More

    ನೀರು ಬಂದರೂ ಬೆಳಗಲಿಲ್ಲ ಬದುಕು ; ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ್ದ ರೈತರ ಬೇಸರ ; ಮೂರು ವರ್ಷವಾದರೂ ಮೋಟಾರ್ ನೀಡದ ಇಲಾಖೆ

    ತಿಪಟೂರು: ಗಂಗಾಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಲ್ಲಿ ನೀರು ಬಂದರೂ ರೈತರ ಕಲ್ಯಾಣ ಮಾತ್ರ ಇನ್ನೂ ಆಗಿಲ್ಲ. ಕಾರಣ, ಫಲಾನುಭವಿಗಳಿಗೆ 3 ವರ್ಷಗಳಾದರೂ ಪಂಪು, ಮೋಟಾರು ಪೂರೈಸಿಲ್ಲ. 2018-19ನೇ ಸಾಲಿನ ಫಲಾನುಭವಿಗಳಿಗೇ ಇನ್ನೂ ಸವಲತ್ತು ಸಿಕ್ಕಿಲ್ಲದಿರುವುದು ದುರಂತವೇ ಸರಿ. ಮೋಟಾರು-ಪಂಪು ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಲಾನುಭವಿಗಳು ಸಂಬಂಧಪಟ್ಟ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ.

    ತಾಲೂಕಿನಲ್ಲಿ 3 ಹಾಗೂ ಜಿಲ್ಲೆಯಲ್ಲಿ 36 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಬಾವಿ ಕೊರೆಸಿ ಮೂರು ವರ್ಷಗಳಾದರೂ ಮೋಟಾರು, ಪಂಪು ನೀಡಿಲ್ಲ. ಕಳೆದ ವರ್ಷ ಕರೊನಾ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಆಗಿಲ್ಲ ಎಂಬ ಉತ್ತರ ಕೇಳಿಬಂದಿತ್ತು. ಈ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉತ್ಪನ್ನದ ಕೊರತೆಯಿಂದ ಗುಜರಾತಿನಿಂದ ಬರಬೇಕಿದ್ದ ಮೋಟಾರು, ಪಂಪು ಪೂರೈಕೆ ಆಗದೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

    ಹಿಂದೆ ಸರಿಯುತ್ತಿರುವ ಗುತ್ತಿಗೆದಾರರು : ಆ.7ರಂದು ಮಧುಗಿರಿ ತಾಲೂಕಿನ 12 ಮಂದಿ ಹಿಂದುಳಿದ ವರ್ಗದವರಿಗೆ ಪಂಪು-ಮೋಟಾರು ವಿತರಣಾ ಕಾಯಕ್ರಮದಲ್ಲಿ ಹೆಸರೇ ಗೊತ್ತಿಲ್ಲದ ಕಳಪೆ ದರ್ಜೆಯ ಸಲಕರಣೆಗಳನ್ನು ವಿತರಿಸಲು ಶಾಸಕ ವೀರಭದ್ರಯ್ಯ ಒಪ್ಪದೆ ವಾಪಸ್ ಕಳುಹಿಸಿದ್ದರು. ಜನರಿಗೆ ಟೋಪಿ ಹಾಕುವುದು ಸಾಧ್ಯವಿಲ್ಲ ಎಂದರಿತ ಗುತ್ತಿಗೆದಾರರು ಒಬ್ಬೊಬ್ಬರೇ ಪೂರೈಕೆಯಿಂದ ಹಿಂದೆ ಸರಿಯುತ್ತಿದ್ದಾರೆ.

    ಗುತ್ತಿಗೆ ಪಡೆದಿದ್ದ ಗುಜರಾತಿನ ಸ್ವಸ್ತಿಕ್ ಕಂಪನಿ ಕಾರ್ಮಿಕರ ಸಮಸ್ಯೆ, ಘಟಕ ನವೀಕರಣ ಇನ್ನಿತರ ಸಮಸ್ಯೆ ಹೇಳಿಕೊಂಡು ಗುತ್ತಿಗೆ ಪೂರೈಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಒಂದು ಪ್ಯಾಕೇಜಿಗೆ ಪುನಃ ಟೆಂಡರ್ ಕರೆದರೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಏಷಿಯನ್ ಇಂಜಿನಿಯರ್ಸ್‌ ಎಂಬ ಪೂರೈಕೆದಾರರಿಗೆ ಎಲ್-1 ದರದಲ್ಲಿ ಪಂಪು-ಮೋಟಾರು ಪೂರೈಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮನವೊಲಿಸಿದ್ದಾರೆ. ಬಹುಶಃ ಮಾಸಾಂತ್ಯಕ್ಕೆ ಸಲಕರಣೆಗಳು ಪೂರೈಕೆ ಆಗಲಿದೆ.
    ಸೈಯದ್ ಅಬುಕಲಾಂ, ಕೆಎಂಡಿಸಿ ಜಿಲ್ಲಾ ನಿರ್ದೇಶಕ

    ಕೊಳವೆ ಬಾವಿಯಲ್ಲಿ ಉತ್ತಮ ನೀರು ಬಂದಿತ್ತು. ಒಂದೂವರೆ ಎಕರೆ ಜಮೀನಿನಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಆಸೆಯಲ್ಲಿದ್ದೆ, ಕೊಳವೆ ಬಾವಿ ಕೊರೆದು ಮೂರು ವರ್ಷವಾದರೂ ಸಲಕರಣೆ ಪೂರೈಸಿಲ್ಲ. ಕೊರೆಸಿದಾಗ ಇದ್ದಷ್ಟು ನೀರು ಈಗ ಇದೆಯೋ, ಇಲ್ಲವೊ ಎಂಬ ಭಯ ಕಾಡುತ್ತಿದೆ.
    ಅಲ್ಪಸಂಖ್ಯಾತ ವರ್ಗದ ಫಲಾನುಭವಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts