More

    ಮಾರುಕಟ್ಟೆಗೆ ಲಗ್ಗೆ ಇಟ್ಟ ಗಣಪ, ಚತುರ್ಥಿಗೆ ದಿನಗಣನೆ

    ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿರುವುದರ ನಡುವೆ ಮಾರುಕಟ್ಟೆಗೆ ಬಗೆಬಗೆಯ ಗಣಪನ ಮೂರ್ತಿಗಳು ಲಗ್ಗೆ ಇಟ್ಟಿವೆ. ಕರೊನಾ ಮಾರ್ಗಸೂಚಿ ಸೇರಿ ಬಿಗಿ ನಿಯಮಗಳ ಕಿರಿಕಿರಿ ನಿವಾರಣೆ, ಕೆರೆ-ಕುಂಟೆಗಳಲ್ಲಿ ಸಮೃದ್ಧ ನೀರು ಲಭ್ಯತೆಯಿಂದ ಮಾರಾಟಗಾರರು ಒಳ್ಳೆಯ ವಹಿವಾಟಿನ ನಿರೀಕ್ಷೆ ಹೊಂದಿದ್ದಾರೆ.


    ಆ.31ರಂದು ಗಣೇಶ ಚತುರ್ಥಿ. ಈಗಾಗಲೇ ವಿವಿಧ ದೇವಾಲಯ ಸಮಿತಿ, ಯುವಕರ ಬಳಗ, ಸಂಘ ಸಂಸ್ಥೆಗಳು ಆಕರ್ಷಕ ಗಣಪನ ಪ್ರತಿಷ್ಠಾಪನೆ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಕಳೆದ 2 ವರ್ಷಗಳ ಮಾದರಿಯಲ್ಲಿ ಈ ಬಾರಿ ಕರೊನಾ ಆತಂಕ ಇಲ್ಲ. ಇನ್ನು ಜಿಲ್ಲಾದ್ಯಂತ ಧಾರಾಕಾರ ಮಳೆ ಬಿದ್ದಿರುವುದರಿಂದ ಕೆರೆ-ಕುಂಟೆಗಳಲ್ಲಿ ನೀರು ಲಭ್ಯವಿದ್ದು, ಮೂರ್ತಿ ವಿಸರ್ಜನೆ ಅನುಕೂಲಕರವಾಗಿದೆ. ಇದನ್ನರಿತ ಮಾಲೀಕರು ದೊಡ್ಡದೊಡ್ಡ ಮೂರ್ತಿಗಳನ್ನು ಪ್ರಮುಖ ರಸ್ತೆಗಳ ಬದಿ, ಸಂತೆ ಪ್ರದೇಶಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ.


    ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಬಗ್ಗೆ ಮೂರ್ತಿ ತಯಾರಕರು ಮತ್ತು ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಲಾಗಿದೆ. ಇದರಿಂದ ಮಣ್ಣಿನಲ್ಲಿ ತಯಾರಿಸಿದ, ಪರಿಸರಕ್ಕೆ ಮಾರಕವಾದ ಬಣ್ಣಗಳ ಕಡಿಮೆ ಬಳಕೆಯ ಮೂರ್ತಿಗಳ ಮಾರಾಟಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ.


    ಈಗಾಗಲೇ ಜಿಲ್ಲಾ ಕೇಂದ್ರದಲ್ಲಿನ ಬಿ.ಬಿ.ರಸ್ತೆ, ಬಜಾರ್ ರಸ್ತೆ ಬದಿಯ ಫುಟ್‌ಪಾತ್‌ಗಳಲ್ಲಿ 25ಕ್ಕೂ ಹೆಚ್ಚು ವ್ಯಾಪಾರಿಗಳು 2 ಸಾವಿರಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದು, ಒಂದು ಅಡಿಯಿಂದ 20 ಅಡಿ ಎತ್ತರದವರೆಗಿನ ವಿವಿಧ ಮಾದರಿಯ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತಿವೆ. ಮೂರ್ತಿಗಳ ಆಯ್ಕೆ, ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂಗಡ ಹಣ ಪಾವತಿಸಿ ಖರೀದಿಸಲಾಗುತ್ತಿದೆ.

    ವ್ಯಾಪಾರಸ್ಥರಲ್ಲಿ ಆತಂಕ: ಒಳ್ಳೆಯ ವಹಿವಾಟಿನ ನಿರೀಕ್ಷೆಯ ನಡುವೆ ಮುಂಬರುವ ವಿಧಾನಸಭಾ ಚುನಾವಣೆಯ ಲೆಕ್ಕಾಚಾರದಲ್ಲಿ ಸ್ಥಳೀಯ ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಯುವಕರ ಬಳಗಗಳಿಗೆ ಉಚಿತವಾಗಿ ಗಣಪತಿ ಮೂರ್ತಿಗಳನ್ನು ವಿತರಿಸುವ ಆತಂಕವೂ ಇದೆ. ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿ ಮಾರಾಟಗಾರರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮಣ್ಣಿನ ಸಾವಿರಾರು ಗಣೇಶ ಮೂರ್ತಿಗಳನ್ನು ತರಿಸಿದ್ದಾರೆ. ಇದರ ನಡುವೆ ಉಚಿತ ಹಂಚಿಕೆಯಿಂದ ಬೇಡಿಕೆ ಮತ್ತು ಬೆಲೆ ಕುಸಿಯುತ್ತದೆ. ಇದರಿಂದ ನಷ್ಟ ಅನುಭವಿಸಬೇಕಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಳೆದ 2 ವರ್ಷ ವಹಿವಾಟು ಸಮರ್ಪಕವಾಗಿ ನಡೆಯಲಿಲ್ಲ. ಈ ಬಾರಿಯೂ ಹೂಡಿರುವ ಬಂಡವಾಳದ ಜತೆಗೆ ವಾಪಸ್ ಬರುತ್ತದೆಯೋ ಇಲ್ಲವೊ? ಎಂಬ ಚಿಂತೆ ಕಾಡುತ್ತಿದೆ.

    ಸುತ್ತೋಲೆಗೆ ಕಾಯುತ್ತಿರುವ ಅಧಿಕಾರಿಗಳು: ಇನ್ನು ಗಣೇಶ ಚತುರ್ಥಿಗೆ ವಾರ ಬಾಕಿ ಇದೆ. ಇದರ ನಡುವೆ ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಸಂಸ್ಥೆಗಳು ಗಣಪತಿ ಮೂರ್ತಿ ಪ್ರತಿಷ್ಠಾಪನಾ ಪೂರ್ವಭಾವಿ ಸಭೆಗಳನ್ನು ನಡೆಸಲು ಸರ್ಕಾರದ ಸುತ್ತೋಲೆಗೆ ಕಾಯುತ್ತಿವೆ. ಪ್ರತಿ ವರ್ಷ ಹಬ್ಬಕ್ಕೆ 20 ದಿನ ಮೊದಲೇ ಗಣಪನನ್ನು ಪ್ರತಿಷ್ಠಾಪಿಸುವ ವಿವಿಧ ಸಮಿತಿ, ಯುವಕರ ಬಳಗ, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದು ಸಲಹೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮತ್ತು ವಿದ್ಯುತ್ ಸಂಪರ್ಕಕ್ಕೆ ಅನುಮತಿ, ಪೂಜೆಗೆ ದಿನಗಳ ನಿಗದಿ, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ, ಧ್ವನಿವರ್ಧಕಗಳ ಬಳಕೆ, ಮೆರವಣಿಗೆ, ದೇವರ ಮೂರ್ತಿ ವಿಸರ್ಜನೆಗೆ ನೀರಿನ ಹೊಂಡಗಳ ನಿಗದಿ ಸೇರಿ ಸುರಕ್ಷತೆಯ ಹಲವು ನಿಯಮಗಳ ಬಗ್ಗೆ ತಿಳಿಸಲಾಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಸಭೆಗಳು ಇನ್ನು ನಡೆದಿಲ್ಲ.

    ಈ ಬಾರಿ ವ್ಯಾಪಾರ ವಹಿವಾಟಿಗೆ ಹಿಂದಿನ ವರ್ಷದ ಮಾದರಿಯಲ್ಲಿ ಬಿಗಿ ನಿರ್ಬಂಧ ಇಲ್ಲ. ಮೂರ್ತಿಗಳ ಖರೀದಿಗೆ ಪ್ರಾರಂಭದಲ್ಲಿಯೇ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ತುಂಬಾ ಚೌಕಾಸಿ ವ್ಯಾಪಾರ ನಡೆಯುತ್ತಿದೆ.
    ಶ್ರೀನಿವಾಸ್, ಮೂರ್ತಿಗಳ ಮಾರಾಟಗಾರ, ಚಿಕ್ಕಬಳ್ಳಾಪುರ

    ಗಣಪತಿ ಮೂರ್ತಿ ಪ್ರತಿಷ್ಠಾಪನೆಯ ಸರ್ಕಾರದ ಮಾರ್ಗಸೂಚಿ ಇನ್ನೂ ಬಂದಿಲ್ಲ. ಇದಕ್ಕೆ ಎದುರು ನೋಡಲಾಗುತ್ತಿದೆ. ಇನ್ನು ರಾಜ್ಯಮಟ್ಟದಲ್ಲಿ ಅಂತಿಮ ರೂಪುರೇಷೆ ಸಿದ್ಧವಾಗಿದೆ. ಮೇಲಧಿಕಾರಿಗಳಿಂದ ಆದೇಶ ಬರುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
    ಹೆಸರು ಹೇಳಲು ಇಚ್ಛಿಸದ ಅಧಿಕಾರಿ, ಚಿಕ್ಕಬಳ್ಳಾಪುರ

    17 ಸಾವಿರ ರೂಪಾಯಿ ಮೌಲ್ಯದ 14 ಅಡಿ ಗಣಪನ ಮೂರ್ತಿ ಬುಕ್ಕಿಂಗ್ ಮಾಡಲಾಗಿದೆ. ಈಗಾಗಲೇ ಸ್ಥಳೀಯವಾಗಿ ಹಬ್ಬದ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.
    ರಮೇಶ್, ಗಣಪ ಪ್ರತಿಷ್ಠಾಪನಾ ಬಳಗ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts