More

    ಹಸಿರಿನಿಂದ ಕಿತ್ತಳೆ ವಲಯಕ್ಕೆ ಗಿರಿ ಜಿಲ್ಲೆ ಶಿಫ್ಟ್

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಕಳೆದೆರಡು ತಿಂಗಳಿಂದ ಮಹಾಮಾರಿ ಕರೊನಾ ವೈರಸ್ ರಣಕೇಕೆಯಿಂದ ತಪ್ಪಿಸಿಕೊಂಡಿದ್ದ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಲ್ಲಿ ಸೋಂಕು ದೃಢಪಟ್ಟಿರುವುದು ಆತಂಕ ಸೃಷ್ಟಿಸಿದೆ.

    ಸುರಪುರ ತಾಲೂಕಿನ ಇಬ್ಬರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು, ಇವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇದ್ದವರ ಪತ್ತೆ ಕಾರ್ಯ ನಡೆದಿದೆ. ಗುಜರಾತ್ನ ಅಹಮದಾಬಾದ್ನಲ್ಲಿರುವ ಸಂಬಂಧಿಕರನ್ನು ಕಾಣಲು ತೆರಳಿದ್ದ ಈ ಇಬ್ಬರು ಲಾರಿ ಮೂಲಕ ಅಲ್ಲಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ಹೆದ್ದಾರಿವರೆಗೆ ಬಂದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಸುರಪುರದ ಜ್ವರ ತಪಾಸಣಾ ಕೇಂದ್ರದಲ್ಲಿ ಬಂದಾಗ ಕಫ ಮತ್ತು ರಕ್ತದ ಮಾದರಿ ಪರೀಕ್ಷೆಗಾಗಿ ಕಳಿಸಿದ್ದು, ಸಕಾರಾತ್ಮಕ ವರದಿ ಬಂದಿದೆ.

    ಕರೊನಾ ಕಿರಿಕಿರಿ ಆರಂಭವಾದಾಗಿನಿಂದ ಜಿಲ್ಲೆ ಸೇಫ್ ಆಗಿಯೇ ಇದ್ದುದ್ದರಿಂದ ಸರ್ಕಾರ ಹಸಿರು ವಲಯದಲ್ಲಿ ಗುರುತಿಸಿತ್ತು. ಆದರೀಗ ಎರಡು ಪಾಸಿಟಿವ್ ಕೇಸ್ ವರದಿಯಾಗಿದ್ದರಿಂದ ಕಿತ್ತಳೆ ವಲಯಕ್ಕೆ ಜಾರಿದ್ದು, ಜನರಲ್ಲಿ ಡವಡವ ಶುರುವಾಗಿದೆ. ಈ ಹೆಮ್ಮಾರಿ ಜಿಲ್ಲೆಯಲ್ಲಿ ಕಾಲಿಡದಂತೆ ಜಿಲ್ಲಾಡಳಿತ ಇಷ್ಟು ದಿನ ಪಟ್ಟ ಶ್ರಮವೆಲ್ಲ ಇದೀಗ ಭೀಮಾ ನದಿಯಲ್ಲಿ ಹೋಮ ಮಾಡಿದಂತಾಗಿದೆ.

    ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಜನತೆ ಅನಗತ್ಯವಾಗಿ ಮನೆಯಿಂದ ಹೊರಬರುವುದು ಹೆಚ್ಚಾಗಿತ್ತು. ಇದರಿಂದ ಕರೊನಾ ವಕ್ಕರಿಸುವ ಲಕ್ಷಣ ಗೋಚರಿಸಿತ್ತು.

    ಜಿಲ್ಲೆಯಲ್ಲಿ ಎರಡು ಕರೊನಾ ಪ್ರಕರಣ ದೃಢಪಟ್ಟ ಬಳಿಕ ಲಾಕ್ಡೌನ್ ಬಿಗಿಗೊಳಿಸಿರುವ ಜಿಲ್ಲಾಡಳಿತವು ತರಕಾರಿ, ದಿನಸಿ ಹಾಗೂ ಔಷಧಂಗಡಿ ತೆರೆಯಲು ಮಾತ್ರ ಅನುಮತಿ ನೀಡಿದ್ದು, ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮೊದಲೇ ಯಾದಗಿರಿ ಭೌಗೋಳಿಕವಾಗಿ ಪುಟ್ಟ ಜಿಲ್ಲೆ. ಇಷ್ಟು ದಿನ ಇರದ ಕರೊನಾ ಹಾವಳಿ ಈಗ ಶುರುವಾಗಿದ್ದು, ಇದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಹೇಳಲು ಅಸಾಧ್ಯ.

    ಜಿಲ್ಲಾದ್ಯಂತ ಲಾಕ್ಡೌನ್ ಮತ್ತಷ್ಟು ಬಿಗಿ
    ಕರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಿದ್ದು, ಜನರನ್ನು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರದಂತೆ ಸೂಚಿಸಲಾಗಿದೆ. ಯಾದಗಿರಿ ಪ್ರಮುಖ ರಸ್ತೆಗಳು ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹಾಗೂ ಮುಳ್ಳಿನ ಬೇಲಿ ಹಾಕಿ ಸಂಚಾರ ಬಂದ್ ಮಾಡಿರುವ ಪೊಲೀಸರು ರಸ್ತೆಗಿಳಿಯುವ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts