More

    ಗಗನಕುಸುಮದಂತಾದ ಗಾಂಧಿನಗರ ಕಾಂಕ್ರೀಟ್ ರಸ್ತೆ

    ಧಾರವಾಡ: ಇಲ್ಲಿಯ ಗಾಂಧಿನಗರ ಮುಖ್ಯರಸ್ತೆ ಕಾಂಕ್ರೀಟೀಕರಣಕ್ಕೆ ಸಿಆರ್​ಎಫ್ ಅನುದಾನ ಬಿಡುಗಡೆಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಅದ್ದೂರಿ ಕಾರ್ಯಕ್ರಮ ಮಾಡಿ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಇದೆಲ್ಲ ಆಗಿ ವರ್ಷ ಕಳೆದಿದೆ. ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ರಸ್ತೆ ಸಂಪೂರ್ಣ ಹದಗೆಟ್ಟು ಧೂಳು ಏಳುತ್ತಿದ್ದು, ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಗರದ ನವಲೂರ ರಸ್ತೆ- ಯಾಲಕ್ಕಿ ಶೆಟ್ಟರ್ ಕಾಲನಿ- ಗಾಂಧಿನಗರ- ತೇಜಸ್ವಿನಗರ- ಕಲ್ಯಾಣನಗರವರೆಗೆ ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅಡಿ 10 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ 2019ರ ನವೆಂಬರ್​ನಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಗುತ್ತಿಗೆ ಅವಧಿ 11 ತಿಂಗಳಾಗಿತ್ತು. ಆ ಅವಧಿ ಮುಗಿದಿದೆ. ಕೆಲಸವೇ ಆಗಿಲ್ಲ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರಸ್ತೆ ಕಾಮಗಾರಿ ಕೈ ಬಿಟ್ಟಿರುವ ಗುತ್ತಿಗೆದಾರ, ಇತ್ತೀಚೆಗೆ ಚರಂಡಿ ಕಾಮಗಾರಿ ಆರಂಭಿಸಿದ್ದಾರೆ. ಅದೂ ಅರೆಬರೆಯಾಗಿದ್ದು, ರಸ್ತೆ ನಿರ್ಮಾಣ ಎಂದೋ ಎನ್ನುವಂತಾಗಿದೆ.

    ಸ್ಥಳೀಯರಿಂದ ನಿರಂತರ ಪ್ರತಿಭಟನೆ: ವಾರ್ಡ್ ಸಂಖ್ಯೆ 19ರ ವ್ಯಾಪ್ತಿಯ ಗಾಂಧಿನಗರದಲ್ಲಿ ಅಭಿವೃದ್ಧಿ ಕಾಮಗಾರಿ ಅಷ್ಟಕ್ಕಷ್ಟೇ. ಒಳರಸ್ತೆಗಳಲ್ಲಿ ದಶಕದ ಹಿಂದೆ ಹಾಕಿದ್ದ ಡಾಂಬರ್ ಕಿತ್ತು ಹೋಗಿದ್ದು, ಗುಂಡಿಮಯವಾಗಿವೆ. ಇಡೀ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹಾಳಾದ ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ. ಪಾಲಿಕೆ, ಶಾಸಕ, ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಕಾಂಕ್ರೀಟ್ ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸ್ಥಳೀಯರು ಕಳೆದ ತಿಂಗಳು ಸೈಕಲ್ ಜಾಥಾ ನಡೆಸಿ ಪ್ರತಿಭಟಿಸಿದ್ದರು. ಭೇಟಿ ನೀಡಿದ್ದ ಶಾಸಕ ಅರವಿಂದ ಬೆಲ್ಲದ, ಕಾಮಗಾರಿ ಆರಂಭಕ್ಕೆ ಡಿ. 4ರ ಗಡುವು ನೀಡಿದ್ದರು. ಅದೂ ಮುಗಿದಿದೆ. ಮಳೆ ನಿಂತ ನಂತರ ಅಲ್ಲಲ್ಲಿ ಗುಂಡಿ ಮುಚ್ಚುವ ಕಾಮಗಾರಿ ನಡೆದಿದ್ದರೂ, ವಿಪರೀತ ಧೂಳು ಇಲ್ಲಿನ ಜನರ ಜೀವ ಹಿಂಡುತ್ತಿದೆ.

    ಸಂಬಂಧಿ ಮನೆ ಮುಂದೆ ಕಾಂಕ್ರೀಟ್ ರಸ್ತೆ: ಗುಂಡಿ ಮುಚ್ಚಿ ರಸ್ತೆ ದುರಸ್ತಿಗಾಗಿ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ವಿಚಿತ್ರ ಎಂದರೆ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗುವ 1ನೇ ಅಡ್ಡ ರಸ್ತೆಯ ಸಮುದಾಯ ಭವನ ರಸ್ತೆಗೆ ಸುಸಜ್ಜಿತ ಕಾಂಕ್ರೀಟ್ ಮಾಡಿಸಿದ್ದಾರೆ. ಅದಷ್ಟೇ ಜಾಗಕ್ಕೆ ಕಾಂಕ್ರೀಟ್ ಆಗಿರುವುದು ಜನರ ಕಣ್ಣು ಕುಕ್ಕುವಂತೆ ಮಾಡಿರುವುದು ಸಹಜ.

    ಸ್ಪಂದಿಸದ ಪಾಲಿಕೆ: ಗಾಂಧಿನಗರ ವಲಯ 12ರ ವ್ಯಾಪ್ತಿಯಲ್ಲಿದ್ದು, ಏನೇ ಕೆಲಸ ಇದ್ದರೂ ನಿವಾಸಿಗಳು ಕಲಾಭವನಕ್ಕೆ ಹೋಗಬೇಕು. ಪ್ರತಿಷ್ಠಿತ ದೊಡ್ಡ ಪ್ರದೇಶವಿದ್ದರೂ ಹು-ಧಾ ಒನ್ ಕೇಂದ್ರ ಇಲ್ಲ. ಗಾಂಧಿನಗರದಲ್ಲಿ ಪಾಲಿಕೆ ಅಧೀನದ ಕಟ್ಟಡವಿದ್ದರೂ ಹಾಳು ಬಿದ್ದಿದೆ. ಕೂಡಲೇ ವಲಯ ಕಚೇರಿಯನ್ನು ಗಾಂಧಿನಗರಕ್ಕೆ ಸ್ಥಳಾಂತರ ಮಾಡಬೇಕು ಎನ್ನುವುದೂ ನಿವಾಸಿಗಳ ಆಗ್ರಹವಾಗಿದೆ.

    ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನುದಾನ ಬರುತ್ತಿಲ್ಲ ಎಂದು ಸ್ಥಳೀಯ ಜನಪ್ರತಿನಿಧಿಗಳ ಆರೋಪ ಸಾಮಾನ್ಯವಾಗಿತ್ತು. ಸದ್ಯ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪರಿಸ್ಥಿತಿ ಹಾಗೇ ಇದೆ. ಆದ್ದರಿಂದ ಸಿಆರ್​ಎಫ್ ಅನುದಾನ ಬಿಡುಗಡೆ ಮಾಡಿಸಿ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂಬುದು ಗಾಂಧಿನಗರ ನಿವಾಸಿಗಳ ಒತ್ತಾಸೆ.

    ಗಾಂಧಿನಗರ ನಿವಾಸಿಗಳು ನಾಗರಿಕ ಸಮಾಜದಲ್ಲಿದ್ದೇವೆಯೆ ಎಂಬ ಪ್ರಶ್ನೆ ಮೂಡುತ್ತಿದೆ. ಹುಬ್ಬಳ್ಳಿಗೆ ಹೋಲಿಸಿದರೆ ಧಾರವಾಡ ಮೊದಲಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಧಾರವಾಡದ ಜನಪ್ರತಿನಿಧಿಗಳು ಅಭಿವೃದ್ಧಿಯ ಕನಸು ಬಿತ್ತಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮುಖ್ಯರಸ್ತೆ, ಚರಂಡಿ ನಿರ್ಮಾಣ ಕನಸಾಗಿಯೇ ಉಳಿದಿದೆ. ಪ್ರಭಾವಿಗಳ ಮನೆಗಳ ಮುಂದಷ್ಟೇ ಚರಂಡಿ ಸ್ವಚ್ಛತೆ, ಕಾಂಕ್ರೀಟ್ ರಸ್ತೆ ನಿರ್ವಣ, ಉಳಿದವರಿಗೆ ತಾರತಮ್ಯ ಏಕೆ?

    – ವೆಂಕಟೇಶ ಮಾಚಕನೂರ, ಗಾಂಧಿನಗರ ನಿವಾಸಿ

    ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸರ್ಕಾರ ಬಿಜೆಪಿಯದ್ದೇ ಇದ್ದರೂ ರಸ್ತೆ ಕಾಮಗಾರಿ ವಿಳಂಬ ಏಕೆ ಎಂಬುದಕ್ಕೆ ಶಾಸಕರು ಉತ್ತರಿಸಬೇಕು. ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು.

    – ಮಂಜುನಾಥ ಭೋವಿ, ಗಾಂಧಿನಗರ ನಿವಾಸಿ

    ರಸ್ತೆ ಕೆಲಸ ಶುರು ಮಾಡದಿರುವುದರಿಂದ ವಿಪರೀತ ಧೂಳಿನ ಸಮಸ್ಯೆ ಉಂಟಾಗುತ್ತಿದೆ. ನಿವಾಸಿಗಳಲ್ಲಿ ಅಸ್ತಮಾ, ದಮ್ಮು ಭೀತಿ ಎದುರಾಗಿದೆ. ಅಂಗಡಿಕಾರರು ಧೂಳಿನಿಂದ ಅಂಗಡಿಗಳನ್ನು ಬಂದ್ ಮಾಡುವ ದುಸ್ಥಿತಿ ಎದುರಾಗಿದೆ.

    – ಲಕ್ಷ್ಮಣ ಮಂಗಳಗಟ್ಟಿ, ಗಾಂಧಿನಗರ ನಿವಾಸಿ

    ಸಿಆರ್​ಎಫ್ ಅಡಿ ಗಾಂಧಿನಗರ- ನವಲೂರ ಕಾಂಕ್ರೀಟೀಕರಣ ಕಾಮಗಾರಿ ವಿಳಂಬವಾಗಿದ್ದು, ಈ ಬಗ್ಗೆ ಸ್ಥಳೀಯರು ಸಹ ಮನವಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾಮಗಾರಿ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕೆಲಸ ಆರಂಭವಾಗಲಿದೆ.

    – ಅರವಿಂದ ಬೆಲ್ಲದ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts