More

    5ರಂದು ಗೈಲ್ ಪೈಪ್‌ಲೈನ್ ಲೋಕಾರ್ಪಣೆ

    ಮಂಗಳೂರು: ಮಂಗಳೂರು-ಕೊಚ್ಚಿನ್ ಸಿಎನ್‌ಜಿ ಪೈಪ್‌ಲೈನನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜ.5ರಂದು ಲೋಕಾರ್ಪಣೆಗೊಳಿಸಲಿದ್ದಾರೆ.
    450 ಕಿ.ಮೀ ಉದ್ದದ ಈ ಪೈಪ್‌ಲೈನ್ ಕಳೆದ ನವೆಂಬರ್‌ನಲ್ಲಷ್ಟೇ ಪೂರ್ಣಗೊಂಡು, ಮಂಗಳೂರಿಗೆ ತಲಪಿದೆ. ಅಧಿಕೃತ ಲೋಕಾರ್ಪಣೆ ಅಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮುಖೇನ ನೆರವೇರಿಸಲಿದ್ದಾರೆ ಎಂದು ಗೈಲ್ ಸಂಸ್ಥೆಯ ಅಧ್ಯಕ್ಷ ಮನೋಜ್ ಜೈನ್ ಶನಿವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೇರಳ ಹಾಗೂ ಕರ್ನಾಟಕದ ಜನರಿಗೆ ಪರಿಸರ ಸ್ನೇಹಿ ಇಂಧನ ಒದಗಿಸುವಲ್ಲಿ ಇದು ಕ್ರಾಂತಿಕಾರಿ ಬೆಳವಣಿಗೆ. ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜುಭಾಯ್‌ವಾಲಾ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪಿಣರಾಯಿ ವಿಜಯನ್, ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಕೊಚ್ಚಿನ್‌ನ ಪೆಟ್ರೋನೆಟ್ ಸಂಸ್ಥೆಯ ಸ್ಥಾವರದಿಂದ ದಿನದ 24 ಗಂಟೆಯೂ ಪಂಪ್ ಆಗುವ ಸಿಎನ್‌ಜಿ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿಗೆ ತಲುಪುತ್ತಿದೆ. ಉಭಯ ರಾಜ್ಯ ಸರ್ಕಾರಗಳು, ಜನರ ಸಹಕಾರದಿಂದ ಇದು ಪೂರ್ಣಗೊಳ್ಳುವುದು ಸಾಧ್ಯವಾಗಿದೆ. ಪರಿಸರ ಸ್ನೇಹಿ ಇಂಧನವಾಗಿರುವ ಸಿಎನ್‌ಜಿ ಬಳಸಿ ಮಂಗಳೂರಿನ ಎಂಸಿಎಫ್ ಕಂಪನಿ ಯೂರಿಯಾ ಉತ್ಪಾದಿಸುತ್ತಿದೆ, ಒಂದು ತಿಂಗಳಲ್ಲಿ ಒಎಂಪಿಎಲ್ ಹಾಗೂ ಎಂಆರ್‌ಪಿಎಲ್ ಕಂಪನಿಗಳಿಗೂ ಗ್ಯಾಸ್ ಪೂರೈಸಲಾಗುವುದು ಎಂದರು.

    ಗೈಲ್ ಮಾರ್ಕೆಟಿಂಗ್ ನಿರ್ದೇಶಕ ಇ.ಎಸ್.ರಂಗನಾಥನ್, ವ್ಯಾಪಾರಾಭಿವೃದ್ಧಿ ನಿರ್ದೇಶಕ ಎಂ.ವಿ.ಅಯ್ಯರ್ ಹಾಜರಿದ್ದರು.

    ಕಡಿಮೆ ವೆಚ್ಚ: ವಾಹನದಲ್ಲಿ ಸಿಎನ್‌ಜಿ ಬಳಕೆಯಿಂದ ಇತರ ಇಂಧನಗಳಿಗೆ ಹೋಲಿಸಿದರೆ ಶೇ 30-40ರಷ್ಟು ಕಡಿಮೆ ವೆಚ್ಚದಾಯಕ. ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಹೋಲಿಸಿದರೆ ಶೇ 10-20ರಷ್ಟು ಕಡಿಮೆ ವೆಚ್ಚ ಬರಬಹುದು. ಕೈಗಾರಿಕೆಗಳಿಗೆ ವೆಚ್ಚ ಕಡಿಮೆಯಷ್ಟೇ ಅಲ್ಲದೆ ನಿರ್ವಹಣೆಯೂ ಸುಲಭವಾಗಿದೆ ಎಂದು ಮನೋಜ್ ಜೈನ್ ತಿಳಿಸಿದರು.

    ಸುರಕ್ಷಿತ ಗ್ಯಾಸ್: ಎಲ್‌ಪಿಜಿ, ಸಿಎನ್‌ಜಿ ಎರಡೂ ಸುರಕ್ಷಿತ ಅನಿಲಗಳು, ಅದರಲ್ಲೂ ಸಿಎನ್‌ಜಿ ಇನ್ನೂ ಹಗುರ. ಸೋರಿಕೆಯಾದ ಕೂಡಲೇ ಗಾಳಿಯಲ್ಲಿ ಲೀನವಾಗುತ್ತದೆ. ಹಾಗಾಗಿ ಇದರಿಂದ ಅಪಾಯ ಕಡಿಮೆ. ವಿಶ್ವದರ್ಜೆಯ ಪೈಪ್‌ಲೈನ್ ಮೂಲಕ ಇದನ್ನು ಸಾಗಿಸಲಾಗುತ್ತದೆ, ಅಪಾಯ ಭೀತಿ ಅನಗತ್ಯ ಎಂದು ಜೈನ್ ವಿವರಿಸಿದರು. ರಾಜ್ಯದ 28 ಜಿಲ್ಲೆಗಳಲ್ಲಿ ಸಿಎನ್‌ಜಿ ವಿತರಣೆಗೆ ಸಿದ್ಧತೆಗಳಾಗುತ್ತಿವೆ, ಕೃಷ್ಣಗಿರಿ-ಬೆಂಗಳೂರು ಪೈಪ್‌ಲೈನ್ ಅಲ್ಲದೆ ಕೊಚ್ಚಿನ್-ಬೆಂಗಳೂರು ಕೂಡ ಅಂತಿಮ ಹಂತದಲ್ಲಿದೆ. ಈ ಮೂಲಕ ರಾಜ್ಯವೇ ಸಿಎನ್‌ಜಿ ಬಳಕೆಗೆ ಸನ್ನದ್ಧಗೊಂಡಿದೆ. ಹೊಸೂರಿನಲ್ಲಿ ಸಿಎನ್‌ಜಿ ವಿತರಣೆಗೆ ಸಿದ್ಧತೆ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಗೈಲ್ ಗ್ಯಾಸ್ ಮೂಲಕ ಮನೆ ಮನೆಗೆ ಇನ್ನು ಕೆಲ ತಿಂಗಳಲ್ಲಿ ಸಿಎನ್‌ಜಿ ಪೂರೈಸಲಾಗುವುದು ಎಂದರು.

    444 ಕಿ.ಮೀ ಉದ್ದದ ಪೈಪ್‌ಲೈನ್: 444 ಕಿ.ಮೀ ಉದ್ದದ ಪೈಪ್‌ಲೈನ್‌ನ ಕೆಲಸವನ್ನು 2915 ಕೋಟಿ ರೂ.ವೆಚ್ಚದಲ್ಲಿ 2012ರಲ್ಲಿ ಪ್ರಾರಂಭಿಸಲಾಗಿತ್ತು. 2018ರೊಳಗೆ ಮುಗಿಸಬೇಕಿತ್ತು. ಆದರೆ ಭೂಸ್ವಾಧೀನ ವಿಳಂಬದಿಂದಾಗಿ ಯೋಜನೆ ಅನುಷ್ಠಾನ ಪ್ರಗತಿ ಕುಂಠಿತವಾಗಿತ್ತು. ಇದರಿಂದಾಗಿ ಯೋಜನಾ ವೆಚ್ಚವೂ 5,750 ಕೋಟಿ ರೂ.ಗೆ ಏರಿಕೆ ಕಂಡಿತು. ಕೊಚ್ಚಿಯಿಂದ 90 ಕಿ.ಮೀ.ಉತ್ತರಕ್ಕೆ ಕುಟ್ಟನಾಡುವರೆಗೆ 2019ರಲ್ಲೇ ಗ್ಯಾಸ್ ಲಭ್ಯವಾಗಿ ದ್ದರೆ ಬಳಿಕ 354 ಕಿ.ಮೀ ದೂರದ ಕಣ್ಣೂರುವರೆಗೆ ಪೈಪ್‌ಲೈನ್ ಸಿದ್ಧಗೊಂಡಿತು. ಬಳಿಕ 2020ರ ಕೊನೆಯ ಹಂತದಲ್ಲಿ ಮಂಗಳೂರಿಗೆ ಗ್ಯಾಸ್ ತಲುಪಿದೆ. ವಿದೇಶಗಳಿಂದ ಕೊಚ್ಚಿನ್‌ಗೆ ಹಡಗುಗಳಲ್ಲಿ ಮೈನಸ್ 162 ಡಿಗ್ರಿಯಷ್ಟು ತಂಪಿನಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಬರುತ್ತ ದೆ. ಬಿಸಿ ಮಾಡಿದಾಗ ಇದು 600 ಪಟ್ಟು ಹಿಗ್ಗುತ್ತದೆ. ಹಾಗೆ ಹಿಗ್ಗುವ ಅನಿಲವನ್ನು ಪೈಪ್‌ಲೈನ್ ಮೂಲಕ ಕಳುಹಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts