More

    ಭಾರತದ ಡಿಜಿಟಲ್​ ಕ್ರಾಂತಿ ಬಗ್ಗೆ ಪ್ರಧಾನಿ ಮೋದಿ-ಬಿಲ್​ಗೇಟ್ಸ್​ ಚರ್ಚೆ: ಭಾರತೀಯರನ್ನು ಕೊಂಡಾಡಿದ ಮೈಕ್ರೋಸಾಫ್ಟ್​ ಬಾಸ್​

    ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸಲು ಇರುವ ಮಾರ್ಗಗಳು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್ ರಾಷ್ಟ್ರ ರಾಜಧಾನಿ ದೆಹಲಿಯ ಪ್ರಧಾನಿ ನಿವಾಸದಲ್ಲಿ ಶುಕ್ರವಾರ ಸುದೀರ್ಘ ಚರ್ಚೆ ನಡೆಸಿದರು. ​

    ಪ್ರಧಾನಿ ಮೋದಿ ಜತೆಗಿನ ಮಾತುಕತೆ ವೇಳೆ ಬಿಲ್​ಗೇಟ್ಸ್​ ಅವರು ಹೊಸ ಹೊಸ ಟೆಕ್ನಾಲಜಿಯನ್ನು ತ್ವರಿತವಾಗಿ ಅಳವಡಿಸಿಕೊಳ್ಳುವ ಹಾಗೂ ಮುನ್ನಡೆಸುವ ಭಾರತೀಯರ ಸಾಮರ್ಥ್ಯವನ್ನು ಕೊಂಡಾಡಿದರು. ಇದೇ ವೇಳೆ ಪ್ರಧಾನಿ ಮೋದಿ ಪಿಎಂ ನಮೋ ಆ್ಯಪ್​ನಲ್ಲಿ ಫೋಟೋ ಬೂತ್ ಬಳಸಿ ಸೆಲ್ಫಿ ತೆಗೆದುಕೊಳ್ಳುವಂತೆ ಮೈಕ್ರೋಸಾಫ್ಟ್ ಮುಖ್ಯಸ್ಥರನ್ನು ಪ್ರೋತ್ಸಾಹಿಸಿದರು.

    ಜಿ20 ಶೃಂಗಸಭೆ ಬಗ್ಗೆ ಮಾತು
    2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಲ್​ಗೇಟ್ಸ್​ ಮಾತನಾಡಿದರು. ಜಿ20 ಶೃಂಗಸಭೆಯ ಮೊದಲು ನಾವು ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ನೀವು ನೋಡಿರಬಹುದು, ಶೃಂಗಸಭೆಯ ಪ್ರಕ್ರಿಯೆಗಳು ಬಹಳಷ್ಟು ತಿರುವುಗಳನ್ನು ಪಡೆದುಕೊಂಡವು. ನಾವೀಗ ಜಿ20ಯ ಪ್ರಮುಖ ಉದ್ದೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಅವುಗಳನ್ನು ಮುಖ್ಯವಾಹಿನಿಗೆ ತರುತ್ತೇವೆ ಎಂಬ ನಂಬಿಕೆ ಇದೆ ಎಂದು ಮೋದಿ ಹೇಳಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಲ್​ಗೇಟ್ಸ್​, ಜಿ20ಯು ಹೆಚ್ಚು ಅಂತರ್ಗತವಾಗಿದೆ ಮತ್ತು ಭಾರತವು ಅದರ ಆತಿಥ್ಯ ವಹಿಸಿದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿತ್ತು. ಡಿಜಿಟಲ್ ಆವಿಷ್ಕಾರಗಳಂತಹ ವಿಷಯಗಳನ್ನು ನಿಜವಾಗಿಯೂ ಎತ್ತಿಹಿಡಿಯಲಾಯಿತು. ನೀವು ಭಾರತದಲ್ಲಿ ಸಾಧಿಸಿರುವ ಹಿಂದಿನ ಫಲಿತಾಂಶಗಳ ಬಗ್ಗೆ ನಮ್ಮ ಸಂಸ್ಥೆಯು ಸಹ ತುಂಬಾ ಉತ್ಸುಕವಾಗಿದ್ದು, ಅವುಗಳನ್ನು ಇತರ ಹಲವು ದೇಶಗಳಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಾವು ನಿಮ್ಮ ಪಾಲುದಾರರಾಗಿದ್ದೇವೆ ಎಂದು ಬಿಲ್​ಗೇಟ್ಸ್​ ಹೇಳಿದರು.

    ಭಾರತದ ಡಿಜಿಟಲ್​ ಕ್ರಾಂತಿ ಬಗ್ಗೆ ಚರ್ಚೆ
    ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ, ವಿಶ್ವದ ಅನೇಕ ಪ್ರತಿನಿಧಿಗಳು ಭಾರತದ ಡಿಜಿಟಲ್ ಕ್ರಾಂತಿಯ ಬಗ್ಗೆ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು. ಏಕಸ್ವಾಮ್ಯವನ್ನು ತಡೆಯಲು ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ ಎಂದು ಜಿ20 ಶೃಂಗಸಭೆಯಲ್ಲಿ ವಿವರಿಸಿದೆ. ಡಿಜಿಟಲ್​ ಕ್ರಾಂತಿಯು ಜನರಿಂದ ಮತ್ತು ಜನರಿಗಾಗಿ ಎಂದು ಪ್ರಧಾನಿ ಮೋದಿ ಹೇಳಿದರು.

    ಮೋದಿ ಬಳಿಕ ಡಿಜಿಟಲ್​ ಕ್ರಾಂತಿ ಬಗ್ಗೆ ಮಾತನಾಡಿದ ಬಿಲ್​ಗೇಟ್ಸ್​ ಭಾರತವನ್ನು ಹೊಗಳಿದರು. ದೇಶವು ಡಿಜಿಟಲ್​ ಸರ್ಕಾರವನ್ನು ಹೊಂದಿದೆ ಎಂದರು. ಭಾರತವು ಕೇವಲ ಟೆಕ್ನಾಲಜಿಯನ್ನು ಮಾತ್ರ ಅಳವಡಿಸಿಕೊಳ್ಳುತ್ತಿಲ್ಲ ಆದರೆ, ಟೆಕ್ನಾಲಜಿಯನ್ನು ಮುನ್ನಡೆಸುತ್ತಿದೆ ಎಂದು​ ಕೊಂಡಾಡಿದರು.

    ನಮೋ ಡ್ರೋನ್​ ದೀದಿ ಸ್ಕೀಮ್​
    ಸಂವಾದದ ಸಮಯದಲ್ಲಿ ಪ್ರಧಾನಿ ಮೋದಿ ಅವರು ನಮೋ ಡ್ರೋನ್​ ದೀದಿ ಯೋಜನೆ ಬಗ್ಗೆ ಬಿಲ್​ಗೇಟ್ಸ್​ಗೆ ವಿವರಿಸಿದರು. ಈ ಯೋಜನೆ ದೇಶದಲ್ಲಿ ನಿರ್ದಿಷ್ಟವಾಗಿ ಮಹಿಳೆಯರಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ ಎಂದರು.

    ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ನಾನು ಕೇಳಿದಾಗ, ನನ್ನ ದೇಶದಲ್ಲಿ ಅಂತಹದ್ದನ್ನು ನಾನು ಅನುಮತಿಸುವುದಿಲ್ಲ ಎಂದು ಭಾವಿಸುತ್ತಿದ್ದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಸ್ವತಃ ಒಂದು ಪ್ರಮುಖ ಅವಶ್ಯಕತೆಯಾಗಿದೆ. ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಮುಕ್ತರಾಗಿದ್ದಾರೆ. ನಾನು ‘ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ಇದು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ದಿನಗಳಲ್ಲಿ ನಾನು ಮಹಿಳೆಯರೊಂದಿಗೆ ಸಂವಹನ ನಡೆಸುತ್ತೇನೆ, ಅವರು ಸಂತೋಷಪಡುತ್ತಾರೆ. ಈ ಮೊದಲೆಲ್ಲ ತಮಗೆ ಸೈಕಲ್ ಓಡಿಸಲು ಗೊತ್ತಿರಲಿಲ್ಲ ಆದರೆ ಈಗ ಪೈಲಟ್‌ಗಳಾಗಿದ್ದು ಡ್ರೋನ್‌ಗಳನ್ನು ಹಾರಿಸಬಲ್ಲೆವು ಎನ್ನುತ್ತಾರೆ. ಈ ದೇಶದ ಮನಸ್ಥಿತಿ ಬದಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಕೃತಕ ಬುದ್ಧಿಮತ್ತೆ ತುಂಬಾ ಮುಖ್ಯ
    2023ರಲ್ಲಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಮಯದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಹೇಗೆ ಬಳಸಲಾಯಿತು ಎಂಬುದನ್ನು ಸಹ ಪ್ರಧಾನಿ ಮೋದಿ ಬಿಲ್ ಗೇಟ್ಸ್‌ಗೆ ತಿಳಿಸಿದರು. ಕಾಶಿ ತಮಿಳು ಸಂಗಮಂ ಕಾರ್ಯಕ್ರಮದಲ್ಲಿ ಎಐ ಬಳಸಿ ತಮ್ಮ ಹಿಂದಿ ಭಾಷಣವನ್ನು ತಮಿಳಿಗೆ ಅನುವಾದಿಸಲಾಗಿದೆ ಎಂದು ಹಂಚಿಕೊಂಡರು.

    ಐತಿಹಾಸಿಕವಾಗಿ ಮೊದಲ ಮತ್ತು ಎರಡನೆಯ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ನಾವು ವಸಾಹತುಗಳಾಗಿದ್ದರಿಂದ ಹಿಂದುಳಿದಿದ್ದೆವು. ಆದರೀಗ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಮಧ್ಯದಲ್ಲಿದ್ದೇವೆ. ಇಲ್ಲಿ ಡಿಜಿಟಲ್ ಅಂಶವೇ ಕೇಂದ್ರ ಬಿಂದುವಾಗಿದೆ. ಡಿಜಿಟಲ್​ ವಿಚಾರದಲ್ಲಿ ಭಾರತ ಸಾಕಷ್ಟು ಲಾಭ ಗಳಿಸಲಿದೆ ಎಂಬ ವಿಶ್ವಾಸ ನನಗಿದೆ. ಎಐ ನಮಗೆ ಬಹಳ ಮುಖ್ಯ. ನಮ್ಮ ದೇಶದಲ್ಲಿ ಅಮ್ಮನನ್ನು ‘ಆಯಿ’ ಎಂದು ಕರೆಯುತ್ತೇವೆ ಎಂದು ಕೆಲವೊಮ್ಮೆ ತಮಾಷೆಯಾಗಿ ಹೇಳುತ್ತಿರುತ್ತೇನೆ. ಈಗ ನಾನು ಮತ್ತೊಂದನ್ನು ಹೇಳುತ್ತೇನೆ, ಮಗು ಜನಿಸಿದಾಗ ಅವನು ‘ಆಯ್’ ಹಾಗೆಯೇ ಎಐ ಎಂದು ಹೇಳುತ್ತಾನೆ. ಏಕೆಂದರೆ, ಮಕ್ಕಳು ತುಂಬಾ ಮುಂದುವರಿದಿದ್ದಾರೆ ಎಂದು ಪ್ರಧಾನಿ ಹೇಳಿದರು. (ಏಜೆನ್ಸೀಸ್​)

    ಇಷ್ಟೊಂದು ಅಹಂಕಾರ ಒಳ್ಳೆಯದಲ್ಲ ಈಗಲಾದ್ರೂ ಬದಲಾಗಿ! ಹಾರ್ದಿಕ್ ದುರ್ವರ್ತನೆ ವಿಡಿಯೋ ವೈರಲ್​, ನೆಟ್ಟಿಗರ ತರಾಟೆ

    ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್​ ಅಧಿಕಾರಿ ಬಳಿಯಿರುವ ಒಟ್ಟು ಆಸ್ತಿ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts