More

    ಫ್ರೆಂಚ್ ಓಪನ್: ನೊವಾಕ್ ಜೋಕೊವಿಕ್‌ಗೆ ಅದೃಷ್ಟದ ಗೆಲುವು, ಹಾಲಿ ಚಾಂಪಿಯನ್ ನಡಾಲ್‌ಗೆ ಮುನ್ನಡೆ

    ಪ್ಯಾರಿಸ್: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಹಾಗೂ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರುವಲ್ಲಿ ಸಫಲರಾಗಿದ್ದಾರೆ. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಜೋಕೊವಿಕ್ ಕಠಿಣ ಪರಿಶ್ರಮ ಮತ್ತು ಅದೃಷ್ಟದ ಬಲದಿಂದ ಮುನ್ನಡೆದರು. ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧದ 4ನೇ ಸುತ್ತಿನ ಕಾದಾಟದಲ್ಲಿ ಮೊದಲೆರಡು ಸೆಟ್ ಸೋತು ಇಕ್ಕಟ್ಟಿಗೆ ಸಿಲುಕಿದ್ದ ಜೋಕೋ, ಮತ್ತೆರಡು ಸೆಟ್ ಗೆದ್ದು ತಿರುಗೇಟು ನೀಡಿದ್ದಲ್ಲದೆ, ಕೊನೇ ಸೆಟ್‌ನಲ್ಲಿ ಎದುರಾಳಿ ಆಟಗಾರ ಗಾಯದಿಂದ ನಿವೃತ್ತಿ ಹೊಂದಿದ ಕಾರಣ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಸತತ 12ನೇ ಬಾರಿ ಅಂತಿಮ 8ರ ಘಟ್ಟಕ್ಕೇರಿದ ಸಾಧನೆ ಮಾಡಿದರು.

    ಸೆರ್ಬಿಯಾ ತಾರೆ ಜೋಕೊವಿಕ್‌ಗೆ ಪ್ರಬಲ ಪ್ರತಿರೋಧ ಒಡ್ಡಿದ 19 ವರ್ಷದ ಮುಸೆಟ್ಟಿ 5ನೇ ಸೆಟ್ ವೇಳೆ ಗಾಯದಿಂದ ಬಳಲಿ ವೈದ್ಯಕೀಯ ಟೈಮ್‌ಔಟ್ ತೆಗೆದುಕೊಂಡರು. ಕೊನೆಗೆ ಜೋಕೊವಿಕ್ 6-7, 6-7, 6-1, 6-0, 4-0ರಿಂದ ಮುನ್ನಡೆಯಲ್ಲಿದ್ದಾಗ ಮುಸೆಟ್ಟಿ ಪಂದ್ಯದಿಂದ ನಿವೃತ್ತಿ ಹೊಂದಿದರು. 3 ಗಂಟೆ 27 ನಿಮಿಷಗಳ ಕಾಲ ಸಾಗಿದ ಕಾದಾಟದಲ್ಲಿ 34 ವರ್ಷದ ಜೋಕೋ, ದಿಟ್ಟ ಹೋರಾಟದ ಮೂಲಕ ತಿರುಗೇಟು ನೀಡಿ ಹಾಲಿ ಟೂರ್ನಿಯಲ್ಲೇ 19ನೇ ಗ್ರಾಂಡ್ ಸ್ಲಾಂ ಜಯಿಸುವ ಆಸೆಯನ್ನು ಜೀವಂತ ಇರಿಸಿಕೊಂಡರು. ಮೊದಲೆರಡು ಸೆಟ್‌ಗಳನ್ನು ಟೈಬ್ರೇಕರ್‌ನಲ್ಲಿ ಕಳೆದುಕೊಂಡ ಜೋಕೋ, ಮುಂದಿನೆರಡು ಸೆಟ್‌ಗಳಲ್ಲಿ ಕೇವಲ 14 ಪಾಯಿಂಟ್ ಬಿಟ್ಟುಕೊಟ್ಟು ತಿರುಗೇಟು ನೀಡಿದರು. ವೃತ್ತಿಜೀವನದಲ್ಲಿ ಅವರು 5ನೇ ಬಾರಿಗೆ ಮೊದಲೆರಡು ಸೆಟ್ ಸೋತ ಬಳಿಕ ಪಂದ್ಯ ಜಯಿಸಿದ ಸಾಧನೆ ಮಾಡಿದರು.

    * ನಡಾಲ್‌ಗೆ ಸುಲಭ ಜಯ
    ಹಾಲಿ ಚಾಂಪಿಯನ್ ರಾೆಲ್ ನಡಾಲ್ 7-5, 6-3, 6-0 ನೇರ ಸೆಟ್‌ಗಳಿಂದ ಇಟಲಿಯ 19 ವರ್ಷದ ಆಟಗಾರ ಜನ್ನಿಕ್ ಸಿನ್ನರ್ ಎದುರು ಜಯ ದಾಖಲಿಸಿ 14ನೇ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಹಾಕಿದರು. ರೋಲ್ಯಾಂಡ್ ಗ್ಯಾರೊಸ್‌ನಲ್ಲಿ 15ನೇ ಬಾರಿಗೆ ಎಂಟರಘಟ್ಟಕ್ಕೇರಿದರು. 6ನೇ ಶ್ರೇಯಾಂಕಿತ ಜರ್ಮನಿ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತಿನ ಪಂದ್ಯದಲ್ಲಿ ಜಪಾನ್ ತಾರೆ ಕೀ ನಿಶಿಕೋರಿಗೆ 6-4, 6-1, 6-1 ನೇರಸೆಟ್‌ಗಳಿಂದ ಸೋಲುಣಿಸಿದರು. 24 ವರ್ಷದ ಜ್ವೆರೇವ್ ಅಂತಿಮ ಎಂಟರ ಘಟ್ಟದಲ್ಲಿ ಸ್ಪೇನ್‌ನ ಅಲೆಜಾಂಡ್ರೊ ಡೇವಿಡೊವಿಚ್ ವಿರುದ್ಧ ಸೆಣಸಲಿದ್ದಾರೆ.

    ಇತಿಹಾಸ ಬರೆದ ಕ್ರೆಜ್‌ಸಿಕೋವಾ, ಗೌಫ್
    ಟೂರ್ನಿಯ 9ನೇ ದಿನವಾದ ಸೋಮವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಐತಿಹಾಸಿಕ ಸಾಧನೆಗಳು ದಾಖಲಾಗಿವೆ. ವಿಶ್ವ ನಂ. 33 ಬಾರ್ಬೊರಾ ಕ್ರೆಜ್‌ಸಿಕೋವಾ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಗೇರುವ ಮೂಲಕ ಇತಿಹಾಸ ಬರೆದಿದ್ದರೆ, ಅಮೆರಿಕದ ಬಾಲಕಿ ಕೋಕೋ ಗೌಫ್ ಕಳೆದ 15 ವರ್ಷಗಳಲ್ಲಿ ಗ್ರಾಂಡ್ ಸ್ಲಾಂನಲ್ಲಿ ಕ್ವಾರ್ಟರ್ ಫೈನಲ್‌ಗೇರಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದಾಳೆ. ಡಬಲ್ಸ್‌ನಲ್ಲಿ 2 ಬಾರಿ ಗ್ರಾಂಡ್ ಸ್ಲಾಂ ಜಯಿಸಿದರೂ, ಸಿಂಗಲ್ಸ್‌ನಲ್ಲಿ ಪ್ರಮುಖ ಸಾಧನೆ ತೋರಿರದಿದ್ದ ಜೆಕ್ ಗಣರಾಜ್ಯದ ಆಟಗಾರ್ತಿ ಕ್ರೆಜ್‌ಸಿಕೋವಾ ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸ್ಲೋವನ್ ಸ್ಟೀನ್ಸ್ ವಿರುದ್ಧ 6-2, 6-0 ನೇರಸೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದರು. 25 ವರ್ಷ ಕ್ರೆಜ್‌ಸಿಕೋವಾ ಟೂರ್ನಿಯ ಮಿಶ್ರ ಡಬಲ್ಸ್ ಮತ್ತು ಮಹಿಳಾ ಡಬಲ್ಸ್‌ನಲ್ಲೂ ಅಂತಿಮ 8ರ ಘಟ್ಟಕ್ಕೇರಿರುವುದರಿಂದ ತ್ರಿವಳಿ ಸಾಧನೆ ಸಂಭ್ರಮ ಕಂಡಿದ್ದಾರೆ. 17 ವರ್ಷ 86 ದಿನ ವಯಸ್ಸಿನ ಕೋಕೋ ಗೌಫ್ 4ನೇ ಸುತ್ತಿನಲ್ಲಿ ಟುನೀಷಿಯಾದ ಒನ್ಸ್ ಜಬೆಯುರ್‌ಗೆ 6-3, 6-1 ನೇರಸೆಟ್‌ಗಳಿಂದ ಸೋಲುಣಿಸಿದರು. ಗೌಫ್ಗಿಂತ ಮುನ್ನ ಗ್ರಾಂಡ್ ಸ್ಲಾಂನಲ್ಲಿ ಅಂತಿಮ 8ರ ಘಟ್ಟಕ್ಕೇರಿದ್ದ ಕಿರಿಯ ಆಟಗಾರ್ತಿ ಎಂದರೆ ನಿಕೋಲ್ ವೈದಿಸೋವಾ. ಜೆಕ್ ಆಟಗಾರ್ತಿ ವೈದಿಸೋವಾ 2006ರಲ್ಲಿ ಫ್ರೆಂಚ್ ಓಪನ್‌ನಲ್ಲೇ 17 ವರ್ಷ 44 ದಿನ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಅಲ್ಲದೆ ಜೆನ್ನಿರ್ ಕ್ಯಾಪ್ರಿಯಾಟಿ (1993) ಬಳಿಕ ಪ್ಯಾರಿಸ್‌ನಲ್ಲಿ 8ರ ಘಟ್ಟಕ್ಕೇರಿದ ಅಮೆರಿಕದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಗೌಫ್ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts