More

    ಬಯಲು ಬಹಿರ್ದೆಸೆ ಮುಕ್ತ ಶಕುನವಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ

    ಶಿವಪ್ಪ ಹಿತ್ಲರ್ ಸೊರಬ
    ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ತಾಲೂಕಿನ ಜಡೆ ಹೋಬಳಿಯ ಶಕುನವಳ್ಳಿ ಗ್ರಾಮ ಪಂಚಾಯಿತಿ 2022-23ನೇ ಸಾಲಿನ ರಾಜ್ಯ ಸರ್ಕಾರದ ಗಾಂಧಿ ಗ್ರಾಮ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದೆ.

    ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಸಿಬ್ಬಂದಿಯ ಇಚ್ಛಾಶಕ್ತಿಯು ಗ್ರಾಪಂ ಅಭಿವೃದ್ಧಿಯಲ್ಲಿ ಮಹತ್ವ ಪಡೆದಿದೆ. ಗ್ರಾಪಂ ವ್ಯಾಪ್ತಿಯಲ್ಲಿ 5 ವಾರ್ಡ್‌ಗಳಿದ್ದು 14 ಸದಸ್ಯರಿದ್ದಾರೆ. ಶಕುನವಳ್ಳಿ, ಶಂಕ್ರಿಕೊಪ್ಪ, ಬಿಳಗಲಿ, ಸಾಬಾರ, ತೂಯೈಲ್‌ಕೊಪ್ಪ, ದೇವರಹೊಸಕೊಪ್ಪ ಸೇರಿದಂತೆ ಆರು ಗ್ರಾಮಗಳಿಂದ 6,087 ಮತದಾರರಿದ್ದಾರೆ. ಈ ಗ್ರಾಮಗಳ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ.
    ಗ್ರಾಪಂ ಭೌಗೋಳಿಕ ಪ್ರದೇಶವು ಅರೆ ಮಲೆನಾಡು ವ್ಯಾಪ್ತಿಗೆ ಸೇರಿದ್ದು, ಕೃಷಿ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳು ಪ್ರಧಾನವಾಗಿವೆ. ಪ್ರಸ್ತುತ ಎಲ್ಲ ಗ್ರಾಮಗಳೂ ಅಭಿವೃದ್ಧಿಯತ್ತ ಸಾಗುತ್ತಿವೆ. ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಹಾಗೂ 15ನೇ ಹಣಕಾಸು ಯೋಜನೆಯಿಂದ ಸ್ವಚ್ಛ ಭಾರತ ಅಭಿಯಾನ ಇತ್ಯಾದಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ.
    ಗುರಿಗಿಂತ ಹೆಚ್ಚು ಮಾನವ ದಿನ ಸೃಷ್ಟಿ:
    ನರೇಗಾ ಯೋಜನೆಯಡಿ ವಾರ್ಷಿಕ 16,910 ಮಾನವ ದಿನಗಳ ಗುರಿ ಹೊಂದಲಾಗಿತ್ತು. ಆದರೆ 24,521 ಮಾನವ ದಿನಗಳನ್ನು ಸೃಷ್ಟಿಸಿ ಗುರಿಗಿಂತ ಹೆಚ್ಚಿನ ಸಾಧನೆ ಮಾಡಿ ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶ ನೀಡಿ ಆರ್ಥಿಕವಾಗಿ ಸಬಲೀಕರಣಗೊಳಿಸಲಾಗಿದೆ. ನರೇಗಾದಡಿ ಕೆರೆ, ಕಾಲುವೆ, ಹೊಂಡ, ಕಟ್ಟೆಗಳ ನಿರ್ಮಾಣ ಮಾಡುವ ಮೂಲಕ ಜಲಸಂಪನ್ಮೂಲಗಳನ್ನು ಪುನಶ್ಚೇತನಗೊಳಿಸಲಾಗಿದೆ. ಶಾಲೆಗಳ ಶೌಚಗೃಹ, ಕಾಂಪೌಂಡ್, ಆಟದ ಮೈದಾನ, ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ ಮಾಡಲಾಗಿದೆ. ರೈತರ ಜೀವನೋಪಾಯಕ್ಕಾಗಿ ವೈಯಕ್ತಿಕ ತೋಟ, ಜಾನುವಾರು, ಕೋಳಿ ಮತ್ತು ಕುರಿ ಶೇಡ್, ಬಚ್ಚಲು ಗುಂಡಿ ನಿರ್ಮಿಸಿಕೊಡಲಾಗಿದೆ.
    ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ:
    ಸ್ವಚ್ಛ ಭಾರತ ಅಭಿಯಾನದಡಿ ಎಲ್ಲ ಕುಟುಂಬಗಳಿಗೆ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿಕೊಡುವ ಮೂಲಕ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಹೆಗ್ಗಳಿಕೆಗೆ ಪಾತ್ರವಾಗಿದೆ. 15ನೇ ಹಣಕಾಸು ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಮತ್ತು ಮೂಲ ಸೌರ್ಯಗಳನ್ನು ಒದಗಿಸಲಾಗಿದೆ. ಕಂದಾಯ ವಸೂಲಿಯಲ್ಲೂ ಮುಂಚೂಣಿಯಲ್ಲಿದೆ.
    ವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಗಳ ಮೂಲಕ ಜನರ ಪಾಲ್ಗೊಳ್ಳುವಿಕೆಗೂ ಅವಕಾಶ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಯಲ್ಲೂ ಯಶ ಕಂಡಿದೆ. ಸಂಪನ್ಮೂಲ ಕ್ರೋಡೀಕರಣ, ಬೀದಿದೀಪ ಅಳವಡಿಕೆ, ಆರ್ಥಿಕ ಶಿಸ್ತು ಪಾಲನೆ ಉತ್ತಮವಾಗಿದೆ.
    ನಾವೀನ್ಯ ಕಾರ್ಯಕ್ರಮಗಳಲ್ಲೂ ಗಮನಾರ್ಹ ಸಾಧನೆ ಮಾಡಿರುವುದನ್ನು ಸರ್ಕಾರ ಗುರುತಿಸಿದೆ. ಗಾಂಧಿ ಜಯಂತಿ ದಿನದಂದು ಸರ್ಕಾರ 5 ಲಕ್ಷ ರೂ. ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಈ ಮೂಲಕ ಇತರ ಗ್ರಾಪಂಗಳಿಗೆ ಮಾದರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts