More

    ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಇನ್ನೂ ಮುಂದೆ ಇ-ಆಫೀಸ್ ಸೇವೆ

    ಬೆಂಗಳೂರು: ದೇಶದ ಪೊಲೀಸ್ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಕಮಿಷನರೇಟ್ ಇದೀಗ ಕಾಗದರಹಿತ ಸೇವೆಗೆ (ಇ-ಆಫೀಸ್) ಮುಂದಾಗಿದೆ.

    ರಾಜ್ಯ ಸರ್ಕಾರದ ಆದೇಶದಂತೆ ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಸಂಪೂರ್ಣವಾಗಿ ಕಾಗದರಹಿತ ಸೇವೆ ಆರಂಭಿಸಿದ್ದು, ಸಾಂಪ್ರದಾಯಿಕ ದಾಖಲೆಗಳನ್ನು ಭೌತಿಕ ಕಡತಗಳ ಪ್ರಕ್ರಿಯೆಗೆ ಗುಡ್ ಬೈ ಹೇಳಿ ಡಿಜಿಟಲ್ ರೂಪದಲ್ಲಿ ಕಡತಗಳ ವಿಲೇವಾರಿಗೆ ಇಲಾಖೆ ಚಾಲನೆ ನೀಡಿದೆ.

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಇ-ಆಫೀಸ್‌ಗೆ ಪರಿವರ್ತನೆ ಮಾಡಲಾಗಿದೆ. ಒಂದು ವೇಳೆ ಭೌತಿಕವಾಗಿ ಕಡತಗಳನ್ನು ಬಳಸುವ ಅಧಿಕಾರಿ, ಯಾವ ಉದ್ದೇಶಕ್ಕೆ ಎಂದು ಸೂಕ್ತ ವಿವರಣೆ ನೀಡಬೇಕು. ಈಗಾಗಲೆ ಎಲ್ಲ ಡಿಸಿಪಿ ಕಚೇರಿಗಳಲ್ಲೂ ಕಾಗದರಹಿತ ಸೇವೆ ಆರಂಭ ಆಗಿದೆ.

    ಪೊಲೀಸ್ ಆಯುಕ್ತರ ಮತ್ತು ಡಿಸಿಪಿ ಕಚೇರಿಗಳ ನಡುವೆ ನಡೆಯುತ್ತಿದ್ದ ಕಡತಗಳ ವಿಲೇವಾರಿ ಮಾಡುತ್ತಿದ್ದ ಟಪಾಲು ಶಾಖೆಯನ್ನು ಮುಚ್ಚಲಾಗಿದೆ. ಅಲ್ಲಿನ ಸಿಬ್ಬಂದಿಗೆ ಪರ್ಯಾಯ ಕೆಲಸ ನೀಡಲಾಗಿದೆ. ಅಧಿಕಾರಿ, ಸಿಬ್ಬಂದಿಗೆ ಸೇರಿದ ಎಲ್ಲ ಕಡತಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಕಚೇರಿಯಲ್ಲಿ ಜಾಗದ ಕೊರತೆ, ಮಾನವ ಸಂಪನ್ಮೂಲ, ಕಾಗದ ಉಳಿಯಲಿದೆ. ಒಂದೆಡೆಯಿಂದ ಮತ್ತೊಂದೆಡೆ ಹಳೆಯ ದಾಖಲೆಗಳ ಸ್ಥಳಾಂತರ ಮತ್ತು ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಂತೆ ಆಗಿದೆ ಎಂದು ಮಾಹಿತಿ ನೀಡಿದರು.

    ಠಾಣೆಗಳಲ್ಲಿ ಪ್ರಯೋಗಿಕ ಜಾರಿ

    ಆಗ್ನೇಯ ವಿಭಾಗದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಾಗದರಹಿತ ಸೇವೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿದೆ. ಸಾಧಕ-ಬಾಧಕಗಳನ್ನು ಪರಿಶೀಲನೆ ನಡೆಸಿ ಜನರಿಗೆ ಅನುಕೂಲ ಆಗುವಂತೆ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ವಿಶ್ವಾಸ ವ್ಯಕ್ತಪಡಿಸಿದರು.

    ಇ-ಆಫೀಸ್ ಅನುಕೂಲಗಳು

    *ಮಾನವ ಸಂಪನ್ಮೂಲ, ಕಾಗದ, ಸಮಯ, ಸ್ಥಳ ಉಳಿತಾಯ
    *ಕಡತಗಳ ಮೇಲೆ ನಿಗಾ ವಹಿಸಿ ಪಾರದರ್ಶಕ ಸೇವೆ
    *ಕಡತಗಳ ಕಳವು, ನಾಪತ್ತೆ ದೂರುಗಳಿಗೆ ತಿಲಾಂಜಲಿ
    *ಇಲಾಖೆ ಗೌಪ್ಯತೆ ಕಾಪಾಡಿಕೊಳ್ಳಲು ಅನುಕೂಲ

    ಇ-ಆಫೀಸ್ ವ್ಯವಸ್ಥೆಯಿಂದ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕೆಲಸದ ವೇಗ ಹೆಚ್ಚಿಸಲು ಅನುಕೂಲವಾಗಿದೆ. ಕಾಗದರಹಿತ ಸೇವೆಯನ್ನು ಹಂತ ಹಂತವಾಗಿ ಜನಸ್ನೇಹಿ ಮಾಡುತ್ತೇವೆ.
    ಬಿ.ದಯಾನಂದ್- ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts