More

    ಮೂರು ತಿಂಗಳಲ್ಲಿ ಎಲ್‌ಎನ್‌ಜಿ ಮಂಗಳೂರಿಗೆ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಬಹುನಿರೀಕ್ಷಿತ 444 ಕಿ.ಮೀ. ಉದ್ದದ ಕೊಚ್ಚಿ-ಮಂಗಳೂರು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೈಪ್‌ಲೈನ್ ಯೋಜನೆಗೆ ನೇತ್ರಾವತಿ ಭಾಗದಲ್ಲಿ ಪೈಪ್‌ಲೈನ್ ಅಳವಡಿಸುವ ಕೆಲಸ ಕೊನೆಗೂ ಪೂರ್ಣಗೊಂಡಿದ್ದು, ಮೇ ಮೊದಲ ವಾರ ಮಂಗಳೂರಿಗೆ ಎಲ್‌ಎನ್‌ಜಿ ಅನಿಲ ತಲುಪುವುದು ಬಹುತೇಕ ನಿಶ್ಚಿತ.

    ದಕ್ಷಿಣ ಕನ್ನಡದ 35 ಕಿ.ಮೀ ಪೈಪ್‌ಲೈನ್ ಕೆಲಸವೂ ಮುಗಿದಿದೆ, ಆದರೆ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಗಡ್ಡವಾಗಿ ಪೈಪ್‌ಲೈನ್ ದಾಟಿಸುವ ಕೆಲಸವೊಂದು ಬಾಕಿ ಇದ್ದು, ಅದು ಪೂರ್ಣಗೊಂಡರೆ ಮಂಗಳೂರಿಗೆ ಅನಿಲ ಬರುವುದಕ್ಕೆ ಯಾವುದೇ ಅಡ್ಡಿ ಇರದು.
    ಈ ಮೊದಲು ಸೆಪ್ಟೆಂಬರ್ 2018ಕ್ಕೆ ಪೈಪ್‌ಲೈನ್ ಮುಗಿಸುವುದಾಗಿ ಭಾರತೀಯ ಅನಿಲ ಪ್ರಾಧಿಕಾರ (ಗೈಲ್ ಇಂಡಿಯಾ) ಹೇಳಿಕೊಂಡಿತ್ತು. ಆದರೆ ನೇತ್ರಾವತಿ ಮತ್ತು ಚಂದ್ರಗಿರಿ ನದಿಗಡ್ಡವಾಗಿ ಪೈಪ್ ಕ್ರಾಸ್ ಮಾಡುವುದು ಕಂಪನಿಗೆ ದೊಡ್ಡ ಸವಾಲಾಗಿತ್ತು.
    ನೇತ್ರಾವತಿ ನದಿಯ 410 ಮೀಟರ್ ಅಗಲದ ಪಾತ್ರದಲ್ಲಿ ಇನೋಳಿ ಹಾಗೂ ಅರ್ಕುಳ ಮಧ್ಯೆ ಐದು ದಿನಗಳ ಹಿಂದಷ್ಟೇ ಪೈಪ್ ಕ್ರಾಸಿಂಗ್ ಕೆಲಸ ಪೂರ್ಣಗೊಂಡಿದೆ. ನದಿಯ ತಳದಲ್ಲಿ 6 ಮೀ.ನಷ್ಟು ಕೆಳಗೆ ಪೈಪ್ ಹಾಕಲಾಗಿದೆ.
    ಚಂದ್ರಗಿರಿಯಲ್ಲಿ ಪೈಪ್ ಕ್ರಾಸ್ ಮಾಡಿಸುವುದು ದೊಡ್ಡ ಸವಾಲು. ಎರಡೂ ಬದಿಯಲ್ಲೂ ಮನೆಗಳ ಸಂಖ್ಯೆ ಹೆಚ್ಚಿದೆ ಹಾಗೂ ಕಡಿದಾದ ಗುಡ್ಡಗಳಿವೆ. ಇಲ್ಲಿ ಡ್ರಿಲ್ಲಿಂಗ್ ಮೂಲಕ ಒಂದು ಗುಡ್ಡದಿಂದ ಇನ್ನೊಂದು ಗುಡ್ಡಕ್ಕೆ ಪೈಪ್ ಕ್ರಾಸ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ಗೈಲ್ ಜನರಲ್ ಮ್ಯಾನೇಜರ್ ಟೋನಿ ಮ್ಯಾಥ್ಯು ‘ವಿಜಯವಾಣಿ’ಗೆ ತಿಳಿಸಿದರು.

    ಅರ್ಕುಳದಲ್ಲಿ ಟರ್ಮಿನಲ್: ಫರಂಗಿಪೇಟೆ ಸಮೀಪ ಅರ್ಕುಳದಲ್ಲಿ ಪೈಪ್‌ಲೈನ್ ಗ್ಯಾಸ್‌ನ್ನು ಎಂಸಿಎಫ್ ಟರ್ಮಿನಲ್‌ಗೆ ಪಂಪ್ ಮಾಡುವುದಕ್ಕೆ ಬೇಕಾದ ಎಲ್‌ಎನ್‌ಜಿ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಎರಡು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಿನ ಲೆಕ್ಕಾಚಾರದಂತೆ 4 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಎಲ್‌ಎನ್‌ಜಿಗೆ ಮಂಗಳೂರಿನಲ್ಲಿ ಡಿಮಾಂಡ್ ಇದೆ. ಎಲ್‌ಎನ್‌ಜಿಗೆ ದ.ಕ ಜಿಲ್ಲೆಯಲ್ಲಿ ಎಂಸಿಎಫ್ ದೊಡ್ಡ ಗ್ರಾಹಕರಾಗಿದ್ದು, ಕಂಪನಿ ಆವರಣದಲ್ಲಿ ಈಗಾಗಲೇ ಅನಿಲ ಸ್ವೀಕರಣಾ ಕೇಂದ್ರ ತಲೆಯೆತ್ತಿದೆ. ಅಲ್ಲಿಂದ ನಗರ ಅನಿಲ ವಿತರಣಾ ಜಾಲ ನಿರ್ಮಾಣಕಾರ್ಯ ಇನ್ನಷ್ಟೇ ಆಗಬೇಕಿದೆ.

    ಮೊದಲು ಕಣ್ಣೂರಿಗೆ: ಪ್ರಸ್ತುತ ಚಂದ್ರಗಿರಿ ನದಿಯಲ್ಲಿ ಮಾತ್ರ ಕೆಲಸ ಬಾಕಿ ಇದ್ದು, ಉಳಿದೆಲ್ಲ ಕಡೆಗಳಲ್ಲಿ ಕೆಲಸ ಪೂರ್ತಿಗೊಂಡಿದೆ. ಇತರ ಕಡೆಗಳಲ್ಲಿ ಪೈಪ್‌ಲೈನ್ ಕಮಿಷನಿಂಗ್, ಟೆಸ್ಟಿಂಗ್ ಕೆಲಸವೂ ಕೆಲವು ಸೆಕ್ಷನ್‌ಗಳಲ್ಲಿ ನಡೆಯುತ್ತಿದೆ, ಮಾರ್ಚ್ ಮಧ್ಯಭಾಗದಲ್ಲಿ ಕಣ್ಣೂರು ವರೆಗೂ ಎಲ್‌ಎನ್‌ಜಿ ಬರಲಿದ್ದು, ಅಲ್ಲಿ ಕಮಿಷನಿಂಗ್ ನಡೆಯಲಿದೆ ಎನ್ನುತ್ತಾರೆ ಟೋನಿ ಮ್ಯಾಥ್ಯು.
    ಚಂದ್ರಗಿರಿ ಕೆಲಸ ಪೂರ್ತಿಗೊಂಡ ಬಳಿಕ, ಕಣ್ಣೂರಿನ ಉತ್ತರಕ್ಕೆ ಮಂಗಳೂರುವರೆಗಿನ ಪೈಪ್‌ಲೈನ್ ಟೆಸ್ಟಿಂಗ್ ನಡೆಸಲಾಗುವುದು, ಅದರಂತೆ ಈಗಿನ ಲೆಕ್ಕಾಚಾರ ಪ್ರಕಾರ ಮೇ ತಿಂಗಳಲ್ಲಿ ಮಂಗಳೂರಿಗೆ ಎಲ್‌ಎನ್‌ಜಿ ಬರಲಿದೆ.
    ಈಗಾಗಲೇ ಪೈಪ್‌ಲೈನ್‌ನ ಮೊದಲ 96 ಕಿ.ಮೀ ಭಾಗವನ್ನು ಕಮಿಷನ್ ಮಾಡಲಾಗಿದೆ. ಮೊದಲ 96 ಕಿ.ಮೀ. ಭಾಗದಲ್ಲಿ ಐಪಿ ಸ್ಟೇಷನ್(ಇಂಟರ್‌ಮೀಡಿಯಟ್ ಪಿಗ್ಗಿಂಗ್ ಸ್ಟೇಷನ್) ಇದ್ದರೆ ಎರಡನೇ ಐಪಿ ಸ್ಟೇಷನ್ ಕಣ್ಣೂರಿನಲ್ಲಿದೆ. ಪಿಗ್ಗಿಂಗ್ ಸ್ಟೇಷನ್ ಎಂದರೆ ಪೈಪ್‌ಲೈನ್‌ಗಳ ನಿರ್ವಹಣೆ, ಅವುಗಳ ನಡುವೆ ಶುಚಿಗೊಳಿಸುವ ಮೂಲಸೌಕರ್ಯ ಹೊಂದಿರುವ ಸ್ಟೇಷನ್.

    7 ವರ್ಷ ವಿಳಂಬ: 2009ರಲ್ಲಿ 2915 ಕೋಟಿ ರೂ. ವೆಚ್ಚದ ನಿರೀಕ್ಷೆಯೊಂದಿಗೆ ಪೈಪ್‌ಲೈನ್ ಕಾಮಗಾರಿ ಶುರುವಾಗಿತ್ತು. ಆದರೆ ನಿರಂತರವಾಗಿ ವಿಳಂಬವಾಗುತ್ತಲೇ ಇದ್ದು, ಭೂಮಿಯ ವೆಚ್ಚ ಹಾಗೂ ಇತರ ವೆಚ್ಚಗಳು ಏರಿಕೆಯಾಗಿ ಪ್ರಸ್ತುತ ಒಟ್ಟು ವೆಚ್ಚ 5751 ಕೋಟಿ ರೂ. ತಲುಪಿದೆ. ಈ ಪೈಪ್‌ಲೈನ್‌ನಲ್ಲಿ ಎರಡು ವಿಭಾಗವಿದೆ. ಒಂದು ಕೊಚ್ಚಿನ್-ಕುಟ್ಟನಾಡು-ಮಂಗಳೂರು. ಇನ್ನೊಂದು ಕೊಚ್ಚಿನ್-ಕುಟ್ಟನಾಡು-ಬೆಂಗಳೂರು. ಎರಡನೇ ಯೋಜನೆಯೂ ಕುಂಟುತ್ತಾ ಸಾಗಿದೆ.

    ಕರ್ನಾಟಕ ಭಾಗದಲ್ಲಿ ಪೈಪ್‌ಲೈನ್ ಕೆಲಸ ಪೂರ್ಣಗೊಂಡಿದೆ, ಚಂದ್ರಗಿರಿಯಲ್ಲಿ ಮಾತ್ರವೇ ಬಾಕಿ ಇದೆ, ಉಳಿದಂತೆ ಟೆಸ್ಟಿಂಗ್, ಕಮಿಷನಿಂಗ್ ನಡೆಯುತ್ತಿದೆ, ಮೇ ತಿಂಗಳ ಮೊದಲ ವಾರ ಮಂಗಳೂರಿಗೆ ಎಲ್‌ಎನ್‌ಜಿ ಬರುವುದು ಬಹುತೇಕ ನಿಶ್ಚಿತ.
    -ಟೋನಿ ಮ್ಯಾಥ್ಯು, ಜನರಲ್ ಮ್ಯಾನೇಜರ್, ಗೈಲ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts