More

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..

    ಸ್ನೇಹ, ಮೈತ್ರಿ, ದೋಸ್ತಿ, ಫ್ರೆಂಡ್​ಶಿಪ್ ಎಂದೆಲ್ಲ ಹೇಳಲಾಗುವ ಈ ಗೆಳೆತನ ಎಂಬುವುದೇ ಒಂದು ಅದ್ಭುತ ಭಾವ-ಬಾಂಧವ್ಯ. ಇದು ಎಲ್ಲಿಂದ ಬೇಕಾದರೂ ಶುರುವಾಗಬಹುದು, ಯಾರ ಜತೆಗಾದರೂ ಉಂಟಾಗಬಹುದು. ವಯಸ್ಸು, ಜಾತಿ, ಮತ, ಅಧಿಕಾರ, ಅಂತಸ್ತು, ಧರ್ಮ ಇದ್ಯಾವುದರ ಹಂಗೂ ಇಲ್ಲದೆ ಮನುಷ್ಯನನ್ನು ಬೆಸೆಯುವ ಒಂದು ಬೆಸುಗೆ ಈ ಸ್ನೇಹ. ಒಮ್ಮೆ ಸ್ನೇಹಿತರಾದರೆ ಜೀವನಪರ್ಯಂತ ಸ್ನೇಹಿತರಾಗೇ ಇರುವವರೂ ಇದ್ದಾರೆ. ಮಾತ್ರವಲ್ಲ ಬದುಕಿನುದ್ದಕ್ಕೂ ಆಯಾ ಹಂತಕ್ಕೆ ಅನುಗುಣವಾಗಿ ಹೊಸಹೊಸ ಸ್ನೇಹಿತರು ಸಿಗುತ್ತಲೇ ಇರುತ್ತಾರೆ. ಸ್ನೇಹ ಗಾಢವಾಗಿದ್ದರೆ ಜೀವನದಲ್ಲಿ ನೆರಳು-ಫಲ ಕೊಡುವಂಥ ಕಲ್ಪತರು ಈ ಸ್ನೇಹಿತರು. ಅಂಥ ಸ್ನೇಹ-ಸ್ನೇಹಿತರಿಗೆಂದೇ ಮೀಸಲಾದ ದಿನ ಇಂದು. ಈ ಸಂದರ್ಭದಲ್ಲಿ ತಮ್ಮ ಪ್ರಾಣಸ್ನೇಹಿತರ ಕುರಿತು ಸೆಲೆಬ್ರಿಟಿಗಳು ಮತ್ತು ಅವರ ಸ್ನೇಹಿತರು ಇಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

    ವಿಶ್ವಾಸ ತುಂಬಿದ ಗೆಳೆಯ ಬಸಣ್ಣ

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..

    ಬಸವರಾಜ ಬೊಮ್ಮಾಯಿ ಮತ್ತು ನಾನು ಒಟ್ಟಿಗೆ ಓದಿದ ಗೆಳೆಯರು. ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 1976ರಿಂದ 1981ರತನಕ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುವಾಗ ಕ್ಲಾಸ್​ವೆುೕಟ್ಸ್. ನಾನು ಬೆಳಗಾವಿಯವನಾದರೆ, ಬಸವರಾಜ ಹುಬ್ಬಳ್ಳಿಯವ. ಕಾಲೇಜಿನ ದಿನಗಳಲ್ಲಿ ಬಸವರಾಜ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆಯುತ್ತಿದ್ದರು. ಅವರನ್ನು ಬಸಣ್ಣ ಎಂದೇ ನಾವೆಲ್ಲ ಕರೆಯುತ್ತಿದ್ದೆವು. ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಮುಂದಾಳತ್ವ ಇತ್ತು. ಬೇರೆ ಊರಿನಿಂದ ಬಂದ ನಮ್ಮನ್ನು ಕರೆದು ಮಾತನಾಡಿಸುತ್ತಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಗಲೇ ತರಗತಿಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. ನಾಯಕತ್ವ ಎಂಬುದು ಅವರಲ್ಲಿ ರಕ್ತಗತವಾಗಿಯೇ ಬಂದಿತ್ತು. ಬಸಣ್ಣನಿಗೆ ನವಣೆ ಅನ್ನ ಎಂದರೆ ಬಲು ಪ್ರೀತಿ. ಅದರ ಜತೆಗೆ ಬಜ್ಜಿ, ಮಿರ್ಚಿ, ಅವಲಕ್ಕಿ, ಪಾವ್​ಬಾಜಿಯಂತಹ ಉತ್ತರ ಕರ್ನಾಟಕದ ತಿನಿಸುಗಳ ಮೇಲೆ ಭಾರೀ ಇಷ್ಟ. ಕ್ರಿಕೆಟ್ ಅವರ ಅಚ್ಚುಮೆಚ್ಚಿನ ಆಟ. ಆಗಾಗ ಆಡುತ್ತಿದ್ದರು. ಅದರ ಜತೆಗೆ ಬ್ಯಾಡ್ಮಿಂಟನ್ ಮತ್ತು ಗಾಲ್ಪ್ ಸಹ ಆಡುತ್ತಿದ್ದರು. ಬಸಣ್ಣ ಯಾವತ್ತೂ ಕ್ಲಾಸ್ ತಪ್ಪಿಸುತ್ತಿರಲಿಲ್ಲ. ಇಂಜಿನಿಯರಿಂಗ್ ಶಿಕ್ಷಣ ಮುಗಿದ ಕೂಡಲೇ ನಾನು ಕೈಗಾರಿಕೆ ಮಾಡಲು ಮುಂದಾಗಿದ್ದೆ. ಅದು ಗೊತ್ತಾಗುತ್ತಿದ್ದಂತೆ ನನಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿ, ನಾನೊಬ್ಬ ಕೈಗಾರಿಕೋದ್ಯಮಿ ಆಗಬಲ್ಲೆ ಎಂಬ ವಿಶ್ವಾಸ ತುಂಬಿದ್ದು ಬಸವರಾಜ ಬೊಮ್ಮಾಯಿ. ಸ್ನೇಹಿತರಿಗಾಗಿ ಅಷ್ಟು ಕಾಳಜಿ ವಹಿಸುತ್ತಿದ್ದರು. ಇದು ಅವರಲ್ಲಿ ಮೊದಲಿನಿಂದಲೂ ಇರುವ ದೊಡ್ಡ ಗುಣ. ಇದನ್ನು ನಾನು ಅನೇಕ ಸಂದರ್ಭದಲ್ಲಿ ಕಂಡಿದ್ದೇನೆ. ರಾಜಕೀಯದಲ್ಲಿ ಅವರು ದಿನೇ ದಿನೇ ಬೆಳೆಯುತ್ತಿದ್ದರೂ ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿ ಬಂದಿಲ್ಲ. ಈಗಲೂ ಅವರು ಬೆಳಗಾವಿಗೆ ಬಂದರೆ, ನಾನು ಬೆಂಗಳೂರಿಗೆ ಹೋದರೆ ಭೇಟಿ ಮಾತ್ರ ತಪು್ಪವುದಿಲ್ಲ. ಜತೆ ಸೇರಿದಾಗ ಎಲ್ಲ ವಿಚಾರಗಳ ಬಗ್ಗೆ ನಾವು ಸಾಕಷ್ಟು ಹರಟೆ ಹೊಡೆಯುತ್ತೇವೆ. ಸ್ನೇಹಿತರಿಗೆ ಒಳ್ಳೆಯ ಮಾರ್ಗದರ್ಶಕನಾಗಿದ್ದ ನಮ್ಮೆಲ್ಲರ ಪ್ರೀತಿಯ ಬಸಣ್ಣ ರಾಜ್ಯಕ್ಕೂ ಒಳ್ಳೆಯದು ಮಾಡುತ್ತಾರೆ ಎಂಬ ವಿಶ್ವಾಸ ಇದೆ.

    | ಆನಂದ ಬಸವರಾಜ ಹಾವಣ್ಣವರ ಕಾರ್ಯಕಾರಿ ಸಮಿತಿ ಸದಸ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಳಗಾವಿ

    ಚಿಕ್ಕಂದಿನಿಂದಲೂ ಹಠಮಾರಿ ಈತ…

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ಕನಕಪುರದ ಮಳಗಾಳು ಡಿ.ಕೆ. ಶಿವಕುಮಾರ್​ರ ಅಜ್ಜಿಯ ಊರು. ಅವರ ತಾತನ ತೋಟದಲ್ಲಿ ಬಾವಿ ಇತ್ತು. ನಾವಿಬ್ಬರೂ ಈಜು ಕಲಿತಿದ್ದೂ ಅಲ್ಲೇ. ಅವರ ತಾತ, ತಂದೆ ದೊಡ್ಡ ವ್ಯಾಪಾರಸ್ಥರಾದರೂ ಇವರಿಗೆ ಸಣ್ಣ ವಯಸ್ಸಲ್ಲೇ ದುಡಿಯುವ ಹಠ! ಬಂಡವಾಳ ಹೂಡಲು ತಂದೆ ನಿರಾಕರಿಸಿದ್ದರೆಂದು ಇವರು ಒಮ್ಮೆ ಮುನಿಸಿಕೊಂಡು ಮನೆಗೆ ಬರಲ್ಲ ಅಂತ ಕೂತಿದ್ದರು. ವ್ಯವಹಾರದ ಹುಚ್ಚೆಷ್ಟಿತ್ತೆಂದರೆ ತಂದೆ ಜಮೀನು ಮಾರಿದಾಗ, ಹಠ ಮಾಡಿ ಬೆಂಗಳೂರಲ್ಲಿ ಒಂದೂವರೆ ಎಕರೆ ಜಾಗ ತೆಗೆದುಕೊಂಡರು. ಕೋಳಿ ಫಾರಂ ಮಾಡಿದರು. ಸೈಟ್ ಮಾಡಿ ಮಾರಿದರು. ಕುಟುಂಬದ ಚಿತ್ರಮಂದಿರಗಳಿದ್ದವು, ಅವುಗಳನ್ನೂ ನೋಡಿಕೊಂಡರು. ಸಣ್ಣವರಿದ್ದಾಗಲೇ ರೇಷ್ಮೆ ಡ್ರೆಸ್, ಕೈಗೆ 4 ಉಂಗುರ, ಕತ್ತಿಗೆ ಚೈನ್… ಊರಲ್ಲಿದ್ದಾಗ ಬೈಕಿತ್ತು. ನಾನು ಹಿಂದೆ ಕೂರ್ತಿದ್ದೆ. ಒಮ್ಮೆ ನಮ್ಮ ಹಿಂದೆ ಬಸ್ ಬರ್ತಿತ್ತು, ಡ್ರೖೆವರ್ ಹಾರ್ನ್ ಹಾಕಿದ್ದೇ ಹಾಕಿದ್ದು, ಇವರು ಮಾತ್ರ ಜಾಗ ಬಿಡಲೇ ಇಲ್ಲ. ರಸ್ತೆ ಮಧ್ಯೆನೇ ಹೋಗುವ ಹಠ. ಕಾಲೇಜು ಸೇರಿದ ಮೇಲೆ ಬೆಂಗಳೂರಲ್ಲಿ ಬುಲೆಟ್ ಇಟ್ಕೊಂಡಿದ್ರು. ಅವರು ಬೆಂಗಳೂರಿನ ಆರ್​ಸಿ ಕಾಲೇಜಿಗೆ ಸೇರಿದ್ದೇ ವಿಶೇಷ. ಅಷ್ಟು ಪ್ರಭಾವಿ ಆಗಲೇ. ಕಾಲೇಜ್ ಚುನಾವಣೆಯಲ್ಲಿ ಬಂಗಾರಪ್ಪ ಹೆಸರು ಹೇಳಿಕೊಂಡು ಪ್ರಚಾರ ಮಾಡಿದ್ದರು. ಕಾಲೇಜಿನ ಪ್ರಾಂಶುಪಾಲರಿಗೆ ಸಾಕುಸಾಕು ಮಾಡಿದ್ದರು. ಬಳಿಕ ಸೊಸೈಟಿ, ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಎದುರಿಸಿ ಮೆಂಬರ್ ಕೂಡ ಆದರು. ಎದುರಾಳಿ ಪ್ರಬಲ ಅಭ್ಯರ್ಥಿಯ ವೀಕ್​ನೆಸ್ ಬಳಸಿಕೊಂಡು ಅವರನ್ನು ಮಣಿಸಿದ ತಂತ್ರಗಾರಿಕೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮುಂದೆ ಶಾಸಕರಾದರು, ಸಚಿವರಾದರು. ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಂದೆ ಇನ್ನಷ್ಟು ಉನ್ನತ ಸ್ಥಾನ ಏರಲಿ.

    | ಮರಸಪ್ಪ ರವಿ ಕನಕಪುರ

    ಕ್ರಿಕೆಟ್​ನಿಂದ ಸಿನಿಮಾವರೆಗೆ

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನಾನು ಸುದೀಪ್ ಅವರನ್ನು ಮೊದಲು ಭೇಟಿ ಮಾಡಿದ್ದು ಎಂಟನೇ ಕ್ಲಾಸಿನಲ್ಲಿದ್ದಾಗ. ಅದೂ ಒಂದು ಮೈದಾನದಲ್ಲಿ. ಕ್ರಿಕೆಟ್ ಆಡುತ್ತಾ ಆಡುತ್ತಾ ಸ್ನೇಹಿತರಾದೆವು. ಮೈದಾನದಲ್ಲಿದ್ದಾಗ ರನ್​ನಿಂದ ಹಿಡಿದು ಹಲವು ವಿಷಯಗಳಲ್ಲಿ ನಮ್ಮಿಬ್ಬರಲ್ಲಿ ಕಿತ್ತಾಟ ನಡೆಯುತ್ತಿತ್ತು. ಆದರೆ, ಮೈದಾನದಿಂದ ಹೊರಗೆ ಬರುತ್ತಿದ್ದಂತೆಯೇ ವಿಲ್ಸನ್ ಗಾರ್ಡನ್​ನ ಗಿರಿ ಕಾಂಡಿಮೆಂಟ್ಸ್ ನಲ್ಲಿ ನಾವೆಲ್ಲ ಒಟ್ಟಿಗೆ 10ರಲ್ಲಿ 20 ಕಾಫಿ ಕುಡಿಯು ತ್ತಿದ್ದೆವು. ಮೈದಾನದಲ್ಲಿ ಸಾವಿರ ಕಿತ್ತಾಟಗಳಿ ದ್ದರೂ, ಅದನ್ನೆಲ್ಲ ಮರೆತು ಸ್ನೇಹದಿಂದ ಇರುತ್ತಿದ್ದೆವು. ಇವತ್ತಿನ ನಮ್ಮ ಸ್ನೇಹಕ್ಕೆ ಅವತ್ತಿನ ಆಟ, ಕಾಫಿಗಳೆಲ್ಲವೂ ಬುನಾದಿ ಎಂದರೆ ತಪ್ಪಿಲ್ಲ. ಆನಂತರ ಅವರು ವಿಲ್ಸನ್ ಗಾರ್ಡನ್ ಬಿಟ್ಟು ಜೆ.ಪಿ. ನಗರಕ್ಕೆ ಹೋದರು. ಆಗಾಗ ಕ್ರಿಕೆಟ್ ಆಡುತ್ತಿದ್ದೆವು. ಆ ನಂತರ ಅವರು ‘ಬ್ರಹ್ಮ’ ಚಿತ್ರದ ಮೂಲಕ ಹೀರೋ ಆದರು. ನಾವೆಲ್ಲ ಕಂಠೀರವ ಸ್ಟುಡಿಯೋಗೆ ಹೋಗಿ ವಿಶ್ ಮಾಡಿ ಬಂದಿದ್ದೆವು. ನಾಲ್ಕೈದು ವರ್ಷಗಳಾದ ಮೇಲೆ ‘ಹುಚ್ಚ’ ಚಿತ್ರ ನೋಡುವುದಕ್ಕೆ ಕರೆದಿದ್ದರು. ಆಗಲೂ ಹೋಗಿ ಸಂತೋಷದಿಂದ ಕಣ್ಣೀರು ಹಾಕಿ ಬಂದಿದ್ದೆವು. ‘ಸ್ವಾತಿಮುತ್ತು’ ಚಿತ್ರ ಮಾಡುವಾಗ ಅವರ ತಾಯಿ ನನ್ನನ್ನು ಕರೆದು ಪ್ರೊಡಕ್ಷನ್ ಜವಾಬ್ದಾರಿಯನ್ನು ವಹಿಸಿದರು. ಅದಾದ ಮೇಲೆ ಸಣ್ಣ ವಿಚಾರಕ್ಕೆ ದೂರವಾಗಿದ್ದೆವು. ಈಗ ಮತ್ತೆ ಹತ್ತಿರದಲ್ಲಿದ್ದೇವೆ. ಸುದೀಪ್ ಅವರ ಅಭಿನಯದಲ್ಲಿ ‘ವಿಕ್ರಾಂತ್ ರೋಣ’ ಎಂಬ ದೊಡ್ಡ ಚಿತ್ರವನ್ನು ನಿರ್ವಿುಸುವ ಅವಕಾಶ ಸಿಕ್ಕಿದೆ.

    | ಜಾಕ್ ಮಂಜುನಾಥ್ ನಿರ್ಮಾಪಕ

    ಪುಸ್ತಕದ ಹುಚ್ಚಿನ ಚಡ್ಡಿಗೆಳೆಯರು

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ಐವತ್ತೈದು ವರ್ಷಗಳ ಹಿಂದೆ ಚನ್ನಗಿರಿ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ಪುಸ್ತಕದ ಹುಚ್ಚಿನ ಇಬ್ಬರು ಪುಟ್ಟ ಬಾಲಕರಿದ್ದರು. ಅವರನ್ನು ಬೇಕಾದರೆ ಚಡ್ಡಿಗೆಳೆಯರು ಎನ್ನಬಹುದು. ಅಕ್ಕಪಕ್ಕದ ಮನೆಯ ಆ ಹುಡುಗರು ಸದಾ ಕಲ್ಪನಾಲೋಕದಲ್ಲಿ ವಿಹರಿಸುವ ಕಥೆಯ ಹುಚ್ಚರು. ಇನ್ನೂ ಮಾಧ್ಯಮಿಕ ಶಾಲೆಯಲ್ಲಿ ಇರುವಾಗಲೇ ನೂರಾರು ಕಥೆ ಕಾದಂಬರಿ ಓದಿ ಮುಗಿಸಿದವರು. ಅವರಿಗೆ ಆಗ ಗಳಗನಾಥ, ಬಿ.ವೆಂಕಟಾಚಾರ್ಯರ ಅನುವಾದಿತ ಕಾದಂಬರಿಗಳ ಪರಿಚಯವಿತ್ತು. ಗಳಗನಾಥರ ಮಾಧವಕರುಣ ವಿಲಾಸ ಎಂಬ ವಿಜಯನಗರ ಸಾಮ್ರಾಜ್ಯ ಕುರಿತ ಬೃಹತ್ ಐತಿಹಾಸಿಕ ಕಾದಂಬರಿಯನ್ನು ಓದಿ ಮುಗಿಸಿದ್ದರು. ಬರೀ ಓದುವ ಹುಚ್ಚಷ್ಟೇ ಅಲ್ಲ, ತಾವೂ ಕಾದಂಬರಿ ಬರೆಯಬೇಕೆಂಬ ಹುಚ್ಚು ಅವರಿಗೆ. ರಜಾ ದಿನಗಳಲ್ಲಿ ಒಂದು ಪತ್ತೇದಾರಿ ಕಾದಂಬರಿಯನ್ನು ಬರೆದೇ ಬಿಟ್ಟರು. ನೀವು ಈಗಾಗಲೇ ಊಹಿಸಿರಬಹುದು. ಆ ಇಬ್ಬರು ಹುಡುಗರಲ್ಲಿ ಒಬ್ಬ ನಾನು! ಇನ್ನೊಬ್ಬ ಮುಂದೆ ಸಣ್ಣಕಥೆಗಳನ್ನು ಬರೆದು ವಿಖ್ಯಾತನಾದ ಈಶ್ವರಚಂದ್ರ! ಪುಟ್ಟಣ್ಣ ಕಣಗಾಲರ ಕಥಾಸಂಗಮ ತಮಗೆಲ್ಲ ಪರಿಚಯವಿರಬಹುದು. ಕಥಾಸಂಗಮದಲ್ಲಿ ಇರುವ ಮುನಿತಾಯಿ ಎಂಬ ಕಥೆಯನ್ನು ಬರೆದವನು ನನ್ನ ಈ ಆತ್ಮೀಯ ಗೆಳೆಯ. ಮುಂದೆ ಈಶ್ವರಚಂದ್ರ ಅನೇಕ ಕಥಾಸಂಗ್ರಹಗಳನ್ನು ಪ್ರಕಟಿಸಿ ಖ್ಯಾತ ಕತೆಗಾರನಾದ. ನಾನು ಕವಿತೆಯ ಕಡೆ ತಿರುಗಿ ಕವಿತಾಸಂಗ್ರಹಗಳನ್ನು ಪ್ರಕಟಿಸಿದೆ! ಈಗ ಇಬ್ಬರೂ 75 ವರ್ಷ ದಾಟಿದ್ದೇವೆ. ಆದರೆ ನಮ್ಮ ನಡುವೆಯ ಸ್ನೇಹ ಹಿಂದಿನಷ್ಟೇ ತೀವ್ರವಾಗಿದೆ. ನನ್ನ ಮೊದಲ ಕವಿತಾ ಸಂಗ್ರಹ ಪರಿವೃತ್ತ ಪ್ರಕಟವಾಗುವಾಗ ಗೆಳೆಯ ಈಶ್ವರಚಂದ್ರ ತೆಗೆದುಕೊಂಡ ಕಾಳಜಿ ನಾನು ಮರೆಯುವಂತೆಯೇ ಇಲ್ಲ. ಅವನು ಎಚ್.ಎ.ಎಲ್. ಕಾರ್ಖಾನೆಯಲ್ಲಿ ಉನ್ನತ ತಾಂತ್ರಿಕ ಅಧಿಕಾರಿಯಾಗಿ ವೃತ್ತಿ ನಿರ್ವಹಿಸಿ ಈಗ ನಿವೃತ್ತನಾಗಿ ಬೆಂಗಳೂರಲ್ಲಿ ನೆಲೆಸಿದ್ದಾನೆ. ನಾನು ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಕಾವ್ಯ ನಾಟಕ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದೇನೆ. ಆಗಾಗ ಒಟ್ಟಿಗೇ ಸೇರಿ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ನಮ್ಮ ಸ್ನೇಹ ಮುಂದೆಯೂ ಹೀಗೇ ಉಳಿಯುವುದೆಂಬ ದೃಢವಾದ ನಂಬಿಕೆ ನನ್ನದು. ನನ್ನ ಈ ಬಾಲ್ಯಗೆಳೆಯನಿಗೆ ವಿಶ್ವ ಮೈತ್ರಿ ದಿನದ ಹೃತ್ಪೂರ್ವಕ ಶುಭಾಶಯಗಳು!

    | ಎಚ್.ಎಸ್. ವೆಂಕಟೇಶಮೂರ್ತಿ ಕವಿ, ಸಾಹಿತಿ.

    ಡಾನ್ಸ್​ಕ್ಲಾಸ್​ನಿಂದ ಸ್ನೇಹಿತರಾದೆವು…

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನಾನು ಮತ್ತು ಪ್ರಜ್ವಲ್ ಭೇಟಿಯಾಗಿದ್ದು ಇಮ್ರಾನ್ ಸರ್ದಾರಿಯಾ ಅವರ ಡಾನ್ಸ್ ಕ್ಲಾಸ್​ನಲ್ಲಿ. ಡಾನ್ಸ್ ಅಂದರೆ ನನಗೆ ಪ್ಯಾಷನ್. ಪ್ರಜ್ವಲ್​ಗೂ ಡಾನ್ಸ್ ಇಷ್ಟ. ಅಲ್ಲಿಂದ ನಮ್ಮ ಜರ್ನಿ ಶುರುವಾಯಿತು. ದಿನಕಳೆದಂತೆ ಸ್ನೇಹವು ಪ್ರೀತಿಯಾಯಿತು. ನಂತರ ದಂಪತಿಗಳಾದೆವು. ಆದರೆ, ಈಗಲೂ ಗಂಡ-ಹೆಂಡತಿ ಎಂಬುದಕ್ಕಿಂತ ಒಳ್ಳೆಯ ಸ್ನೇಹಿತರಾಗಿದ್ದೇವೆ. ಬೇಕು ಬೇಡಗಳನ್ನು ಚೆನ್ನಾಗಿ ಅರಿತಿದ್ದೇವೆ. ಕೇವಲ ಗಂಡ ಹೆಂಡತಿ ರೀತಿ ಇರಬಾರದು. ಏನಾದರೂ ವಿಶೇಷ ನಮ್ಮಲ್ಲಿರಲಿ ಎಂಬ ಕಾರಣಕ್ಕೆ ಇಬ್ಬರೂ ಹಲವು ಬಗೆಯ ಚಟುವಟಿಕೆಯಲ್ಲಿ ತೊಡಗಿದ್ದೇವೆ. ಲಾಕ್​ಡೌನ್ ಸಮಯದಲ್ಲಿ ಇಬ್ಬರ ಅಭಿರುಚಿಗಳು ಬೆರೆತಿವೆ. ಅವರಿಂದ ನಾನು ಪೇಂಟಿಂಗ್ ಕಲಿತರೆ, ನನ್ನಿಂದ ಪ್ರಜ್ವಲ್ ಅಡುಗೆ ಕಲಿತಿದ್ದಾರೆ. ಕರಿಯರ್ ವಿಚಾರದಲ್ಲಿಯೂ ನನಗೆ ಯಾವುದೇ ಒತ್ತಡ ಇಲ್ಲ. ನನಗನಿಸಿದ್ದನ್ನು ಮಾಡುವ ಸ್ವಾತಂತ್ರ ನೀಡಿದ್ದಾರೆ. ಅವರ ಸಿನಿಮಾ ವಿಚಾರವಾಗಿಯೂ ನನ್ನಿಂದ ಸಲಹೆ ಪಡೆಯುತ್ತಾರೆ.

    | ರಾಗಿಣಿ ಚಂದ್ರನ್ ನಟಿ

    ಅಭಿರುಚಿಯೇ ಸೇರಿಸಿತು…

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನನ್ನ ಮತ್ತು ದಿಗಂತ್ ಇಬ್ಬರ ಅಭಿರುಚಿ ಒಂದೇ. ಸಿನಿಮಾ ಹೊರತುಪಡಿಸಿ ಇಬ್ಬರಿಗೂ ಹೊಸದನ್ನು ಕಲಿಯಬೇಕೆಂಬ ಹಂಬಲ. ಏನಾದರೊಂದು ಸಾಧಿಸಬೇಕೆಂಬ ಬಯಕೆ ಇದೆ. ನಾವಿಬ್ಬರೂ ಪ್ರಾಣಿಪ್ರಿಯರು. ಸುತ್ತಾಟ, ಪ್ರಯಾಣ, ಸೈಕ್ಲಿಂಗ್… ಹೀಗೆ ನಮ್ಮಿಬ್ಬರ ಸಾಮ್ಯತೆಯ ಪಟ್ಟಿ ಬೆಳೆಯುತ್ತ ಹೋಗುತ್ತದೆ. 2009ರಲ್ಲಿ ‘ಮನಸಾರೆ’ ಸಿನಿಮಾ ಸಮಯದಲ್ಲಿ ದಿಗಂತ್ ಪರಿಚಯವಾಯಿತು. ಅಲ್ಲಿಂದ ಶುರುವಾದ ನಮ್ಮಿಬ್ಬರ ಜರ್ನಿ ಈಗಾಗಲೇ ತುಂಬ ದೂರ ಬಂದಿದೆ. ನಮ್ಮ ನಮ್ಮ ಅಭಿರುಚಿಗಳೇ ನಮ್ಮಿಬ್ಬರನ್ನು ಮತ್ತಷ್ಟು ಮಗದಷ್ಟು ಹತ್ತಿರ ಮಾಡಿವೆ. ಮದುವೆಗೂ ಮುನ್ನ ನಾವಿಬ್ಬರೂ ಹೇಗಿದ್ದೆವೋ, ಈಗಲೂ ಹಾಗೇ ಇದ್ದೇವೆ. ನೋಡಿದವರ ಕಣ್ಣಿಗೆ ಅತ್ಯುತ್ತಮ ಸ್ನೇಹಿತರಂತೆ ಕಾಣುತ್ತೇವೆ. ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿ ಸಿಕ್ಕಿದ್ದಾನೆ. ಇಬ್ಬರೂ ಒಂದೇ ಇಂಡಸ್ಟ್ರಿಯಿಂದ ಬಂದಿರುವುದರಿಂದ ನನಗೆ ಏನೇ ಸಮಸ್ಯೆ ಎದುರಾದರೂ ನನ್ನ ಬೆನ್ನಿಗೆ ನಿಂತಿದ್ದಾನೆ. ಹ್ಯಾಪಿ ಫ್ರೆಂಡ್​ಶಿಪ್ ಡೇ ದಿಗಂತ್.

    | ಐಂದ್ರಿತಾ ರೇ ನಟಿ

    ಸ್ನೇಹವೇ ಪ್ರೀತಿಯಾಗಿ ಮುಂದುವರಿಯುತ್ತಿದೆ..

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನನ್ನ ಮತ್ತು ನಿವೇದಿತಾ ಜರ್ನಿಯೇ ಒಂದು ರೀತಿ ಮಜವಾಗಿದೆ. ನನ್ನ ಸಂಗಾತಿ ಹೇಗಿರಬಹುದು ಎಂಬ ಕುತೂಹಲ ನನಗೆ ಇತ್ತು. ಆದರೆ, ಅದೆಲ್ಲವೂ ನನಗೆ ‘ಬಿಗ್ ಬಾಸ್’ನಲ್ಲಿಯೇ ಕಾಣಿಸಿತು. ಆರಂಭದಲ್ಲಿ ಸ್ನೇಹಿತಳಾಗಿ ನಿವೇದಿತಾ ಜತೆಯಾದಳು. 106 ದಿನಗಳ ಕಾಲ ಇಬ್ಬರೂ ಜತೆಗಿದ್ದೆವು. ಅವರ ಇಷ್ಟ-ಕಷ್ಟ, ಬೇಕು-ಬೇಡ ಎಲ್ಲವೂ ಕಣ್ಣಿಗೆ ಕಾಣುತ್ತಿತ್ತು. ಖುಷಿ, ನೋವು ಎಲ್ಲವೂ ಗೊತ್ತಾಗುತ್ತ ಹೋಯಿತು. ಬಿಗ್​ಬಾಸ್ ಮನೆಯಲ್ಲಿದ್ದಾಗ ಪ್ರೀತಿ ಪ್ರೇಮದ ಸಣ್ಣ ಎಸಳೂ ನಮ್ಮ ಬಳಿ ಸುಳಿದಿರಲಿಲ್ಲ. ಯಾವಾಗ ‘ಬಿಗ್ ಬಾಸ್’ ಮುಗಿಸಿ ಮನೆಯಿಂದ ಹೊರಬಂದೆವೋ, ಫ್ಯಾನ್ ಪೇಜ್​ಗಳನ್ನು ನೋಡಿ ನಮ್ಮಿಬ್ಬರ ನಡುವೆ ಪ್ರೀತಿ ಚಿಗುರೊಡೆಯಿತು. ನಾವಿಬ್ಬರೂ ಒಳ್ಳೆಯ ಜೋಡಿ ಎಂದು ಇಡೀ ನಾಡು ಹೇಳುತ್ತಿತ್ತು. ಇಬ್ಬರೂ ಇನ್ನೇನು ಮದುವೆ ಆಗುತ್ತಾರೆ ಎಂಬ ವದಂತಿ ಸಹ ಹರಿದಾಡಿತ್ತು. ಕೊನೆಗೆ ಪ್ರೇಮನಿವೇದನೆಯೂ ಆಯಿತು. ಮದುವೆಯೂ ಆಯಿತು. ಜೀವನದಲ್ಲಿ ಇಬ್ಬರೂ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ. ಆ ಏರಿಳಿತಗಳಿಂದ ಗಟ್ಟಿಯಾಗಿದ್ದೇವೆಯೇ ಹೊರತು ಮುಗ್ಗರಿಸಿಲ್ಲ. ನಮ್ಮಿಬ್ಬರ ಈ ಸ್ನೇಹ ಪ್ರೀತಿಯಾಗಿ ಹೀಗೆಯೇ ಮುಂದುವರಿಯಲಿದೆ.

    | ಚಂದನ್ ಶೆಟ್ಟಿ ಸಂಗೀತ ನಿರ್ದೇಶಕ

    ಸ್ನೇಹದಿಂದಲೇ ಸತಿಪತಿಗಳಾಗಿದ್ದು

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನಾನು ಮತ್ತು ಚಂದನ್ ತುಂಬ ವರ್ಷಗಳ ಸ್ನೇಹಿತರು. ಆರಂಭದಲ್ಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದೆವು. ಆಗ ಅಷ್ಟೊಂದು ಕ್ಲೋಸ್ ಇರಲಿಲ್ಲ. ಒಬ್ಬರಿಗೊಬ್ಬರು ಹಿತೈಷಿಗಳ ತರಹ ಇದ್ದೆವು. ನಿಧಾನಕ್ಕೆ ಇಬ್ಬರ ನಡುವಿನ ಬಾಂಡಿಂಗ್ ಹೆಚ್ಚಾಗುತ್ತಾ ಹೋಯಿತು. ಏನೇ ವಿಚಾರಗಳಿದ್ದರೂ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದೆವು. ಸಮಸ್ಯೆಗಳಿಗೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಿದ್ದೆವು. ಯಾವುದೇ ಮನಸ್ತಾಪ, ಮುನಿಸು ನಮ್ಮ ಬಳಿ ಸುಳಿಯುತ್ತಿರಲಿಲ್ಲ. ಜಗಳ ಆಡಿದ್ದು ತುಂಬ ಕಡಿಮೆ. ಇದೀಗ ಇಬ್ಬರೂ ಸತಿಪತಿಗಳಾಗಿದ್ದೇವೆ. ಇದಕ್ಕೂ ಮೊದಲು ನಾವು ಒಳ್ಳೆಯ ಸ್ನೇಹಿತರು. ಅದರಿಂದಲೇ ದಂಪತಿಗಳಾಗಿದ್ದೇವೆ. ಸಿನಿಮಾ, ಕಿರುತೆರೆ ಎಲ್ಲದರಲ್ಲಿಯೂ ಚಂದನ್ ಬೆಂಬಲ ನೀಡುತ್ತಾ ಬಂದಿದ್ದಾರೆ. ನನ್ನ ಕಡೆಯಿಂದಲೂ ಅವರಿಗೆ ಬೆಂಬಲ ಇದ್ದೇ ಇದೆ. ಇಲ್ಲಿಯವರೆಗೂ ಒಬ್ಬ ಸ್ನೇಹಿತನಾಗಿ ನನಗೆ ಏನೆಲ್ಲ ಸಲಹೆ ನೀಡುತ್ತಾ ಬಂದಿದ್ದಾರೋ, ಅದೇ ಮುಂದುವರಿಯುತ್ತದೆ.

    | ಕವಿತಾ ಗೌಡ ನಟಿ

    ನನ್ನ ಪಾಲಿಗೆ ಅವಳೇ ಸ್ನೇಹಿತೆ…

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ಶೀತಲ್ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ನನ್ನ ಸೀನಿಯರ್ ಆಗಿದ್ದಳು. ಟೆನಿಸ್ ಆಟಗಾರ್ತಿಯಾಗಿದ್ದರಿಂದ ಕ್ರೀಡಾಪಟುಗಳಿಗಾಗಿ 2008ರಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೆವು. ಅಲ್ಲಿ ಪರಿಚಯವಾಯ್ತು. ಬಳಿಕ ಉತ್ತಮ ಸ್ನೇಹಿತೆಯಾದಳು. 2009-2011 ನನಗೆ ಕೆಟ್ಟ ದಿನಗಳು. 2011ರಲ್ಲಿ ಕ್ರಿಕೆಟ್ ಬಿಡುವ ಯೋಚನೆಯಲ್ಲಿದ್ದೆ, ಆಗ ಓರ್ವ ಸ್ನೇಹಿತೆಯಾಗಿ ಮಾನಸಿಕ ಸ್ಥೈರ್ಯ ತುಂಬಿದಳು. 2012ರಲ್ಲಿ ಅವಳು ಯುಎಸ್​ಎಗೆ ಹೋಗಿದ್ದಳು. ಅಲ್ಲಿಂದ ವಾಪಸ್ ಬಂದ ಮೇಲೆ ಅವಳನ್ನು ಮದುವೆ ಮಾಡಿಕೊಳ್ಳುವ ನನ್ನ ಭಾವನೆಯನ್ನು ತಿಳಿಸಿದೆ. ಕೆಲ ದಿನಗಳ ಬಳಿಕ ಒಪ್ಪಿಗೆ ಸೂಚಿಸಿದಳು. ನಾವಿಬ್ಬರೂ ಪ್ರೇಮಿಗಳಿಗಿಂತ ಹೆಚ್ಚಾಗಿ ಆಪ್ತ ಸ್ನೇಹಿತರಾದೆವು. 2005ರಲ್ಲಿ ತಂದೆ ತೀರಿಕೊಂಡ ಬಳಿಕ ಆಕೆ ಟೆನಿಸ್ ಕ್ರೀಡೆಯನ್ನೇ ತ್ಯಜಿಸಿದ್ದಳು. ಮತ್ತೆ ಆಡುವಂತೆ ನಾನೇ ಉತ್ತೇಜಿಸಿದೆ. 2009ರಲ್ಲಿ 800-850 ಎಐಟಿಎ ರ್ಯಾಂಕಿಂಗ್​ನಲ್ಲಿದ್ದ ಶೀತಲ್, ಬಳಿಕ ಕೇವಲ 8 ತಿಂಗಳಲ್ಲಿ ನಂ.1 ರ್ಯಾಂಕ್​ಗೆ ಏರಿದ್ದಳು. 2010ರ ಕಾಮನ್ವೆಲ್ತ್ ಗೇಮ್್ಸ ಆಡುವ ಕನಸು ಶೀತಲ್​ಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಅವಳು ಆಡಲಿಲ್ಲ. ಬಳಿಕ ಟೆನಿಸ್​ಗೆ ನಿವೃತ್ತಿ ಘೋಷಿಸಿದಳು. ಸದ್ಯ ಲೈಫ್ ಕೋಚಿಂಗ್ ತರಬೇತಿ ನೀಡುತ್ತಿದ್ದಾಳೆ. ಮಗ ನೀಲ್​ಗೆ ಉತ್ತಮ ತಾಯಿಯಾಗಿ, ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿದ್ದಾಳೆ.

    | ರಾಬಿನ್ ಉತ್ತಪ್ಪ ಕ್ರಿಕೆಟಿಗ

    ಕುಟುಂಬವೇ ನನ್ನ ಸ್ನೇಹ ಬಳಗ

    ಗೆಳೆತನ ಎಂಬ ನವಿಲುಗರಿ; ಇಂದು ಫ್ರೆಂಡ್​ಶಿಪ್ ಡೇ..ನನ್ನ ಜೀವನದಲ್ಲೂ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಆದರೆ, ಎಲ್ಲ ವಿಚಾರಗಳನ್ನೂ ಎಲ್ಲರೊಂದಿಗೂ ನಾನು ಹಂಚಿಕೊಳ್ಳುವುದಿಲ್ಲ. ವೈಯಕ್ತಿಕ ವಿಚಾರಗಳನ್ನು ಮನೆಯವರ ಜತೆಗೆ ಮಾತ್ರ ಹಂಚಿಕೊಳ್ಳುತ್ತೇನೆ. ಅವು ಅವರಿಗಷ್ಟೇ ಗೊತ್ತಿರುತ್ತವೆ. ನಿಜ ಹೇಳಬೇಕೆಂದರೆ, ನಾನು ಅಂತಮುಖಿ. ಬೇರೆಯವರೊಡನೆ ಮಿಂಗಲ್ ಆಗುವುದು ಕಷ್ಟ. ಜೀವನದಲ್ಲಿ ತಂದೆ-ತಾಯಿಯೇ ನನಗೆಲ್ಲ. ಇಲ್ಲಿಯವರೆಗೂ ನಾನೇನು ಆಗಿದ್ದೇನೋ ಅದಕ್ಕೆ ಅವರ ಬೆಂಬಲ ಇದ್ದೇ ಇದೆ. ಮುಂದೆಯೂ ಇರಲಿದೆ. ಶಾಲಾ ದಿನಗಳಿಂದಲೂ ನನ್ನ ಪ್ರತಿಯೊಂದನ್ನು ಬೇಕು-ಬೇಡಗಳನ್ನು ಹೇಳಿಕೊಂಡು ಬಂದಿದ್ದೇನೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪಾಲಕರೂ ಸ್ನೇಹಿತರಾಗಿ ಬದಲಾಗುತ್ತಾರಂತೆ. ನನ್ನ ಜೀವನದಲ್ಲೂ ಅದೇ ಆಗಿದೆ. ಹಾಗಾಗಿ ನನ್ನ ಕುಟುಂಬವೇ ಸ್ನೇಹ ಬಳಗ.

    | ರಂಜನಿ ರಾಘವನ್ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts