More

    ಹಳ್ಳಿಗರ ಕುಡಿಯುವ ನೀರಿನ ದಾಹ ತಣಿಸಲು ಮುಂದಾದ ಸರ್ಕಾರ

    ಬೆಂಗಳೂರು: ರಾಜ್ಯದ ಬಹಳಷ್ಟು ಕಡೆ ಈಗಷ್ಟೇ ಮಳೆ ಸುರಿಯಲಾರಂಭಿಸಿದೆ. ಆದರೂ ಸಮರ್ಪಕ ಮಳೆಯಿಲ್ಲದೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಿದೆ. ಜನ ಸಮುದಾಯ ಮತ್ತು ಪ್ರತಿಪಕ್ಷಗಳ ಒತ್ತಾಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿ, ಹಳ್ಳಿಗರ ಕುಡಿಯುವ ನೀರಿನ ದಾಹ ತಣಿಸಲು ಮುಂದಾಗಿದೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ರೂಪುರೇಷ ವರದಿ ತಯಾರಾಗಿದೆ. ಕಂಟೆನ್ಜೆನ್ಸಿ ಪ್ಲ್ಯಾನ್‌ನಂತೆ 5.14 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಿಂದೆ ಒಂದು ಕೋಟಿ ರೂಗಳನ್ನು ಸರ್ಕಾರ ಒದಗಿಸಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

    ರಾಜ್ಯದ ಹಲವೆಡೆ ಮುಂಗಾರು ಮಳೆ ಅಭಾವ ಉಂಟಾಗಿದೆ. ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆವಹಿಸಿ, ಎಲ್ಲ ಜಿ.ಪಂ. ಸಿಇಒಗಳ ಸಭೆ ಕರೆದು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

    ರಾಜ್ಯ ಸರ್ಕಾರ ರಚಿಸಿರುವ ಸಚಿವ ಸಂಪುಟದ ಉಪಸಮಿತಿ ಎರಡು ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಪಷ್ಟಚಿತ್ರಣ ರೂಪಿಸಿದೆ. ಇದೀಗ ರೂಪುರೇಷೆ ವರದಿಯಂತೆ ಜಿಲ್ಲಾವಾರು ಎಷ್ಟು ತಾಲೂಕುಗಳಲ್ಲಿ ಮಳೆಯಾಗಿದೆ ಎಂಬ ಮಾಹಿತಿ ಆಧರಿಸಿ ಹಣ ಬಿಡುಗಡೆ ಮಾಡಲಾಗಿದೆ.
    ಎಷ್ಟು ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಎಲ್ಲೆಲ್ಲಿ ಕೆರೆಗಳ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಯಾವ ಹಳ್ಳಿಗಳಿಗೆ ಟ್ಯಾಂಕರ್, ಕೊಳವೆ ಬಾವಿ ಮೂಲಕ ನೀರು ಒದಗಿಸಬೇಕು ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

    254 ಹಳ್ಳಿಗಳಿಗೆ ಟ್ಯಾಂಕರ್ ನೀರು

    ವರದಿ ಪ್ರಕಾರ ಒಟ್ಟು 101 ತಾಲೂಕುಗಳು 366 ಗ್ರಾಮ ಪಂಚಾಯಿತಿಗಳ 514 ಹಳ್ಳಿಗಳಿಗೆ 254 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುವುದು. ಪ್ರತಿದಿನ 703 ಟ್ರಿಪ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತದೆ. ಜತೆಗೆ 465 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಜನರಿಗೆ ಪೂರೈಸಲೂ ಹಣ ಒದಗಿಸಲಾಗಿದೆ.

    ಒಟ್ಟು ಟ್ಯಾಂಕರ್ ನೀರು ಪೂರೈಕೆಗೆ 4.21 ಕೋಟಿ ರೂ, ಖಾಸಗಿ ಕೊಳವೆ ಬಾವಿಗಳ ಬಾಡಿಗೆಗೆ 93 ಲಕ್ಷ ರೂ. ನೀಡಲಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುನ್ನೆಚ್ಚರಿಕೆವಹಿಸಿ, ಅಧಿಕಾರಿಗಳಿಗೆ ಸೂಕ್ತಕ್ರಮಕೈಗೊಳ್ಳಲು ಜವಾಬ್ದಾರಿ ಒಪ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts