More

    ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ : ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿ ; ಮನೆಗಳಲ್ಲಿ 2, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಮೂರ್ತಿಗೆ ಅವಕಾಶ

    ತುಮಕೂರು : ರಾಜ್ಯ ಸರ್ಕಾರವು ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಗಣೇಶ ಮೂರ್ತಿ ತಯಾರಿಕರ ಬದುಕಲ್ಲಿ ‘ಹುಲ್ಲಕಡ್ಡಿ’ ಆಸರೆ ಸಿಕ್ಕಂತಾಗಿದೆ.

    ಕಳೆದ ವರ್ಷ ಕರೊನಾ ಅಟ್ಟಹಾಸದಿಂದ ಸಾರ್ವಜನಿಕರ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡದ ಕಾರಣ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನೆಚ್ಚಿಕೊಂಡಿರುವ ಕುಟುಂಬಗಳು ಸಂಕಷ್ಟದ ಸುಳಿಗೆ ಸಿಲುಕಿದ್ದವು. ಈ ಬಾರಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿರುವುದರಿಂದ 5 ದಿನಗಳ ಸಾರ್ವಜನಿಕ ಗಣೇಶೋತ್ಸವಕ್ಕೆ ಕೆಲವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಸರ್ಕಾರವು ಅವಕಾಶ ಕಲ್ಪಿಸಿದೆ.

    ಬದುಕಿಗೆ ಗಣೇಶನ ಆಸರೆ: ಜಿಲ್ಲೆಯಾದ್ಯಂತ ಸಾವಿರಾರು ಕುಟುಂಬಗಳು ಗಣೇಶಮೂರ್ತಿ ತಯಾರಿಸುವ ಹಾಗೂ ಮಾರಾಟ ಮಾಡಿಕೊಂಡು ಬಂದಿದ್ದು ಈ ಕುಟುಂಬಗಳ ಬದುಕಿಗೆ ಗಣೇಶನೇ ಆಸರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶನ ಮಣ್ಣಿನ ಮೂರ್ತಿಗಳನ್ನು ತಯಾರಿಸಿ, ಮಾರುವ ಕುಟುಂಬಗಳಿಗೆ ಕಳೆದ ಬಾರಿ ಕರೊನಾ ದೊಡ್ಡ ಹೊಡೆತ ಕೊಟ್ಟಿತ್ತು. ಈ ಬಾರಿ ಸ್ವಲ್ಪಮಟ್ಟಿಗೆ ಉಸಿರಾಡಲು ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

    ಕರೊನಾ 3ನೇ ಅಲೆ ಆತಂಕದ ನಡುವೆಯೂ ಅದ್ದೂರಿ ಗಣೇಶೋತ್ಸವಕ್ಕೆ ಆಚರಣೆ ನೀಡದೆ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳಿಲ್ಲದೆ ಸಾಂಪ್ರದಾಯಿಕ, ಸರಳ ವಿನಾಯಕ ಚತುರ್ಥಿ ಆಚರಣೆಗೆ ಅನುವು ಮಾಡಿಕೊಡಲಾಗಿದೆ. ಮನೆಗಳಲ್ಲಿ 2 ಅಡಿ, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮಾರ್ಗಸೂಚಿ ಹೊರಡಿಸುತ್ತಿದ್ದಂತೆ ನಗರದ ರಸ್ತೆಗಳಲ್ಲಿ ಗಣೇಶ ಮೂರ್ತಿ ಮಾರಾಟಗಾರರು ಕಾಣಿಸಿಕೊಂಡಿದ್ದಾರೆ.

    ಗಣೇಶ ಹಬ್ಬದ ಸಂದರ್ಭದಲ್ಲಿ 100 ರೂ.ಗಳಿಂದ ಹಿಡಿದು 10 ಸಾವಿರ ರೂ.,ವರೆಗೆ ಗಣೇಶ ಮೂರ್ತಿಗಳು ಮಾರಾಟವಾಗುತ್ತವೆ. ಗ್ರಾಮೀಣ ಭಾಗಗಳಿಂದ ಗಣಪ ಮೂರ್ತಿ ವ್ಯಾಪಾರಿಗಳು ನಗರಕ್ಕೆ ಬಂದು ಸಗಟು ದರದಲ್ಲಿ ಗಣಪನ ಮೂರ್ತಿಗಳನ್ನು ಖರೀದಿಸುತ್ತಾರೆ. ಆದರೆ, ಈ ಬಾರಿಯು ಗಣೇಶೋತ್ಸವಕ್ಕೆ ಕೆಲವು ಷರತ್ತುಗಳನ್ನು ವಿಧಿಸಿರುವುದರಿಂದ ನೀರಿನಿಂದ ಪೂರ್ಣ ಮೇಲೆಳುವ ಮೂರ್ತಿ ತಯಾಕರ ನಿರೀಕ್ಷೆ ಹುಸಿಯಾಗಿದೆ.

    ಮಾರಾಟ ಆರಂಭ: ಕಳೆದ ವರ್ಷ ಗೌರಿ, ಗಣೇಶ ಹಬ್ಬವಿಲ್ಲದ ಕಾರಣ ಕುಂಬಾರರು ಹಾಗೂ ಗಣೇಶ ಮೂರ್ತಿ ತಯಾರಿಸುವವರ ಬದುಕು ಬೀದಿಗೆ ಬಿದ್ದಿತ್ತು. ಆದರೆ, ಈ ಬಾರಿ ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದರಿಂದ ಸೋಮವಾರ ಬೆಳಗ್ಗೆಯಿಂದಲೇ ನಗರದ ಅಶೋಕ ರಸ್ತೆಗಳಲ್ಲಿ ಗಣೇಶನ ತರಹೇವಾರಿ ಮೂರ್ತಿಗಳು ಪ್ರತ್ಯಕ್ಷವಾಗಿವೆ. ಮುಕ್ಕಾಲು ಅಡಿಯಿಂದ 4 ಅಡಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ಇದೆ.

    ಡಿಜೆ ಅಬ್ಬರಕ್ಕೆ ಬ್ರೇಕ್….: ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳಗಳಲ್ಲಿ 20 ಜನರಿಗೆ ಸೀಮಿತವಾದ ಆವರಣ ನಿರ್ಮಿಸಬೇಕು. 20 ಜನರು ಮಾತ್ರ ಒಮ್ಮೆ ಸೇರಲು ಅವಕಾಶ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ಸಾಂಸ್ಕೃತಿಕ, ಮುಖ್ಯವಾಗಿ ಡಿಜೆ ಮೂಲಕ ಹಾಗೂ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ. ಇನ್ನೂ ಶಾಲಾ-ಕಾಲೇಜುಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ ಇಲ್ಲ.

    ಆಯೋಜಕರಿಗೆ ಕರೊನಾ ನೆಗೆಟಿವ್ ವರದಿ ಕಡ್ಡಾಯ : ಆಯೋಜಕರು ಕರೊನಾ ನೆಗೆಟಿವ್ ರಿಪೋರ್ಟ್ ಹಾಗೂ ಲಸಿಕೆ ಪಡೆದಿರುವ ಬಗ್ಗೆ, ಪ್ರವಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಗಣೇಶ ಆಚರಣೆಯ ಆಯೋಜಿತ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮೆರವಣಿಗೆ ಮಾಡುವಂತಿಲ್ಲ. ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರಡಿ ಶಿಸ್ತಿನ, ಕಾನೂನು ಕ್ರಮ ಮತ್ತು ಅನ್ವಯವಾಗಬಹದಾದ ಇತರ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.

    ಗಣೇಶ ಚತುರ್ಥಿ ಗರಿಷ್ಠ 5 ದಿನ ಅವಕಾಶ ಇದೆ. ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವವನ್ನು ಕನಿಷ್ಠ ಜನಸಂಖ್ಯೆಯಲ್ಲಿ ಆಚರಿಸಬೇಕು. ಗಣೇಶೋತ್ಸವ ಸಮಿತಿ, ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ವಾಡಲು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.
    ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

    ಕರೊನಾ ನಿಯಮಾವಳಿಗಳ ಅನ್ವಯ ಗೌರಿ ಗಣೇಶ ಆಚರಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಕಳೆದ ವರ್ಷ ಗೌರಿ, ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡದ ಕಾರಣ ಕುಂಬಾರರು ಹಾಗೂ ಗಣೇಶ ಮೂರ್ತಿ ತಯಾರಿಸುವವರು ಬದುಕು ಬೀದಿಗೆ ಬಿದ್ದಿತ್ತು. ಈ ಬಾರಿ ಹಬ್ಬಕ್ಕೆ 4 ದಿನ ಮುನ್ನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೆಲ ಷರತ್ತುಗಳನ್ನು ವಿಧಿಸಿ,ಅನುಮತಿ ನೀಡಿದೆ. ಇದು ನಿಜಕ್ಕು ಕುಂಬಾರ ಸಮುದಾಯಕ್ಕೆ ಮರಳುಗಾಡಿನಲ್ಲಿ ಸಿಹಿ ನೀರು ಸಿಕ್ಕಂತಾಗಿದೆ.
    ಎಸ್.ಬಸವರಾಜು ಗೌರವಾಧ್ಯಕ್ಷ , ರಾಜ್ಯ ಕುಂಬಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts