More

    ಮಂಗಳೂರಿಗೆ ಹಡಗಿನಲ್ಲಿ ಎಲ್‌ಎನ್‌ಜಿ?

    ಮಂಗಳೂರು: ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಪೂರೈಕೆ ಮಾಡುವ 444 ಕಿ.ಮೀ. ಉದ್ದದ ಗೈಲ್ ಪೈಪ್‌ಲೈನ್ ಕಾಮಗಾರಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ದ.ಕ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣವಾದರೂ, ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಪೈಪ್‌ಲೈನ್ ದಾಟಿಸುವ ಕೆಲಸ ತ್ರಾಸದಾಯಕವಾಗಿದ್ದು, ಪ್ರಸ್ತುತ ಮಳೆ-ಕರೊನಾ ಎರಡೂ ಅಡ್ಡಿಯಾಗಿದೆ.

    ಕಾಮಗಾರಿ ತಡವಾಗಿರುವುದರಿಂದ ಈಗಾಗಲೇ ಗೈಲ್ ಸಂಸ್ಥೆಗೂ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಮಟ್ಟಿಗೆ ಕೊಚ್ಚಿಯಿಂದ ಹಡಗಿನ ಮೂಲಕ 9 ಟನ್ ಮತ್ತು 16 ಟನ್ ಸಾಮರ್ಥ್ಯದ ಎಲ್‌ಎನ್‌ಜಿ ಟ್ಯಾಂಕರ್‌ಗಳ ಮೂಲಕ ಗ್ಯಾಸ್ ತರಿಸಿ ಎಂಸಿಎಫ್‌ಗೆ ಪೂರೈಸಲು ಮಾತುಕತೆ ನಡೆಯುತ್ತಿದೆ. ಎಂಆರ್‌ಪಿಲ್, ಒಎನ್‌ಜಿಸಿ, ಅದಾನಿ ಯುಪಿಸಿಎಲ್ ಸಂಸ್ಥೆಗಳೂ ಎಲ್‌ಎನ್‌ಜಿಗಾಗಿ ಕಾಯುತ್ತಿದೆ ಎಂದು ಗೈಲ್ ಸಂಸ್ಥೆ ಮಂಗಳೂರು ವಿಭಾಗದ ಡಿಜಿಎಂ ವಿಜಯಾನಂದ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಹಡಗಿಗೆ ಪರ್ಯಾಯವಾಗಿ ಕೊಚ್ಚಿಯಿಂದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಇಚಿಲಂಗೋಡುವರೆಗೆ ಎಲ್‌ಎನ್‌ಜಿ ಟ್ಯಾಂಕರ್ ಮೂಲಕ ಅನಿಲ ತಂದು, ಅಲ್ಲಿನ ರಿಸೀವಿಂಗ್ ಸ್ಟೇಷನ್‌ನಿಂದ ಪೈಪ್‌ಲೈನ್ ಮೂಲಕ ಮಂಗಳೂರಿಗೆ ಸರಬರಾಜು ಮಾಡುವ ಸಾಧ್ಯತೆಯೂ ಇದೆ.

    ತಾಂತ್ರಿಕ ಸಮಸ್ಯೆ: ದ.ಕ. ಜಿಲ್ಲೆಯಲ್ಲಿ ಪೈಲ್‌ಲೈನ್ ಕಾಮಗಾರಿ ಈಗಾಗಲೇ ಅಂತಿಮವಾಗಿದ್ದು, ಆಗಸ್ಟ್ ಅಂತ್ಯದಲ್ಲಿ ಅನಿಲ ಪೂರೈಕೆ ಆರಂಭವಾಗುವ ನಿರೀಕ್ಷೆಯಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಕೇರಳ ಪ್ರವೇಶ ನಿಷೇಧಿಸಿರುವುದರಿಂದ ಕಾರ್ಮಿಕರು, ಅಧಿಕಾರಿಗಳ ಸಂಚಾರಕ್ಕೆ ತೊಡಕಾಗಿತ್ತು. ಆ.3ರಿಂದ ಕಾಮಗಾರಿ ಆರಂಭವಾದರೂ, ನದಿಯ ತಳಭಾಗದಲ್ಲಿ ಸುರಂಗ ಮಾದರಿಯಲ್ಲಿ ಪೈಪ್‌ಲೈನ್ ಜೋಡಣೆ ಮಾಡುವ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಮತ್ತೆ ಕಾಮಗಾರಿ ಆರಂಭಿಸಲು ಸುಮಾರು 10 ದಿನ ಅವಶ್ಯವಿದ್ದು, ಬಳಿಕ ಪೂರ್ಣಗೊಳ್ಳಲು 20 ದಿನಗಳ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts