More

    ಚುನಾವಣಾ ಬಾಂಡ್: ಹೊಸ ಡೇಟಾ ರಿಲೀಸ್​, 6,986 ಕೋಟಿ ರೂ. ಪಡೆದ ಬಿಜೆಪಿ, ಕಾಂಗ್ರೆಸ್​ ಸ್ವೀಕರಿಸಿದ ಹಣವೆಷ್ಟು?

    ನವದೆಹಲಿ: ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್​ ರದ್ದು ಮಾಡಿದ ಚುನಾವಣಾ ಬಾಂಡ್​ ಯೋಜನೆ ಅಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಪಡೆದ ನಿಧಿಗೆ ಸಂಬಂಧಿಸಿದ ಹೊಸ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ ಭಾನುವಾರ ಬಿಡುಗಡೆ ಮಾಡಿದೆ. ಮುಚ್ಚಿದ ಲಕೋಟೆಯಲ್ಲಿ ಹೊಸ ಮಾಹಿತಿಯನ್ನು ಸುಪ್ರೀಂಕೋರ್ಟ್​ಗೆ ಆಯೋಗ ಸಲ್ಲಿಸಿದ್ದು, ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದ ಬಳಿಕ ಚುನಾವಣಾ ಆಯೋಗವು ಡೇಟಾವನ್ನು ತನ್ನ ವೆಬ್‌ಸೈಟ್​ಗೆ ಅಪ್‌ಲೋಡ್ ಮಾಡಿದೆ.

    ಹೊಸ ಡೇಟಾದಲ್ಲಿ ಚುನಾವಣಾ ಬಾಂಡ್​ಗಳನ್ನು ವಿತರಿಸಿದ ದಿನಾಂಕ, ನಿಧಿಗಳ ವರ್ಗ, ಬಾಂಡ್​ಗಳ ಸಂಖ್ಯೆ ಮತ್ತು ಬಾಂಡ್​ಗಳನ್ನು ವಿತರಿಸಿದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ದ ಶಾಖೆಯ ಮಾಹಿತಿ ಇದೆ. ಅಲ್ಲದೆ, ಬಾಂಡ್​ಗಳನ್ನು ಸ್ವೀಕರಿಸಿದ ದಿನಾಂಕ ಮತ್ತು ಪಕ್ಷಗಳ ಬ್ಯಾಂಕ್​ ಖಾತೆಗಳಿಗೆ ಹಣ ಕ್ರೆಡಿಟ್​ ಆದ ಮಾಹಿತಿಯನ್ನು ಹೊಸ ಡೇಟಾ ಒಳಗೊಂಡಿದೆ.

    ಆದಾಗ್ಯೂ, ಹೊಸ ಡೇಟಾದಲ್ಲಿ ಚುನಾವಣಾ ಬಾಂಡ್ ಸಂಖ್ಯೆಗಳನ್ನು ಒಳಗೊಂಡಿಲ್ಲ. ಬಾಂಡ್​ಗಳ ಸಂಖ್ಯೆ ಮುಖ್ಯವಾಗಿದ್ದು, ಇದು ದಾನಿಗಳು ಮತ್ತು ಸ್ವೀಕರಿಸುವವರಿಗೆ ಲಿಂಕ್ ಮಾಡುತ್ತದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಡೇಟಾದಲ್ಲಿ ಕೆಲವು ಪಕ್ಷಗಳು ತಮ್ಮ ದಾನಿಗಳ ಮಾಹಿತಿಗಳನ್ನು ಸಹ ನೀಡಿವೆ.

    ಡೇಟಾ ಪ್ರಕಾರ ಬಿಜೆಪಿ ಪಕ್ಷವು ಬಾಂಡ್​ಗಳ ಮೂಲಕ ಅತಿ ಹೆಚ್ಚು ನಿಧಿಯನ್ನು ಸ್ವೀಕರಿಸಿದೆ. 6,986.5 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ (1,397 ಕೋಟಿ ರೂ.), ಕಾಂಗ್ರೆಸ್​ (1,334 ಕೋಟಿ ರೂ.) ಮತ್ತು ಭಾರತ ರಾಷ್ಟ್ರ ಸಮಿತಿ (1,322 ಕೋಟಿ ರೂ.) ಪಕ್ಷಗಳಿವೆ. ಒಡಿಶಾದ ಆಡಳಿತಾರೂಢ ಬಿಜೆಡಿ ಕೂಡ 944.5 ಕೋಟಿ ರೂ.ಗಳನ್ನು ಪಡೆದಿದೆ. ಡಿಎಂಕೆ 656.5 ಕೋಟಿ ಸ್ವೀಕರಿಸಿದರೆ, ಆಂಧ್ರದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ 442.8 ಮತ್ತು ಜೆಡಿಎಸ್​ ಪಕ್ಷ 89.75 ಕೋಟಿ ಸ್ವೀಕರಿಸಿದೆ.

    ಸ್ಯಾಂಟಿಯಾಗೋ ಮಾರ್ಟಿನ್ ನೇತೃತ್ವದ ಲಾಟರಿ ಕಂಪನಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 1,368 ಕೋಟಿ ರೂಪಾಯಿಗಳ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡುವ ಮೂಲಕ ಅತಿದೊಡ್ಡ ಖರೀದಿದಾರ ಎಂದು ಈ ಹಿಂದೆ ಬಿಡುಗಡೆಯಾದ ಡೇಟಾದಲ್ಲಿ ಬಹಿರಂಗವಾಯಿತು. ಹೊಸ ಡೇಟಾ ಪ್ರಕಾರ ಇದೇ ಕಂಪನಿಯಿಂದ ಡಿಎಂಕೆ 509 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಕಂಪನಿಯ ಒಟ್ಟು ದೇಣಿಗೆಯಲ್ಲಿ ಸುಮಾರು 37 ರಷ್ಟು ಎಂದು ತಿಳಿದುಬಂದಿದೆ.

    ಚುನಾವಣಾ ಬಾಂಡ್​ ವಿಚಾರದಲ್ಲಿ ಫೆಬ್ರವರಿ 15ರಂದು ಸುಪ್ರೀಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿತು. ರಾಜಕೀಯ ಪಕ್ಷಗಳು ಪಡೆಯುವ ಚುನಾವಣಾ ಬಾಂಡ್​ ಅನ್ನು ಅಸಂವಿಧಾನಿಕ ಎಂದಿರುವ ಉನ್ನತ ನ್ಯಾಯಾಲಯ ಅದನ್ನು ರದ್ದು ಮಾಡಿ, ಬಾಂಡ್​ ವಿವರಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು. 2019 ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೂ ಸುಪ್ರೀಂಕೋರ್ಟ್​ ತಿಳಿಸಿತ್ತು. ಅಲ್ಲದೆ, ಚುನಾವಣಾ ಬಾಂಡ್​ಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್​ಗಳಿಗೆ ಸೂಚನೆ ನೀಡಿತು. ಇದರ ಮಧ್ಯೆ ಗಡುವು ವಿಸ್ತರಣೆ ಕೋರಿ ಎಸ್​ಬಿಐ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಛೀಮಾರಿ ಹಾಕಿದ ಕೋರ್ಟ್​ ಮಾರ್ಚ್​ 12ರಂದು ವಿವರ ಸಲ್ಲಿಸುವಂತೆ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಎಸ್​ಬಿಐ ಚುನಾವಣಾ ಆಯೋಗಕ್ಕೆ ವಿವರವನ್ನು ಸಲ್ಲಿಸಿದ್ದು, ಇದನ್ನು ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿತು. ಅದರ ಪ್ರಕಾರ 2019ರ ಏಪ್ರಿಲ್​ 1ರಿಂದ 2024ರ ಫೆಬ್ರವರಿ 15ರವರೆಗೆ 22,217 ಬಾಂಡ್​ಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 22,030 ಬಾಂಡ್​ಗಳನ್ನು ಬಿಡಿಸಿಕೊಳ್ಳಲಾಗಿದೆ ಎಂದು ಎಸ್​ಬಿಐ ತಿಳಿಸಿದೆ. 15 ದಿನಗಳ ಮಾನ್ಯತೆಯ ಅವಧಿಯಲ್ಲಿ ಚುನಾವಣಾ ಪಕ್ಷಗಳು ನಗದೀಕರಿಸದ ಉಳಿದ 187 ಬಾಂಡ್​ಗಳ ಮೊತ್ತವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ಹೇಳಿದೆ. (ಏಜೆನ್ಸೀಸ್​)

    WPL 2024 RCBvsDC: ಗ್ಯಾರಂಟಿ ಆಗಲಿದ್ಯಾ ‘ಈ ಸಲ ಕಪ್​ ನಮ್ದೇ’? ಮೊಳಗಿತು ಆರ್​ಸಿಬಿ ಫ್ಯಾನ್ಸ್​ ಕಹಳೆ

    ಮನವೊಲಿಸುವ ಪ್ರಯತ್ನ ಒಮ್ಮೆಯೂ ಮಾಡಲಿಲ್ಲ; ಹಾರ್ದಿಕ್​ ಬಗ್ಗೆ ಜಿಟಿ ಕೋಚ್​ ಹೇಳಿದ್ದಿಷ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts