More

    ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ: ಗೆದ್ದರೂ ಹೊರಬಿದ್ದ ರೋಜರ್ ಫೆಡರರ್

    ಪ್ಯಾರಿಸ್: ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನಲ್ಲಿ 4 ಸೆಟ್‌ಗಳ ಕಠಿಣ ಹೋರಾಟದ ಗೆಲುವು ಸಾಧಿಸಿದರೂ ಫ್ರೆಂಚ್ ಓಪನ್ ಕ್ಲೇಕೋರ್ಟ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹೊರನಡೆದಿದ್ದಾರೆ. ತಮ್ಮ ನೆಚ್ಚಿನ ಗ್ರಾಸ್‌ಕೋರ್ಟ್ ಟೂರ್ನಿ ವಿಂಬಲ್ಡನ್‌ಗೆ ಮುನ್ನ ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಟೂರ್ನಿಯ 4ನೇ ಸುತ್ತಿನಲ್ಲಿ ಆಡದೆ ಫೆಡರರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 8ನೇ ಶ್ರೇಯಾಂಕಿತ ಫೆಡರರ್ ಶನಿವಾರ ರಾತ್ರಿ ನಡೆದ ರೋಚಕ ಕಾದಾಟದಲ್ಲಿ 7-6, 6-7, 7-6, 7-5ರಿಂದ ವಿಶ್ವ ನಂ. 59 ಜರ್ಮನಿಯ ಡೊಮಿನಿಕ್ ಕೂಪರ್ ವಿರುದ್ಧ ಜಯ ಸಾಧಿಸಿದ್ದರು. ಕೋವಿಡ್ ಕರ್ಫೂವಿನಿಂದ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಸ್ಥಳೀಯ ಕಾಲಮಾನ ತಡರಾತ್ರಿ 1 ಗಂಟೆಯವರೆಗೂ ಅಂದರೆ ಒಟ್ಟು ಮೂರೂವರೆಗೆ ಗಂಟೆಗಳ ಕಾಲ ಸಾಗಿತ್ತು. 2020ರ ಆಸ್ಟ್ರೇಲಿಯನ್ ಓಪನ್ ಬಳಿಕ ಮೊದಲ ಗ್ರಾಂಡ್ ಸ್ಲಾಂ ಟೂರ್ನಿ ಆಡಿದ ಫೆಡ್, 4ನೇ ಸುತ್ತಿನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟಿನಿ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಇತ್ತೀಚೆಗೆ ಎರಡೂ ಮೊಣಕಾಲಿನ ಶಸಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ 20 ಗ್ರಾಂಡ್ ಸ್ಲಾಂಗಳ ಒಡೆಯ ಫೆಡ್, ಟೂರ್ನಿಯ ಮೊದಲ ಮೂರೂ ಪಂದ್ಯಗಳಲ್ಲಿ ಕಠಿಣ ಹೋರಾಟ ನಡೆಸಿ ಬಳಲಿದ್ದರು. ಆಗಸ್ಟ್ 8ರಂದು 40ನೇ ವರ್ಷಕ್ಕೆ ಕಾಲಿಡಲಿರುವ ಫೆಡರರ್, ತಮ್ಮ ಫಿಟ್ನೆಸ್ ಪರಿಶೀಲನೆಯ ಬಳಿಕ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದರು. ಫೆಡರರ್ 2009ರಲ್ಲಿ ಒಮ್ಮೆ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ಚಾಂಪಿಯನ್ ಆಗಿದ್ದರಲ್ಲದೆ, 4 ಬಾರಿ ರನ್ನರ್ ಅಪ್ ಕೂಡ ಆಗಿದ್ದರು.
    ಸಿಸಿಪಾಸ್ ಮುನ್ನಡೆ: 5ನೇ ಶ್ರೇಯಾಂಕಿತ ಗ್ರೀಸ್ ಆಟಗಾರ ಸ್ಪೆಫಾನೋಸ್ ಸಿಸಿಪಾಸ್ 6-3, 6-2, 7-5 ನೇರಸೆಟ್‌ಗಳಿಂದ ಸ್ಪೇನ್‌ನ ಕ್ಯಾರೆನೊ ಬುಸ್ಟಾಗೆ ಸೋಲುಣಿಸಿ ಕ್ವಾರ್ಟರ್ಫೈನನಲ್‌ಗೇರಿದರು. 2ನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮೆಡ್ವೆಡೆವ್ ನಾಲ್ಕರಘಟ್ಟಕ್ಕೇರಿದರು. 

    ಇತಿಹಾಸ ಬರೆದ ಜಿದಾನ್‌ಸೆಕ್
    ಸ್ಲೊವೇನಿಯಾದ ಯುವ ಆಟಗಾರ್ತಿ ಟಮರ ಜಿದಾನ್‌ಸೆಕ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ರೊಮೇನಿಯಾದ ಸೊರೊನಾ ಕ್ರಿಸ್ಟಿಯಾ ವಿರುದ್ಧ ಭಾನುವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 7-6, 6-1 ನೇರಸೆಟ್‌ಗಳಿಂದ ಜಯಿಸಿದ 23 ವರ್ಷದ ಜಿದಾನ್‌ಸೆಕ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೇರಿದ ಸ್ಲೊವೇನಿಯದ ಮೊದಲ ಆಟಗಾರ್ತಿ ಎನಿಸಿದರು. ವಿಶ್ವ ನಂ. 85 ಜಿದಾನ್‌ಸೆಕ್ ಹಿಂದೆಂದೂ ಗ್ರಾಂಡ್ ಸ್ಲಾಂನಲ್ಲಿ 2ನೇ ಸುತ್ತಿಗಿಂತ ಮೇಲೇರಿರಲಿಲ್ಲ. ಜಿದಾನ್‌ಸೆಕ್ ಈ ಮುನ್ನ 6ನೇ ಶ್ರೇಯಾಂಕಿತೆ ಬಿಯಾಂಕಾ ಆಂಡ್ರೆಸ್ಕುಗೆ ಆಘಾತ ನೀಡಿ ಗಮನಸೆಳೆದಿದ್ದರು.

    ಎಂಟರ ಘಟ್ಟಕ್ಕೇರಿದ ಬೋಪಣ್ಣ ಜೋಡಿ
    ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಷಿಯಾದ ಫ್ರಾಂಕೊ ಸ್ಕುಗರ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೇರಿದೆ. ಬೋಪಣ್ಣ ಜೋಡಿಗೆ 3ನೇ ಸುತ್ತಿನಲ್ಲಿ ವಾಕ್‌ಓವರ್ ಲಭಿಸಿದೆ. ಎದುರಾಳಿ ನೆದರ್ಲೆಂಡ್‌ನ ಮಟ್ವೆ ಮಿಡಲ್‌ಕೂಪ್ ಮತ್ತು ಸಲ್ವಡಾರ್‌ನ ಮಾರ್ಸೆಲೊ ಅರೆವಲೊ ಜೋಡಿ ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದ ಕಾರಣ ಬೋಪಣ್ಣ ಜೋಡಿಗೆ ಪಂದ್ಯವಾಡದೆ ಮುನ್ನಡೆ ದೊರೆಯಿತು. ವಿಶ್ವ ನಂ. 40 ಆಟಗಾರ ಬೋಪಣ್ಣಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ದೃಷ್ಟಿಯಿಂದ ರ‌್ಯಾಂಕಿಂಗ್ ಸುಧಾರಿಸಿಕೊಳ್ಳಲು ಈ ಟೂರ್ನಿ ಕೊನೇ ಅವಕಾಶವಾಗಿದೆ. ಜೂನ್ 10ರಂದು ಟೋಕಿಯೊ ಒಲಿಂಪಿಕ್ಸ್‌ಗೆ ಟೆನಿಸ್ ಆಟಗಾರರ ಅರ್ಹತೆ ಅಂತಿಮವಾಗಲಿದೆ.

    ಸೆರೇನಾ, ಅಜರೆಂಕಾಗೆ ಆಘಾತ : 24ನೇ ಗ್ರಾಂಡ್ ಸ್ಲಾಂ ಕನಸಿನಲ್ಲಿದ್ದ ಅಮೆರಿಕಾದ ಸೆರೇನಾ ವಿಲಿಯಮ್ಸ್, ಮಾಜಿ ವಿಶ್ವ ನಂ. 1 ಬೆಲಾರಸ್ ತಾರೆ ವಿಕ್ಟೋರಿಯಾ ಅಜರೆಂಕಾ ಆಘಾತ ಎದುರಿಸಿದರು. ರಷ್ಯಾದ 29 ವರ್ಷದ ಪಾವ್ಲಚೆಂಕೋವಾ 5-7, 6-3, 6-2ರಿಂದ ಅಜರೆಂಕಾ ಅವರನ್ನು ಮಣಿಸಿ, 10 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್ ಲ್‌ಗೇರಿದ ಸಾಧನೆ ಮಾಡಿದ್ದಾರೆ. ಇದುವರೆಗೆ ಒಮ್ಮೆಯೂ ಗ್ರಾಂಡ್ ಸ್ಲಾಂನಲ್ಲಿ ಸೆಮೀಸ್ ಪ್ರವೇಶಿಸದ ಪಾವ್ಲಚೆಂಕೋವಾಗೆ ಮುಂದಿನ ಸುತ್ತಿನಲ್ಲಿ 23 ಗ್ರಾಂಡ್‌ಸ್ಲಾಂಗಳ ಒಡತಿ ಸೆರೇನಾ ವಿಲಿಯಮ್ಸ್ ಎದುರಾಗುವ ನಿರೀಕ್ಷೆ ಇದೆ. ಸ್ಪೇನ್‌ನ ಪೌಲಾ ಬಡೊಸಾ 6-4, 3-6, 6-2ರಿಂದ ಜೆಕ್ ಗಣರಾಜ್ಯದ ಮರ್ಕೆಟ ವೊಂಡ್ರೌಸೋವಾಗೆ ಸೋಲುಣಿಸಿ ಅಂತಿಮ 8ರ ಘಟ್ಟಕ್ಕೇರಿದರು. ಸೆರೇನಾ ವಿಲಿಯಮ್ಸ್ 3-6, 5-7 ನೇರ ಸೆಟ್‌ಗಳಿಂದ ರಷ್ಯಾದ ಎಲಿನಾ ರೈಬಾಕಿನಾ ಎದುರು ನಿರಾಸೆ ಕಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts