More

    ಗಣಪನ ಮೂರ್ತಿಗೆ ಕರೊನಾ ವಿಘ್ನ

    ವಿಜಯವಾಣಿ ವಿಶೇಷ, ಚಿತ್ರದುರ್ಗ: ಶ್ರಾವಣ ಮಾಸ ಸಮೀಪಿಸುತ್ತಿರುವ ಈ ಸಂದರ್ಭ ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ, ಗಣೇಶಚೌತಿ ಹೀಗೆ ಹಬ್ಬಗಳ ಸಾಲು ಎದುರಾಗುತ್ತಿದೆ.
    ಆದರೆ, ಯುಗಾದಿಯಿಂದ ಪ್ರಾರಂಭವಾಗಿರುವ ಕರೊನಾ ತಕರಾರು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಂಥ ಹೊತ್ತಿನಲ್ಲಿ ಗಣೇಶನ ಹಬ್ಬಕ್ಕೆ ಗಣೇಶ ಮೂರ್ತಿ ತಯಾರಿಕೆ ಬೇಕೆ, ಬೇಡವೇ ಎಂಬ ಪ್ರಶ್ನೆಗಳ ನಡುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಇನ್ನೂ ಬೇಡಿಕೆ ಸಲ್ಲಿಕೆ ಆರಂಭವಾಗಿಲ್ಲ.

    ಜಿಲ್ಲೆ ಅನೇಕ ವರ್ಷಗಳ ಕಾಲ ಬರವನ್ನೇ ಹಾಸಿ ಹೊದ್ದಿದ್ದರೂ ಹಬ್ಬ, ಹರಿದಿನ, ಸಂಪ್ರದಾಯ ಸಂಸ್ಕೃತಿಗಳಾ ಚರಣೆಗೆ ಜಿಲ್ಲೆ ಜನರೆಂದೂ ಹಿಂದೇಟು ಹೊಡೆದಿಲ್ಲ. ಆದರೆ, ಈ ವರ್ಷದ ಸಂದರ್ಭವೇ ಬೇರೆ, ಲಾಕ್‌ಡೌನ್ ಹೊಡೆತದಿಂದ ಜನರಿನ್ನೂ ಚೇತರಿಸಿಕೊಂಡಿಲ್ಲ. ಆದರೂ ಆಚರಣೆ ಕೈ ಬಿಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

    ಇಂಥ ಸನ್ನಿವೇಶದಲ್ಲೂ ವೈಯಕ್ತಿಕ ಆರಾಧನೆಗೆ ಯಾವುದೇ ವಿಘ್ನ ಎದುರಾಗದೆಂಬ ಅಚಲ ನಂಬಿಕೆಯೊಂದಿಗೆ ವೈವಿಧ್ಯ ಗಣೇಶಮೂರ್ತಿಗಳ ತಯಾರಿಕೆ ಕಾರ್ಯ ಜಿಲ್ಲೆಯ ವಿವಿಧೆಡೆ ನಡೆಯುತ್ತಿದೆ.

    ಕರೊನಾ ಗಣಪ: ಕರೊನಾ ಸೋಂಕನ್ನು ಮಣಿಸಿರುವ ಗಣೇಶ, ಆಯೋಧ್ಯೆ ತೀರ್ಪಿನ ಹಿನ್ನೆಲೆ ಶ್ರೀರಾಮನ ಅವತಾರದ ಗಣೇಶ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿನ ಗಣೇಶ ಹೀಗೆ ನಾನಾ ವಿಶಿಷ್ಟ ಗಳೊಂದಿಗೆ ದೊಡ್ಡಪೇಟೆಯಲ್ಲಿ ಗಣಪತಿಗಳು ಸಿದ್ಧವಾಗುತ್ತಿವೆ.

    ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಖಚಿತ
    ನಗರದ ಹಿಂದು ಮಹಾಗಣಪತಿ ಸಮಿತಿ ಗಣೇಶ ಪ್ರತಿಷ್ಠಾಪನೆ ಮಾಡಿದರೂ ಶೋಭಾಯಾತ್ರೆ ಹಮ್ಮಿಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಂತೂ ಅಸಾಧ್ಯ. ಆದರೆ ಜಿಲ್ಲಾಡಳಿತ ಎಷ್ಟು ದಿನ ಅನುಮತಿ ಕೊಡಲಿದೆ ಎಂಬುದನ್ನು ನೋಡಬೇಕಿದೆ. ದೇವಾಲಯಗಳ ದರ್ಶನಕ್ಕೆ ಅವಕಾಶವಿರುವುದರಿಂದ ಪ್ರತಿಷ್ಠಾಪನೆ, ಧಾರ್ಮಿಕ ವಿಧಿಗಳಿಗೆ ಅಡ್ಡಿ ಆಗದು. ಜಿಲ್ಲಾಡಳಿತ ಜತೆ ಸಮಾಲೋಚನೆ ನಡೆಸಲಾಗುವುದು. ಮಾರ್ಗಸೂಚಿಗಳನ್ನೂ ಗಮನಿಸ ಬೇಕಾಗುತ್ತದೆ ಎನ್ನುತ್ತಾರೆ ಗಣಪತಿ ಸಮಿತಿ ಅಧ್ಯಕ್ಷ ಬದ್ರಿನಾಥ್.

    ಆನ್‌ಲೈನ್ ಪ್ರಸಾರ
    ಜನರನ್ನು ಒಂದೆಡೆ ಸೇರಿಸಲಾಗದ ಕಾರಣ ಸಾಂಸ್ಕೃತಿಕ, ಉಪನ್ಯಾಸ ಕಾರ‌್ಯಕ್ರಮಗಳ ನೇರ ಹಾಗೂ ಚಿತ್ರೀಕರಿಸಿದ ಆನ್‌ಲೈನ್ ಪ್ರಸಾರಕ್ಕಾಗಿ ಸಾಮಾಜಿಕ ಜಾಲತಾಣಗಳ ಬಳಕೆಗೆ ಚಿಂತನೆ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗಣಹೋಮ, ವರುಣಾ ಹೋಮ ಗಳೊಂದಿಗೆ ಕರೊನಾ ಅಬ್ಬರದ ಸಂದರ್ಭ ಮೃತ್ಯಂಜಯ ಹೋಮವನ್ನೂ ಏರ್ಪಡಿಸಲು ಹಿಂದು ಮಹಾಗಣಪತಿ ಸಮಿತಿ ಮುಂದಾಗಿದೆ.

    ದೇವರ ಮೇಲೆ ಭಾರ ಹಾಕಿ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ಈ ಹೊತ್ತಿಗೆ ಬಹಳಷ್ಟು ಆರ್ಡ್‌ರ್ ಬರಬೇಕಿತ್ತು. ಈ ಬಾರಿ ದೊಡ್ಡ ಮೂರ್ತಿಗಳಿಗಿಂತ ಚಿಕ್ಕವುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ.
    | ಅಜ್ಜಯ್ಯ ಸಿದ್ದೇಶ್ ವಿಗ್ರಹ ತಯಾರಕರು, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts