More

    ಗದಗ ಜಿಲ್ಲೆಯಲ್ಲಿ ತಾಪಮಾನದಲ್ಲಿ ಭಾರಿ ಹೆಚ್ಚಳ

    ಗದಗ: ಕಳೆದ ಒಂದು ವಾರದಿಂದ ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲಿನ ಝುಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದ್ದು ಭೂಮಿಯು ಕೆಂಡದಂತಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಯಪ್ಪಾ, ಎಂಥ ಬಿಸಿಲ್ರಿ ಎಂದು ಶಪಿಸುತ್ತಿದ್ದಾರೆ.

    ಕಳೆದೊಂದು ವಾರದಿಂದ ನಿತ್ಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಬಿಸಿಲು ಅಬ್ಬರಿಸುತ್ತಿರುವುದರಿಂದ ಝುಳ ತಡೆದುಕೊಳ್ಳಲು ಜನರಿಗೆ ಸಾಧ್ಯವಾಗುತ್ತಿಲ್ಲ. ಬೆಳಗ್ಗೆ 9 ಗಂಟೆ ಆಗುವಷ್ಟರಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುವುದರಿಂದ ಜನರು ತಂಪು ಪಾನೀಯ ಹಾಗೂ ಹಣ್ಣುಗಳಿಗೆ ಮೊರೆ ಹೋಗುತ್ತಿದ್ದಾರೆ.

    ಕಳೆದ ಐದಾರು ದಿನಗಳಿಂದ 35 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ ಇದು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, 37ರಿಂದ 39 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. 1953ರ ಮಾ.20ರಂದು ದಾಖಲಾದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಿಲ್ಲೆಯ ಸಾರ್ವಕಾಲಿಕ ದಾಖಲೆಯಾಗಿದೆ.

    ಉಷ್ಣಾಂಶ ಹೆಚ್ಚಾದಂತೆ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಮಾರಾಟ ಜೋರಾಗಿದೆ. ಬೆಳಗ್ಗೆ ತರಿಸಿದ ಎಳನೀರು ಮಧ್ಯಾಹ್ನಕ್ಕೆ ಖಾಲಿಯಾಗುತ್ತಿದೆ. 30 ರೂಪಾಯಿಗೆ ಒಂದು ಎಳನೀರು ಮಾರಾಟ ಮಾಡುತ್ತಿದ್ದು, ಮಾರಾಟಗಾರರು ದರವನ್ನು ಏರಿಕೆ ಮಾಡಿಲ್ಲ ಎಂಬುದೇ ಜನರಿಗೆ ಕೊಂಚ ಸಮಾಧಾನಕರ ಸಂಗತಿ.

    ಮಾರಾಟಗಾರರು ತಮಿಳುನಾಡು, ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಿಂದ ಲಾರಿಯಲ್ಲಿ ಲೋಡ್​ಗಟ್ಟಲೇ ಕಲ್ಲಂಗಡಿ ತರಿಸುತ್ತಿದ್ದಾರೆ. ಒಂದು ಟನ್​ಗೆ 10 ಸಾವಿರ ರೂಪಾಯಿ ಇದ್ದ ಬೆಲೆ 15ರಿಂದ 20 ಸಾವಿರ ರೂಪಾಯಿಗೆ ಏರಿದೆ. ಮಾರಾಟಗಾರರು ಕೆಜಿ ಲೆಕ್ಕದಲ್ಲಿ ಕಲ್ಲಂಗಡಿ ಮಾರಾಟ ಮಾಡುತ್ತಿದ್ದು, ಒಂದು ಕೆಜಿಗೆ 25 ರೂಪಾಯಿ ದರವಿದೆ.

    ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ಜಾಸ್ತಿಯಾಗಿದ್ದು ಜನರು ಹೆಚ್ಚೆಚ್ಚು ನೀರು ಕುಡಿಯಬೇಕು. ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಹೀಟ್ ಸ್ಟ್ರೋಕ್ ಆಗಿ ಅಪಾಯವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಹೆಚ್ಚು ನೀರು ಕುಡಿಯಬೇಕು. ಎಳನೀರು, ನೀರಿನಾಂಶ ಹೆಚ್ಚಿರುವ ಸೌತೆಕಾಯಿ ಮತ್ತಿತರ ತರಕಾರಿ, ಹಣ್ಣು ತಿನ್ನಬೇಕು. ಮಿತ ಆಹಾರ ಸೇವನೆ ಮಾಡುವುದು ಒಳಿತು.

    | ಡಾ. ಎಸ್.ಎಸ್. ನೀಲಗುಂದ ತಾಲೂಕು ಆರೋಗ್ಯಾಧಿಕಾರಿ, ಗದಗ

    ಹೋದ ವರ್ಷ ಕರೊನಾ ಬಂದು ವ್ಯಾಪಾರ ಇಲ್ದಂಗಾಗಿತ್ತು. ಈ ವರ್ಷ ಏನರ ದುಡೀಬೇಕಂದ್ರ ಮತ್ ಕರೊನಾ ಭೂತ ಶುರುವಾಗಿದೆ. ಜನರು ಕಲ್ಲಂಗಡಿ ಹಣ್ಣು ಖರೀದಿ ಮಾಡಾಕತ್ತಾರ. ಕತ್ತರಿಸಿಟ್ಟ ಹಣ್ಣಿನ ಹೋಳು ತಿನ್ನವ್ರು ಜಾಸ್ತಿ ಆಗ್ಯಾರ. ಕಲ್ಲಂಗಡಿ ದರ ಹೆಚ್ಚಿದ್ರೂ ಜನ ಹಣ್ಣು ಖರೀದಿ ಮಾಡಾಕತ್ತಾರ.

    | ತೌಸಿಫ್ ಮುಂಡರಗಿ ವೀರಣ್ಣ ಹುಡೇದ, ಕಲ್ಲಂಗಡಿ ವ್ಯಾಪಾರಿಗಳು, ಗದಗ

    ಒಂದ್ ವಾರದಿಂದ ಬಿಸಿಲು ಹೆಚ್ಚಾಗೇತ್ರಿ. ಮನಿ ಬಿಟ್ಟು ಹೊರಗ ಬರಾಕ ಹೆದರಿಕಿ ಆಕ್ಕೇತಿ. ಹತ್ತು ನಿಮಿಷ ಹೊರಗ ಹೋದ್ರ ನೆತ್ತಿ ಸುಟ್ಟಂಗ ಆಕ್ಕೇತಿ. ಹಗಲನ್ಯಾಗ ಬಿಸಿಲಿನ ಕಾಟ, ರಾತ್ರಿ ಸೊಳ್ಳೆಗಳ ಕಾಟ ತಡ್ಯಾಕ್ ಆಗಂಗಿಲ್ರಿ. ಅನಾರೋಗ್ಯ ಪೀಡಿತರ ಸಮಸ್ಯೆ ಹೇಳದಂತಾಗೇತಿ.

    | ನಾಗಲಿಂಗ ಮಲ್ಲಾಪೂರ ಬೆಟಗೇರಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts