More

  ಮನೆ ಬಾಗಿಲಿಗೆ ತಾಜಾ ಮೀನು: 150 ಮತ್ಸ್ಯ ವಾಹಿನಿ ವಾಹನಗಳಿಗೆ ಸಿದ್ದರಾಮಯ್ಯ ಚಾಲನೆ

  ಬೆಂಗಳೂರು: ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ನಾವೆಲ್ಲಾ ಮೀನುಗಾರ ಸಮುದಾಯದ ಪರವಾಗಿ ಇದ್ದೇವೆ. ನಿಮ್ಮ ಆಶೀರ್ವಾದ ನಮಗಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದ್ದಾರೆ.

  ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ 150 ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ ಸೇವೆಗೆ ಚಾಲನೆ ನೀಡಿದ ಬಳಿಕ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಮೀನುಗಾರಿಕೆ ವಿಶ್ವ ವಿದ್ಯಾಲಯ ಬೇಕೆಂದು ಬೇಡಿಕೆ ಇದ್ದು, ಇದನ್ನು ಮುಂದಿನ ವರ್ಷ ವಿಚಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲ ಅಗತ್ಯ ನೆರವನ್ನೂ ನೀಡುತ್ತದೆ ಎಂದರಲ್ಲದೇ, ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ. ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭಿಸಲಾಗುತ್ತದೆ ಎಂದು ವಿವರಿಸಿದರು. ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿನಿಂದಲೂ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆ. ಆದರೂ ಹಿಂದಿನ ಸರ್ಕಾರ ಮತ್ತು ಸರ್ಕಾರದಲ್ಲಿದ್ದ ಸಚಿವರು ಪರಿಹಾರ ಒದಗಿಸಲೇ ಇಲ್ಲ ಎಂದು ಹೇಳಿದರು.

  ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರಲ್ಲಿ ಮತ್ಸ್ಯ ಭವನ, ಮ್ಯೂಸಿಯಂ ಹಾಗೂ ತರಬೇತಿ ಕೇಂದ್ರ ಸ್ಥಾಪನೆಗೆ 50 ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ಹಾಗೆಯೇ, ಸೀಗಡಿ ಕೃಷಿಕರು ನಷ್ಟದಲ್ಲಿದ್ದು, ಇವರಿಗೆ ಶೇ.50 ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಮೀನುಗಾರರಿಗೆ ಡೀಸೆಲ್, ಸೀಮೆಎಣ್ಣೆ ಹಣ ಹಿಂದಿನ ಸರ್ಕಾರ ಕೊಟ್ಟಿರಲಿಲ್ಲ. ಸಿಎಂ ಸಹಕರಿಸಿ, ಈಗಿನ ಸಚಿವರು ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

  ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದು ಹಾಗೂ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸಲು ಮತ್ಸ್ಯವಾಹಿನಿ ವಾಹನದ ಉದ್ದೇಶ. ಈಗ 150 ವಾಹನ ಸೇವೆ ಆರಂಭಿಸಿದ್ದು, ಮುಂದೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುತ್ತದೆ.

  | ಮಂಕಾಳ ಎಸ್ ವೈದ್ಯ, ಮೀನುಗಾರಿಕೆ ಸಚಿವ

  • 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಲ್ಲಿ ಸಂಚರಿಸಲಿವೆ.
  • ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯಗಳ ಮಾರಾಟ ಮಾಡಲಾಗುತ್ತದೆ
  • ವಾಹನ ಭದ್ರತಾ ಠೇವಣಿ 2 ಲಕ್ಷ ರೂ., ಮಾಸಿಕ 3000 ರೂ. ಬಾಡಿಗೆಗೆ ನೀಡಲಾಗುತ್ತದೆ
  • ಉಳಿದ ಜಿಲ್ಲೆಗಳಿಗೆ 150 ವಾಹನ ಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುತ್ತದೆ
  • ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆ

  ಕನ್ನಡದಲ್ಲಿ ಹೇಳ್ರೀ: ಸಿಎಂ ಸಿದ್ದರಾಮಯ್ಯ ಮೀನುಗಾರರಿಗೆ ಡೀಸೆಲ್, ಸೀಮೆ ಎಣ್ಣೆ ವಿತರಿಸುವ ವಿಷಯ ಪ್ರಸ್ತಾಪ ಮಾಡುವಾಗ, ಅಧಿಕಾರಿಗಳಿಂದ ಮಾಹಿತಿ ಬಯಸಿದರು. ಈ ವೇಳೆ ಮೆಕನೈಸ್ ದೋಣಿ ಎಂದು ಅಧಿಕಾರಿ ಹೇಳಿದಾಗ, ಕನ್ನಡದಲ್ಲಿ ಹೇಳ್ರೀ…, ಯಂತ್ರ ಚಾಲಿತ ನಾಡ ದೋಣಿ ಅಲ್ಲವೇ ಎಂದು ಕುಟುಕಿದರು. ಅದೇ ರೀತಿ ನಾಡ ದೋಣಿ ಸಂಖ್ಯೆಯ ಬಗ್ಗೆ ಗೊಂದಲ ಉಂಟಾದಾಗ ಸಾವಧಾನವಾಗಿ ಮಾತನ್ನು ಹೊರಳಿಸಿ ಮುಂದುವರಿಸಿದರು.

  ನಮಗೂ ಸಾಲ ಕೊಡಿ ಎಂದ ಪುರುಷರು

  ಮೀನುಗಾರಿಕಾ ಮಹಿಳೆಯರಿಗೆ ನೀಡುವ ಬಡ್ಡಿ ರಹಿತ ಸಾಲದ ಪ್ರಮಾಣ ಮೂರು ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಾಗ ಸಭಾಂಗಣದಲ್ಲಿದ್ದ ಹಲವು ಮಹಿಳೆಯರು ಇಲ್ಲ… ಇಲ್ಲ ಎಂದು ಕೈ ಎತ್ತಿ ಸನ್ನೆ ಮಾಡಿದರು. ತಮ್ಮ ಭಾಷಣದಲ್ಲಿ ಸಿಎಂ ಎರಡನೇ ಬಾರಿ ಇದೇ ವಿಚಾರ ಪ್ರಸ್ತಾಪಿಸಿದಾಗಲೂ ಇಲ್ಲ ಇಲ್ಲ ಎಂದು ಗುಜು ಗುಜು ಶುರುವಾಯಿತು. ಆಗ ಅಕ್ಕಪಕ್ಕ ಇದ್ದವರು ಬಾಯಿ ಮುಚ್ಚಿಸಿದರು. ಇನ್ನು ನಮಗೂ ಸಾಲ ಕೊಡಿಸುವ ವ್ಯವಸ್ಥೆ ಬೇಕೆಂದು ಪುರುಷ ಮೀನುಗಾರರು ಬೇಡಿಕೆ ಇಟ್ಟಾಗ, ಮುಂದಿನ ವರ್ಷ ಕೊಡೋಣ. ಒಟ್ಟಾರೆ ನಮ್ಮ ಸರ್ಕಾರ ನಿಮ್ಮ ಜತೆ ಇರುತ್ತದೆ ಎಂದು ಸಿಎಂ ಹೇಳಿ ಸಮಾಧಾನಪಡಿಸಿದರು. ಮತ್ತಷ್ಟು ಬೇಡಿಕೆ ಮುಂದಿಡಲು ಸಭೆಯಲ್ಲಿದ್ದವರು ಎದ್ದು ನಿಲ್ಲುತ್ತಿದ್ದಂತೆ ಸಿಎಂ ಗದರಿ ಕೂರಿಸಿದರು. ಈ ನಡುವೆ ಕೆರೆಗಳಲ್ಲಿ ನೀರಿಲ್ಲ ಎಂದು ಕೆಲವು ಮೀನು ಗುತ್ತಿಗೆದಾರರು ದನಿ ಎತ್ತಿ ಅವಧಿ ವಿಸ್ತರಿಸುವಂತೆ ಕೋರಿದ್ದು, ಮಾನವೀಯತೆ ನೆಲೆಯಲ್ಲಿ ಪರಿಗಣಿಸುವುದಾಗಿ ಸಿಎಂ ತಿಳಿಸಿದರು.

  ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

  ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts