More

    ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ; ಜೋಕೋ, ನಡಾಲ್‌ಗೆ ಮುನ್ನಡೆ

    ಪ್ಯಾರಿಸ್: ವಿಶ್ವ ಟೆನಿಸ್‌ನ ದಿಗ್ಗಜರಾದ ವಿಶ್ವ ನಂ.1 ನೊವಾಕ್ ಜೋಕೊವಿಕ್ ಹಾಗೂ ಹಾಲಿ ಚಾಂಪಿಯನ್ ರಾಫೆಲ್ ನಡಾಲ್, ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 19ನೇ ಗ್ರಾಂಡ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋ ಸತತ 12ನೇ ಬಾರಿಗೆ 4ನೇ ಸುತ್ತಿಗೇರಿದ್ದಾರೆ. 14ನೇ ಬಾರಿ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸ್ಪೇನ್‌ನ ರಾಫೆಲ್ ನಡಾಲ್ ಸುಲಭ ಗೆಲುವಿನೊಂದಿಗೆ ಮುನ್ನಡೆದರು. ಈ ಮೂಲಕ ನಡಾಲ್ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ 16ನೇ ಬಾರಿಗೆ ಹಾಗೂ ಗ್ರಾಂಡ್ ಸ್ಲಾಂನಲ್ಲಿ 50ನೇ ಬಾರಿಗೆ 4ನೇ ಸುತ್ತಿಗೇರಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, ಅಮೆರಿಕ 4ನೇ ಶ್ರೇಯಾಂಕಿತ ಆಟಗಾರ್ತಿ ಸೋಫಿಯಾ ಕೆನಿನ್ ಪ್ರಿಕ್ವಾರ್ಟರ್ ಗೇರಿದರು. 5ನೇ ಶ್ರೇಯಾಂಕಿತ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಆಘಾತ ಕಂಡರು.

    ಶನಿವಾರ ನಡೆದ ಪಂದ್ಯದಲ್ಲಿ ಸೆರ್ಬಿಯಾದ ದಿಗ್ಗಜ ಜೋಕೊವಿಕ್ 6-1, 6-4, 6-1 ನೇರ ಸೆಟ್‌ಗಳಿಮದ ಲಿಥುವಾನಿಯಾದ ರಿಕಾರ್ಡಸ್ ಬೆರಾಂಕಿಸ್ ಅವರನ್ನು ಒಂದು ಗಂಟೆ 32 ನಿಮಿಷಗಳ ಹೋರಾಟದಲ್ಲಿ ಸುಲಭ ಜಯ ದಾಖಲಿಸಿದರು. 34 ವರ್ಷದ ಜೋಕೊವಿಕ್ 2016ರಲ್ಲಿ ಕಡೇ ಬಾರಿಗೆ ಫ್ರೆಂಚ್ ಓಪನ್ ಜಯಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಜೋಕೋ, ಚೊಚ್ಚಲ ಯತ್ನದಲ್ಲೇ 4ನೇ ಸುತ್ತಿಗೆ ಪ್ರವೇಶಿಸಿರುವ ಇಟಲಿಯ 19 ವರ್ಷದ ಆಟಗಾರ ಲೊರೆನ್‌ಜೊ ಮುಸೆಟಿ ಅವರನ್ನು ಎದುರಿಸಲಿದ್ದಾರೆ. ಹಾಲಿ ಚಾಂಫಿಯನ್ ರಾೆಲ್ ನಡಾಲ್ 6-3, 6-3, 6-3 ನೇರ ಸೆಟ್‌ಗಳಿಂದ ದಕ್ಷಿಣ ಆಫ್ರಿಕಾ ಕ್ಯಾಮೆರೊನ್ ನೊರೀ ಅವರನ್ನು ಮಣಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಗ್ರೀಸ್‌ನ 5ನೇ ಶ್ರೇಯಾಂಕಿತ ಆಟಗಾರ ಸ್ಟೆನೊಸ್ ಸಿಸಿಪಾಸ್, ರಷ್ಯಾದ ಡೇನಿಲ್ ಮೆಡ್ವೆಡೆವ್ ಮುನ್ನಡೆ ಸಾಧಿಸಿದರು.

    * ಸ್ವಿಟೊಲಿನಾಗೆ ಆಘಾತ
    5ನೇ ಶ್ರೇಯಾಂಕಿತ ಆಟಗಾರ್ತಿ ಎಲಿನಾ ಸ್ವಿಟೊಲಿನಾ 3ನೇ ಸುತ್ತಿನ ಕದನದಲ್ಲಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಕ್ಲೇಕೋರ್ಟ್ ಗ್ರಾಂಡ್ ಸ್ಲಾಂನಲ್ಲಿ ಶ್ರೇಯಾಂಕಿತ ಮಹಿಳೆಯರ ಪತನ ಮುಂದುವರಿಯಿತು. ಉಕ್ರೇನ್‌ನ ಸ್ವಿಟೊಲಿನಾ 3-6, 2-6 ನೇರ ಸೆಟ್‌ಗಳಿಂದ ವಿಶ್ವ ನಂ.33 ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜೆಸಿಕೊವಾ ಎದುರು ನಿರಾಸೆ ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಅಗ್ರಶ್ರೇಯಾಂಕಿತ ಮೂವರು ಆಟಗಾರ್ತಿಯರು ಪತನಗೊಂಡಂತಾಗಿದೆ.

    * ಸ್ಟೀಫೆನ್ಸ್ ಸುಲಭ ಜಯ
    ಮಹಿಳೆಯರ ವಿಭಾಗದ ಇತರ ಪಂದ್ಯಗಳಲ್ಲಿ ಅಮೆರಿಕಾದ ಸೋಫಿಯಾ ಕೆನಿನ್ 4-6, 6-1, 6-4 ರಿಂದ ಸ್ವದೇಶ ಬಾಂಧವೆ ಜೆಸ್ಸಿಕಾ ಪೆಗುಲಾ ಅವರನ್ನು ಸೋಲಿಸಿದರು. ಮಾಜಿ ರನ್ನರ್‌ಅಪ್ ಸ್ಲೊವಾನೆ ಸ್ಟೀಫೆನ್ಸ್ 6-7, 7-5 ನೇರ ಸೆಟ್‌ಗಳಿಂದ 18ನೇ ಶ್ರೇಯಾಂಕಿತ ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಚೊವಾ ಎದುರು ಜಯ ದಾಖಲಿಸಿದರು. 2018ರಲ್ಲಿ ಸ್ಟೀಫೆನ್ಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಫ್ರೆಂಚ್ ಓಪನ್‌ನಲ್ಲಿ 7ನೇ ಬಾರಿಗೆ 4ನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಚೆಕ್ ಗಣರಾಜ್ಯದ ಬಾರ್ಬೊರ ಕ್ರೆಜೆಚಿಕೊವಾ ಅವರನ್ನು ಎದುರಿಸಲಿದ್ದಾರೆ.

    * ಫಿಕ್ಸಿಂಗ್ ಆರೋಪ, ಬಂಧಿತ ರಷ್ಯಾ ಆಟಗಾರ್ತಿ ಬಿಡುಗಡೆ
    ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಂಧನವಾಗಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಯಾನಾ ಸಿಜಿಕೋವಾರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಫ್ರೆಂಚ್ ಓಪನ್ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಯಾನಾ ಸೋಲನುಭವಿಸಿದ ಬಳಿಕ ಸ್ಥಳೀಯ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದರು. 26 ವರ್ಷದ ಯಾನಾ ಸಿಜಿಕೋವಾ ತಮ್ಮ ಮೇಲಿರುವ ಫಿಕ್ಸಿಂಗ್ ಆರೋಪವನ್ನು ತಳ್ಳಿಹಾಕಿದ್ದು, ಸುಖಾಸುಮ್ಮನೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ ಎಂದು ಅವರ ವಕೀಲರಾದ ಫ್ರೆಡೆರಿಕ್ ಬೆಲೊಟ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts