More

    ಸಾಮರ್ಥ್ಯ ಕಂಡುಕೊಂಡು ಅವಲಂಬನೆ ತ್ಯಜಿಸಿ ; ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

    ತುಮಕೂರು:  ಅಂಗವೈಕಲ್ಯ ದೇಹಕ್ಕಷ್ಟೇ ವಿನಃ ಮನಸ್ಸಿಗಲ್ಲ, ಕಾರ್ಯ ಸಾಧನೆಗೆ ಮನಸ್ಸು ಸದೃಢವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

    ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಅಂಗವಾಗಿ ಶನಿವಾರ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ವಿಕಲಚೇತನ ಇಲಾಖೆ ವಿವಿಧ ಯೋಜನೆಯಡಿ ಇತರ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.

    ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರ ದಬ್ಬಾಳಿಕೆ ಹಾಗೂ ದಾಸ್ಯದಿಂದ ನಮ್ಮನ್ನೆಲ್ಲ ಮುಕ್ತಗೊಳಿಸಿ ಸ್ವಾಭಿಮಾನದಿಂದ ಬದುಕು ನಡೆಸಲು ತಮ್ಮನ್ನೇ ಅರ್ಪಿಸಿಕೊಂಡ ಗಾಂಧೀಜಿ ಅವರ ಜನ್ಮದಿನ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.

    ಶಕ್ತಿಯಿಲ್ಲದ ಅಬಲರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ, ಬ್ರೈಲ್ ಕಿಟ್, ಟಾಕಿಂಗ್ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ಸೇರಿ ಅವಶ್ಯವಿರುವ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಫಲಾನುಭವಿಗಳು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ದೇಹಕ್ಕೆ ಊನವಾದರೂ ಮಾನಸಿಕವಾಗಿ ದೃಢವಾಗಿರುವುದು ಮುಖ್ಯ. ಮನುಷ್ಯ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ನಾವೇ ಕಂಡುಕೊಳ್ಳುವ ಮೂಲಕ ಅವಲಂಬನೆಯನ್ನು ತ್ಯಜಿಸಬೇಕು ಎಂದರು.

    ರಂಗ ಕಲಾವಿದೆ ಬಿ.ಜಯಶ್ರೀ ಮಾತನಾಡಿ, ಗುಬ್ಬಿ ನಾಟಕ ಕಂಪನಿಯಲ್ಲಿ ನಟನೆ ಮಾಡುವ ಮೂಲಕ ಜೀವನ ಕಟ್ಟಿಕೊಂಡ ನಮ್ಮ ತಾಯಿ ನಟನೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ಅಂಗ ವೈಕಲ್ಯಕ್ಕೆ ತುತ್ತಾದರು. ಆದರೂ ಛಲ ಬಿಡದೆ ವ್ಹೀಲ್ ಚೇರ್ ಮೇಲೆಯೇ ಇತರರ ಮೇಲೆ ಅವಲಂಬಿತರಾಗದೆ ನಾಟಕದಲ್ಲಿ ಪಾತ್ರ ಮಾಡುವ ಮೂಲಕ ಜೀವನ ಸವೆಸಿದರು ಎಂದರು.

    ಕಾರ್ಯಕ್ರಮದಲ್ಲಿ 15 ಹೊಲಿಗೆ ಯಂತ್ರ, 50 ಯಂತ್ರಚಾಲಿತ ತ್ರಿಚಕ್ರ ವಾಹನ, 15 ಬ್ರೈಲ್ ಕಿಟ್, 8 ಟಾಕಿಂಗ್ ಲ್ಯಾಪ್‌ಟಾಪ್ ಸೇರಿ 88 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ವಿತರಿಸಲಾಯಿತು.
    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಶ್ರೀಧರ್, ಡಿಡಿಪಿಐ ಸಿ.ನಂಜಯ್ಯ ಮತ್ತಿತರರು ಇದ್ದರು.

    ಜಿಲ್ಲೆಯಲ್ಲಿ 6000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ತೀವ್ರ ಅಪೌಷ್ಟಿಕತೆಯಿಂದ ಕೂಡಿರುವ 2000 ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ಪಿರುಲಿನಾ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಪೌಷ್ಟಿಕಯುಕ್ತ ಹಾಲಿನ ಪುಡಿ ಒದಗಿಸಬೇಕು ಎಂದು ಸಚಿವ ಜೆಸಿಎಂ ಸೂಚಿಸಿದರು. ಜಿಲ್ಲೆಯಲ್ಲಿ ವಾತಾವರಣ ಬದಲಾವಣೆಯೂ ವೈರಲ್ ಫೀವರ್ ಹೆಚ್ಚಾಗಲು ಕಾರಣವಾಗಿದೆ. ಕರೊನಾ ನಂತರ ಜಿಲ್ಲೆಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ಎಲ್ಲ ರೀತಿಯ ವೈದ್ಯಕೀಯ ತಪಾಸಣೆಗಳನ್ನು ತಾಲೂಕು ಮಟ್ಟದಲ್ಲಿಯೂ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಸೇರಿ ವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸಿರುವುದರಿಂದ ಇನ್ನು ಮುಂದೆ ಯಾವುದೇ ಆರೋಗ್ಯ ಸಮಸ್ಯೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts