ಯೆ ಉಂಟಾಗಿರುವುದು ನಿಜ. ಈ ಸಂಬಂಧ ಎಲ್ಲ ನಿಗಮಗಳ ವ್ಯವಸ್ಥಾಪಕರು ಮತ್ತು ಗುತ್ತಿಗೆದಾರರ ಸಭೆ ಕರೆದು ಮಳೆಗಾಲ ಮುಗಿದ ತಕ್ಷಣ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ.
    | ಪ್ರಕಾಶ ಹರಗಾಪುರ ಉಪ ಪ್ರಧಾನ ವ್ಯವಸ್ಥಾಪಕ, ಅಭಿವೃದ್ಧಿ ನಿಗಮ, ಬೆಳಗಾವಿ ವಿಭಾಗ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts