More

     ಇಂದಿನಿಂದ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ

    ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯೂ ಭಾನುವಾರದಿಂದ ಆರಂಭಗೊಳ್ಳಲಿದೆ. ಎಂಟು ತಿಂಗಳ ಅಂತರದಲ್ಲೇ ಎರಡನೇ ಬಾರಿಗೆ ಈ ಪ್ರತಿಷ್ಠಿತ ಟೂರ್ನಿ ನಡೆಯುತ್ತಿದೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಟೂರ್ನಿ ನಡೆದಿತ್ತು. ವಿಶ್ವ ಟೆನಿಸ್‌ನ ಬಿಗ್ ಥ್ರೀ ಖ್ಯಾತಿಯ ಹಾಲಿ ಚಾಂಪಿಯನ್ ರಾಫೆಲ್ ನಡಾಲ್, ವಿಶ್ವ ನಂ.1 ನೊವಾಕ್ ಜೋಕೊವಿಕ್ ಹಾಗೂ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಒಂದೇ ಭಾಗದಲ್ಲಿ ಸ್ಥಾನ ಪಡೆದಿರುವುದರಿಂದ ಟೂರ್ನಿಯಲ್ಲಿ ರೋಚಕತೆ ಹುಟ್ಟಿಸಿದೆ. ದಾಖಲೆಯ 13ನೇ ಪ್ರಶಸ್ತಿ ಗೆದ್ದಿರುವ ಸ್ಪೇನ್ ತಾರೆ ರಾಫೆಲ್ ನಡಾಲ್ ಮತ್ತೊಮ್ಮೆ ಫೇವರಿಟ್ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ರೋಜರ್ ಫೆಡರರ್ ಈ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಬಿಗ್ ಥ್ರೀ ಮೂವರಲ್ಲಿ ಒಬ್ಬರೂ ಮಾತ್ರ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದ್ದು, ಮಣ್ಣಿನಂಕಣದ ರಾಜ ನಡಾಲ್‌ಗೆ ಕಡಿವಾಣ ಹೇರಿದರೆ ಟೂರ್ನಿಯಲ್ಲಿ ನೂತನ ಚಾಂಪಿಯನ್ ಹೊರಹೊಮ್ಮಿದರೂ ಅಚ್ಚರಿಯಿಲ್ಲ. ಮತ್ತೊಂದೆಡೆ, ಜೋಕೋಗೆ ತಿಂಗಳ ಆರಂಭದಲ್ಲಿ ಇಟಾಲಿಯನ್ ಓಪನ್‌ನಲ್ಲಿ ನಡಾಲ್ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಟೂರ್ನಿಯಲ್ಲಿ 2ನೇ ಶ್ರೇಯಾಂಕ ಹೊಂದಿರುವ ಡೇನಿಲ್ ಮೆಡ್ವೆಡೆವ್, 4ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಪ್ರಶಸ್ತಿ ಕನಸಿನಲ್ಲಿದ್ದಾರೆ.

    * ಸ್ವಿಯಾಟೆಕ್‌ಗೆ ಪ್ರಶಸ್ತಿ ಉಳಿಸಿಕೊಳ್ಳುವ ಹಂಬಲ
    ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಪ್ರಶಸ್ತಿ ಉಳಿಸಿಕೊಳ್ಳುವ ಹಂಬದಲ್ಲಿದ್ದಾರೆ. ಸದ್ಯ ವಿಶ್ವ ನಂ.9ನೇ ಸ್ಥಾನದಲ್ಲಿದ್ದರೂ ಇತ್ತೀಚೆಗೆ ಇಟಾಲಿಯನ್ ಓಪನ್ ಜಯಿಸುವ ಮೂಲಕ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಹಂಬಲದಲ್ಲಿದ್ದಾರೆ. ಅಗ್ರಶ್ರೇಯಾಂಕಿತ ಆಟಗಾರ್ತಿ ಆಸ್ಟ್ರೇಲಿಯಾದ ಅಶ್ಲೆಗ್ ಬಾರ್ಟಿ, ಜಪಾನ್‌ನ ನವೊಮಿ ಒಸಾಕ, ಬೆಲಾರಸ್‌ನ ಅರ್ಯನಾ ಸಬಲೆಂಕಾ, ಅಮೆರಿಕದ ಸೋಫಿಯಾ ಕೆನಿನ್, ಉಕ್ರೇನ್‌ನ ಎಲಿನಾ ಸ್ವೀಟೊಲಿನಾ, ಕೆನಡದ ಬಿಯಾಂಕ ಆ್ಯಂಡ್ರೆಕ್ಯೂ, ಅಮರಿಕದ ಸೆರೇನಾ ವಿಲಿಯಮ್ಸ್ ಹಾಗೂ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ವಿಭಾಗದ ೆವರಿಟ್‌ಗಳಾಗಿದ್ದಾರೆ.

    * ಬೋಪಣ್ಣ, ದಿವಿಜ್ ಶರಣ್ ಕಣಕ್ಕೆ
    ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲೇ ಭಾರತದ ಹೋರಾಟ ಅಂತ್ಯಕಂಡಿದ್ದು, ಕರ್ನಾಟಕದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಪುರುಷರ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

    ಪಂದ್ಯಗಳು ಆರಂಭ: ಮಧ್ಯಾಹ್ನ 2.20ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    * 15: ಕಳೆದ 16 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ 15 ಪ್ರಶಸ್ತಿಗಳು ಬಿಗ್ ಥ್ರಿ (ನಡಾಲ್, ಜೋಕೋ, ಫೆಡರರ್) ಪಾಲಾಗಿವೆ.

    * 2005ರ ಫ್ರೆಂಚ್ ಓಪನ್ ಟೂರ್ನಿಯಿಂದ ನಡೆದಿರುವ 63 ಪ್ರಶಸ್ತಿಗಳ ಪೈಕಿ 54 ಪ್ರಶಸ್ತಿಗಳು ಬಿಗ್ ಥ್ರಿ ಪಾಲಾಗಿವೆ. ಇದರಲ್ಲಿ 23 ಫೈನಲ್ ಪಂದ್ಯಗಳ ಕಾದಾಟ ಈ ಮೂವರ ನಡುವೆಯೇ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts