More

    ಗಣಪತಿ ಕೆರೆ ಕಾಯಕಲ್ಪಕ್ಕೆ ಪ್ರಥಮ ಹೆಜ್ಜೆ

    ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಗಣಪತಿ ಕೆರೆ ಕಾಯಕಲ್ಪ ನೀಡುವ ಪ್ರಥಮ ಹೆಜ್ಜೆ ಇಟ್ಟಿದ್ದೇವೆ. ತಕ್ಷಣ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

    ಗಣಪತಿ ಕೆರೆ ಅಂಗಳದಲ್ಲಿ ಎರಡು ದಿನ ಆಯೋಜಿಸಿರುವ ಗಣಪತಿ ಕೆರೆಹಬ್ಬಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಈ ಕೆರೆ ನಮ್ಮ ಕೆರೆ ಎನ್ನುವ ಮನೋಭಾವ ಸಾಗರ ಜನರಲ್ಲಿ ಬರಬೇಕು. ಅಂತಹ ವಾತಾವರಣ ನಿರ್ಮಾಣ ಮಾಡುವ ಮೊದಲ ಪ್ರಯತ್ನ ಇದಾಗಿದೆ ಎಂದು ಹೇಳಿದರು.

    ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಕೆರೆ ಹಬ್ಬ ಹಮ್ಮಿಕೊಂಡಿದ್ದು, ಎಲ್ಲರೂ ಸ್ವಯಂಪ್ರೇರಿತವಾಗಿ ಕೆರೆಗೆ ಇಳಿದು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಸಾವಿರಾರು ಜನ ಈ ಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ. ಸ್ವಚ್ಛ ಸಾಗರ, ಸುಂದರ ಸಾಗರ ನಿರ್ಮಾಣ ನಮ್ಮ ಆಶಯ. ಈಗಾಗಲೆ ಕೆರೆಯ ಸುತ್ತಲಿನ ಪರಿಸರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸರ್ಕಾರದ ಕಡೆಯಿಂದ ಯೋಜನೆ ಕೈಗೊಂಡಿದ್ದರೆ ಇಷ್ಟು ಯಶಸ್ಸು ಕಾಣುತ್ತಿರಲಿಲ್ಲ. ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮ ಯಶಸ್ಸುಗೊಳ್ಳುತ್ತ ಎಂದು ಹೇಳಿದರು.

    ಕೆರೆ ಹಬ್ಬದಲ್ಲಿ ಭಾಗಿಯಾದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ರಾಷ್ಟ್ರೀಯ ಸಮಿತಿ ಸದಸ್ಯ ಅ.ನಾ. ವಿಜಯೇಂದ್ರ ರಾವ್ ಮಾತನಾಡಿ, ಈಗಾಗಲೇ ಯಡೆಹಳ್ಳಿ, ಆನಂದಪುರ, ರಿಪ್ಪನ್​ಪೇಟೆ, ಶಿವಮೊಗ್ಗದ ನಿದಿಗೆ, ಪುರಲೆ ಹೀಗೆ ಸುಮಾರು 15ಕ್ಕೂ ಹೆಚ್ಚು ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸದಲ್ಲಿ ನಮ್ಮ ಸಂಘಟನೆ ಸಕ್ರಿಯವಾಗಿ ತೊಡಗಿಕೊಂಡಿದೆ. ನಮ್ಮ ಊರಿನ ಕೆರೆಗಳನ್ನು ನಾವು ಉಳಿಸಿಕೊಳ್ಳಬೇಕು. ಪ್ರವಾಸೋದ್ಯಮದ ದೃಷ್ಟಿಯಿಂದ ಅವನ್ನು ಅಭಿವೃದ್ಧಿಪಡಿಸುವ ಕೆಲಸವಾಗಬೇಕು ಎಂದು ಹೇಳಿದರು.

    ಕೆರೆ ಒತ್ತುವರಿ ತೆರವಿಗೆ ಗಮನ ಹರಿಸಿ: ಗಣಪತಿ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಆದರೆ ಕೆರೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕೆಲಸ ಕೈಗೊಳ್ಳುವತ್ತ ಶಾಸಕರು ಗಮನ ಹರಿಸಬೇಕು ಎಂದು ಪ್ರಮುಖರು ಒತ್ತಾಯಿಸಿದ್ದಾರೆ. ಈ ಹಿಂದೆ ಶಾಸಕರು ಗಣಪತಿ ಕೆರೆ ಒತ್ತುವರಿ ತೆರವುಗೊಳಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎಂದು ವಾಗ್ದಾನ ನೀಡಿದ್ದರು. ಕೆಲವು ಪರಿಸರಾಸಕ್ತ ಹೋರಾಟಗಾರರು ಪಿಎಎಲ್ ಸಲ್ಲಿಸಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ಮಾಡಿಕೊಂಡ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಉಪವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದರೆ ಶಾಸಕರು ಒತ್ತುವರಿ ತೆರವುಗೊಳಿಸದೆ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಶಾಸಕರು ಗಣಪತಿ ಕೆರೆ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ತರುವ ಮೂಲಕ ಕೆರೆಗೆ ಜಲಮೂಲವಾಗಿರುವ ಬಂಗಾರಮ್ಮನ ಕೆರೆ, ದೊಣ್ಣೆ ಕೆಂಚನ ಕೆರೆ, ಚಿಪ್ಪಳಿ ಕೆರೆ, ಕಂಬಳಿಕೊಪ್ಪ ಕೆರೆ, ಹುಣಸೆಕಟ್ಟೆ ಕೆರೆ ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ತಾಲೂಕು ಜೆಡಿಎಸ್ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ, ಡಿಎಸ್​ಎಸ್ ಮುಖಂಡ ಪರಮೇಶ್ವರ ದೂಗೂರು, ನಗರಸಭೆ ಮಾಜಿ ಸದಸ್ಯ ರವಿ ಜಂಬಗಾರು ಒತ್ತಾಯಿಸಿದ್ದಾರೆ.

    ಚರಂಡಿ ತೆರವು ಜಟಾಪಟಿ: ಗಣಪತಿ ದೇವಾಲಯದ ಪಕ್ಕದಲ್ಲಿರುವ ಓಕಳಿ ಕಟ್ಟೆ ಹಿಂಭಾಗ ಮುಚ್ಚಿಹೋಗಿದ್ದ ಚರಂಡಿಯನ್ನು ತಾಲೂಕು ಆಡಳಿತದ ಅಧಿಕಾರಿಗಳು, ನಗರಸಭಾ ಸದಸ್ಯೆ ಕುಸುಮಾ ಸುಬ್ಬಣ್ಣ, ವಿ.ಮಹೇಶ್, ಆನಂದ ನಾಯ್ಕ, ನಗರಸಭಾ ಆಯುಕ್ತ ಎನ್.ರಾಜು ತೆಗೆಯಲು ಮುಂದಾದಾಗ ಪಕ್ಕದಲ್ಲಿರುವ ಮಸೀದಿಗೆ ಸಂಬಂಧಿಸಿದ ಕೆಲವರು ಚರಂಡಿ ತೆಗೆಯದಂತೆ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ವಿಶ್ವ ಹಿಂದು ಪರಿಷತ್ತಿನ ತಾಲೂಕು ಅಧ್ಯಕ್ಷ ಐ.ವಿ.ಹೆಗಡೆ, ಇದು ಬಹಳ ಹಿಂದಿನಿಂದ ಇರುವ ಸುಸಜ್ಜಿತವಾದ ಬಾಕ್ಸ್ ಚರಂಡಿ. ನೀರು ಸುಲಲಿತವಾಗಿ ಸಾಗುವಂತೆ ಮಾಡಲಾಗಿದೆ. ಅನ್ಯಥಾ ಹಸ್ತಕ್ಷೇಪ ಮಾಡಬೇಡಿರಿ ಎಂದರು. ಅಲ್ಲಿ ಕೆಲಸಕ್ಕಾಗಿ ಸೇರಿದ್ದ ಸಾರ್ವಜನಿಕರು ನಿಧಾನವಾಗಿ ಇಲ್ಲಿ ನಡೆಯುತ್ತಿದ್ದ ಮಾತುಕತೆಯತ್ತ ಮುಖ ಮಾಡಿದರು. ಪರಿಸ್ಥಿತಿ ಅರಿತ ರಕ್ಷಣಾ ಇಲಾಖೆಯವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ವಾತಾವರಣ ತಿಳಿಗೊಳಿಸಿದರು.

    ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ಪೌರಾಯುಕ್ತ ಎಸ್.ರಾಜು, ಡಿವೈಎಸ್​ಪಿ ಜೆ.ರಘು, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್​ಪ್ರಸಾದ್, ಆರ್.ಶ್ರೀನಿವಾಸ್, ವಿವಿಧ ಸಂಘಸಂಸ್ಥೆ ಪ್ರಮುಖರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts