More

  ಕನ್ನಡ ಶಾಲೆಗಳಿಗೆ ವೇತನಾನುದಾನ ನೀಡಿ

  ಗಜೇಂದ್ರಗಡ: ರಾಜ್ಯದಲ್ಲಿ 1995 ರಿಂದ 2005ರವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳಿಗೆ ವೇತನಾನುದಾನ ಭಾಗ್ಯ ನೀಡುವಂತೆ ಒತ್ತಾಯಿಸಿ ರಾಜ್ಯ ಅನುದಾನ ರಹಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
  ಪ್ರತಿ ಮಗುವಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರವೇ ರಾಜ್ಯದ ಎಲ್ಲ ಭಾಗಗಳಲ್ಲಿ ಶಾಲಾ- ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಖಾಸಗಿಯವರು ಮತ್ತು ಮಠ ಮಾನ್ಯಗಳು ಶಾಲಾ- ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡುತ್ತ ಸರ್ಕಾರದ ಜವಾಬ್ದಾರಿಯನ್ನು ಕಡಿಮೆ ಮಾಡಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಶಿಕ್ಷಣ ನೀಡುವ ಎಲ್ಲ ವಿದ್ಯಾಸಂಸ್ಥೆಗಳಿಗೆ ಅನುದಾನ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ತಳೆದಿರುವುದು ಕನ್ನಡಿಗರ ದುರ್ದೈವ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
  ರಾಜ್ಯದಲ್ಲಿ ಸ್ವಾತಂತ್ರೃಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ವೇತನಾನುದಾನ ನೀಡುತ್ತಿತ್ತು. ನಂತರ ಈ ಪ್ರಕ್ರಿಯೆ 1986ಕ್ಕೆ ಸ್ಥಗಿತಗೊಂಡಿತು. 1999ರಲ್ಲಿ ಕಾಂಗ್ರೆಸ್ ಸರ್ಕಾರ 1987 ರಿಂದ 1992ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಸಂಸ್ಥೆಗಳಿಗೆ ವೇತನಾನುದಾನ ನೀಡಿತು. ಆನಂತರ 2006ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರಗಳು 1987ರಿಂದ 1995ರವರೆಗೆ ಎಲ್ಲ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಿತು. ಅಲ್ಲಿಂದ ಈವರೆಗೆ ಒಂದೇ ಒಂದು ವರ್ಷವೂ ವಿಸ್ತರಣೆಯಾಗಲಿಲ್ಲ. 2010ರಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿವೆ ಎಂದು ತಿಳಿಸಿದ್ದಾರೆ.
  ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳ ನಿರ್ವಹಣೆಯಲ್ಲಿರುವ 2012ಕ್ಕಿಂತ ಮೊದಲು ಆರಂಭಿಸಿದ ಶಿಕ್ಷಣ ಸಂಸ್ಥೆ ಮತ್ತು ಸಾಮಾನ್ಯ ವರ್ಗದ ಶಾಲಾ-ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು. 1995 ರಿಂದ 2005ರವರೆಗೆ ಆರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳಿಗೆ ವೇತನಾನುದಾನ ನೀಡಿ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಬೇಕು. ಶಾಲಾ- ಕಾಲೇಜುಗಳಲ್ಲಿ ಕೆಲಸ ಮಾಡುವ ಸಾವಿರಾರು ಶಿಕ್ಷಕರು ಹಾಗೂ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳಿಗೆ ಆಸರೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಎಚ್.ಬಿ. ಬಿಸನಳ್ಳಿ, ಆರ್.ಎ. ಉಣಚಗೇರಿಶೆಟ್ರ, ಎಲ್.ಎಸ್. ಕಾಶಪ್ಪನವರ, ಎಂ.ಎಸ್. ಪತ್ತಾರ, ಜಿ.ಎಸ್. ಜುಕ್ತಿಹಿರೇಮಠ, ವಿ.ಕೆ. ಹುದ್ದಾರ, ಎ.ಎ. ಬಾರಕೇರ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts