More

    ಜಿಲ್ಲಾಡಳಿತದಿಂದ ಎಲ್ಲರಿಗೂ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ

    ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮಸ್ಥರು ಕರೊನಾ ವೈರಸ್ ಕುರಿತಂತೆ ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು. ಇಲ್ಲಿನ ಸಮಸ್ಯೆಗಳನ್ನು ಜಿಲ್ಲಾಡಳಿತ ಗಮನಿಸಿದೆ. ವೈದ್ಯಕೀಯ ಸೌಲಭ್ಯ, ಅಗತ್ಯ ವಸ್ತುಗಳ ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಸೇರಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಭರವಸೆ ನೀಡಿದರು.

    ಹಿರೇಬಾಗೇವಾಡಿ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ಕರೊನಾ ಸೋಂಕು ಸಂಪೂರ್ಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿನ ಜನರು ಸಹಕರಿಸಿದರೆ ಮಾತ್ರ ಸೋಂಕು ಹರಡುವಿಕೆ ತಡೆಯಲು ಸಾಧ್ಯ. ಕಂಟೈನ್ಮೆಂಟ್ ಝೋನ್‌ನಲ್ಲಿ ಟ್ರ್ಯಾಕ್ಟರ್ ಮೂಲಕ ಪಡಿತರ ಹಾಗೂ ಆಹಾರ ಧಾನ್ಯ ವಿತರಿಸಬೇಕು. ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಲಸೆ ಬಂದವರಿಗೆ ಆಹಾರ ಧಾನ್ಯ ಕಿಟ್ ವಿತರಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಅಗತ್ಯ ವಸ್ತು ಪೂರೈಕೆ: ಆಹಾರ ಮತ್ತ ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಮಾತನಾಡಿ, ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತಿದಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೋಂಕು ನಿವಾರಕ ಔಷಧ ಸಿಂಪಡಿಸಬೇಕು. ಈ ಗ್ರಾಮದ 175 ಜನರ ಗಂಟಲು ದ್ರವ ಮಾದರಿ ವರದಿ ಬರಬೇಕಿದೆ. ಹಿರೇಬಾಗೇವಾಡಿಯಲ್ಲಿ ಸುಮಾರು 3 ಸಾವಿರ ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೆ ಸರ್ಕಾರದ ನಿಯಮಾವಳಿ ಪ್ರಕಾರ ಅಗತ್ಯ ವಸ್ತು ಪೂರೈಕೆ ಮಾಡಲಾಗುವುದು ಎಂದರು.

    ಉಚಿತ ಅಕ್ಕಿ ವಿತರಣೆ: ಏಪ್ರಿಲ್‌ನಲ್ಲಿ 2,820 ಕಾರ್ಡ್‌ದಾರರಿಗೆ 870 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಮೇ ತಿಂಗಳಿಗೆ ಕೇಂದ್ರದ ಗರೀಬಿ ಕಲ್ಯಾಣ ಯೋಜನೆಯಡಿ 905 ಕ್ವಿಂಟಾಲ್ ಅಕ್ಕಿ ಬಂದಿದೆ. ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಒಂದು ಕೆ.ಜಿ. ಬೇಳೆ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ್ದರೆ ಅಂತಹವರಿಗೂ 10 ಕೆ.ಜಿ. ಅಕ್ಕಿಯನ್ನು ಇದೇ ತಿಂಗಳು ಉಚಿತವಾಗಿ ನೀಡಲಾಗುವುದು ಎಂದು ಅಧಿಕಾರಿ ಕೊಡ್ಲಿ ವಿವರಿಸಿದರು.

    ಗ್ರಾಮಸ್ಥರ ಮನವಿ: ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ತಕ್ಷಣ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು. ಮೊಬೈಲ್ ಫೀವರ್ ಕ್ಲಿನಿಕ್ ಮತ್ತು ಎಟಿಎಂ ಕೇಂದ್ರಗಳನ್ನು ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು. ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಡಿಸಿಪಿ ಸೀಮಾ ಲಾಟಕರ್, ಯಶೋಧಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ ಇತರರು ಇದ್ದರು.

    ಮಾದರಿ ಸಂಗ್ರಹಕ್ಕೆ ಮನವಿ

    ಪ್ರತಿದಿನ ಕರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. 15 ದಿನಗಳಲ್ಲಿ ಗ್ರಾಮದ ಎಲ್ಲ ಜನರ ಗಂಟಲು ದ್ರವ ಮಾದರಿ ಸಂಗ್ರಹಿಸುವ ಮೂಲಕ ಸೋಂಕು ಹರಡುವಿಕೆ ತಡೆಗಟ್ಟವ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹಿರೇಬಾಗೇವಾಡಿ ಗ್ರಾಮಸ್ಥರು ಮನವಿ ಮಾಡಿಕೊಂಡರು. ಮಾರ್ಗಸೂಚಿ ಪ್ರಕಾರ ಸೋಂಕಿತರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮಾದರಿಯನ್ನು ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ವಿವರಿಸಿದರು. ಅತೀ ಹೆಚ್ಚು ಪ್ರಕರಣ ಕಂಡುಬರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ‘ಹೈರಿಸ್ಕ್ ಗ್ರೂಪ್’ನಲ್ಲಿರುವ ಹಾಗೂ ಉಸಿರಾಟ ತೊಂದರೆ, ಜ್ವರ, ಹೃದಯ ಅಥವಾ ಕಿಡ್ನಿ ತೊಂದರೆ ಇರುವವರ ಮಾದರಿ ಪರೀಕ್ಷಿಸಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts