More

    ಗೆಜ್ಜೆಗಿರಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

    ಈಶ್ವರಮಂಗಲ: ದೇಯಿ ಬೈದೆತಿ, ಕೋಟಿ- ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ 8.04ರ ಮೀನ ಲಗ್ನ ಮುಹೂರ್ತದಲ್ಲಿ ಮಾತೆ ದೇಯಿ ಬೈದೆತಿ ಬಿಂಬ ಪ್ರತಿಷ್ಠಾಪನೆ, ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲ ಗರಡಿಯಲ್ಲಿ ಗುರು ಸಾಯನ ಬೈದ, ಕೋಟಿ- ಚೆನ್ನಯರ ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಕ್ಷೇತ್ರದ ತಂತ್ರಿ ಎಂ.ಕೆ.ಲೋಕೇಶ್ ತಂತ್ರಿ ನೇತೃತ್ವದಲ್ಲಿ ನೆರವೇರಿತು.

    ಕರಾವಳಿ ಜಿಲ್ಲೆಯಲ್ಲಿ ಸುಮಾರು 247 ಗರಡಿಗಳಲ್ಲಿ ಆರಾಧಿಸಲ್ಪಡುತ್ತಿರುವ ಕೋಟಿ- ಚೆನ್ನಯರಿಗೆ ಇದೇ ಮೊದಲ ಬಾರಿಗೆ ಮೂಲಸ್ಥಾನದಲ್ಲಿ ಗರಡಿ ನಿರ್ಮಾಣಗೊಂಡಿದ್ದು, ಈ ಗರಡಿಯಲ್ಲಿ ಕೋಟಿ- ಚೆನ್ನಯರ ಜತೆಗೆ ಗುರು ಸಾಯನ ಬೈದ್ಯರ ಬಿಂಬ ಸ್ಥಾಪನೆಯಾಗಿರುವುದು ಇಲ್ಲಿನ ವಿಶೇಷ.

    ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಆನುವಂಶಿಕ ಮೊಕ್ತೇಸರರಾದ ಲೀಲಾವತಿಯಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ಅಧ್ಯಕ್ಷ ಪೀತಾಂಬರ ಹೇರಾಜೆ ಮತ್ತಿತರರು ಉಪಸ್ಥಿತರಿದ್ದರು.

    ಪವಾಡ ನಡೆಯಿತೇ?:
    ಸತ್ಯ ಧರ್ಮ ಚಾವಡಿಯಲ್ಲಿ ಸಾಯನ ಬೈದ್ಯರ ಗುರು ಪೀಠದ ಬಳಿ ವೈದಿಕ ಕಾರ್ಯಕ್ರಮ ನೆರವೇರಿಸಿ ಗುರುವಾರ ರಾತ್ರಿ ಕೋಟಿ- ಚೆನ್ನಯರ ಹಾಗೂ ಗುರು ಸಾಯನ ಬೈದ್ಯರ ಬಿಂಬಗಳನ್ನು ಶಯನಾವಸ್ಥೆಯಲ್ಲಿಟ್ಟು ಬಾಗಿಲು ಮುಚ್ಚಲಾಗಿತ್ತು. ಪಕ್ಕದಲ್ಲಿ ಅರ್ಧನಾರೀಶ್ವರ ಮಂಡಲ ಬರೆಯಲಾಗಿತ್ತು. ಶುಕ್ರವಾರ ಮುಂಜಾನೆ ಆ ಮಂಡಲದಲ್ಲಿ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುವ ಮೂಲಕ ಪವಾಡ ನಡೆದಿದೆ ಎಂದು ಕ್ಷೇತ್ರಾಡಳಿತ ಸಮಿತಿ ಕಾರ್ಯದರ್ಶಿ ಸುಧಾಕರ ಸುವರ್ಣ ಮಾಹಿತಿ ನೀಡಿದ್ದಾರೆ.

    ಇಂದು ಧೂಮಾವತಿ ನೇಮೋತ್ಸವ
    ಕ್ಷೇತ್ರದ ಪ್ರಧಾನ ದೈವ ಧೂಮಾವತಿ ನೇಮೋತ್ಸವ ಫೆ.29ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಬೆಳಗ್ಗೆ 7ರಿಂದ ಗಂಟೆಯಿಂದ ಮಾತಮಾತೆ ದೇಯಿ ಬೈದೆತಿ ಮಹಾಸಮಾಧಿಯಲ್ಲಿ ದೀಪಾರಾಧನಾ ಮಹೋತ್ಸವ, ಧೂಮಾವತಿ ನೇಮೋತ್ಸವ ಬಳಿಕ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ಕಲಶ ಹೋಮ, ರಾತ್ರಿ 9 ಗಂಟೆಯಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ, ರಾತ್ರಿ 12 ಗಂಟೆಯಿಂದ ಕಲ್ಲಲ್ದಾಯ ದೈವದ ಕೋಲ ಮತ್ತು ಬಳಿಕ ಕೊರತಿ ದೈವದ ಕೋಲ ನಡೆಯಲಿದೆ.ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಪ್ರಜ್ವಲನೆ ಮಾಡುವರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭಾಶಂಸನೆ ಮಾಡುವರು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿರುವರು. ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸಂಜೀವ ಮಠಂದೂರು, ಸುನೀಲ್‌ಕುಮಾರ್, ಸುಭಾಷ್ ಗುತ್ತೇದಾರ್ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts