More

    ಹೋರಾಟಗಾರರ ವಿಚಾರಗಳನ್ನು ಗೌರವಿಸಿ : ಸ್ವಾತಂತ್ರ್ಯ ಹೋರಾಟಗಾರ ಚನ್ನಪ್ಪ ಅಭಿಮತ

    ಚನ್ನಪಟ್ಟಣ : ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರು ದೇಶ ಭಕ್ತರು ಬಲಿದಾನ ನೀಡಿದ್ದು, ಹೋರಾಟಗಾರರ ಕನಸು ಮತ್ತು ವಿಚಾರಗಳನ್ನು ಗೌರವಿಸುವ ಕೆಲಸವಾಗಬೇಕು ಎಂದು ದೊಡ್ಡಮಳ್ಳೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚನ್ನಪ್ಪ ತಿಳಿಸಿದರು.
    ನಗರದ ಶತಮಾನೋತ್ಸವ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

    ದೇಶವನ್ನು ಸ್ವಾತಂತ್ರ್ಯಗೊಳಿಸಲು ಹಲವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆ ಮಹನೀಯರ ಆದರ್ಶಗಳನ್ನು ಯುವ ಜನತೆ ಪಾಲಿಸಬೇಕು. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ವೇಳೆ ತಾಲೂಕಿಗೆ ಆಗಮಿಸಿದ್ದರು. ವಿ.ವೆಂಕಟಪ್ಪ, ಅರ್ಕೋಟ್ ರಾಮಸ್ವಾಮಿ ಹಲವರೊಂದಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ದಿನಗಳ ಬಗ್ಗೆ ಮೆಲುಕು ಹಾಕಿದರು.

    ಡಿವೈಎಸ್‌ಪಿ ಕೆ.ಎನ್.ರಮೇಶ್ ಮಾತನಾಡಿ, ನಮಗೆ ದೊರಕಿರುವ ಸ್ವಾತಂತ್ರ್ಯದ ಹಿಂದೆ ಹಲವರ ಶ್ರಮ ಹಾಗೂ ಪ್ರಾಣ ತ್ಯಾಗವಿದೆ. ಸ್ವಾತಂತ್ರ್ಯ ಹೋರಾಟಗಾರರ ತತ್ವ, ಆದರ್ಶ, ಚಿಂತನೆಗಳು ಯುವ ಪೀಳಿಗೆಗೆ ದಾರಿದೀಪವಾಗಲಿ. ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಬದುಕು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಯುವ ಪೀಳಿಗೆಗೆ ತಿಳಿಸಲು ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

    ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹುಬ್ಬಳ್ಳಿ 12 ವರ್ಷದ ಶಂಕರ ಮಹದೇವ ಡೋಣಿ ಎಂಬ ಬಾಲಕ ಭಾಗವಹಿಸಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಅವರು ಅಂತಿಮ ಸಮಯದಲ್ಲೂ ಸ್ವರಾಜ್ಯ ಎಂಬ ಪದ ಹೇಳಿ ವೀರಮರಣ ಅಪ್ಪಿದ್ದರು. ಅಂದು 12 ವರ್ಷದ ಬಾಲಕನಲ್ಲಿದ್ದ ದೇಶಭಕ್ತಿ, ದೇಶ ಪ್ರೇಮ, ಪರಕೀಯರ ವಿರುದ್ಧ ಹೋರಾಟ ಮನೋಭಾವ ಇಂದಿನ ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ. ಯುವ ಸಮುದಾಯ ಸ್ವದೇಶಿ ಉತ್ಪನ್ನಗಳನ್ನು ಗೌರವಿಸಿ, ಖರೀದಿಸಿ ಹಾಗೂ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

    ರಾಮನಗರ ವಿದ್ಯಾಪೀಠ ಕಾಲೇಜಿನ ಪ್ರಾಂಶುಪಾಲರ ಕೊತ್ತಿಪುರ ಜಿ.ಶಿವಣ್ಣ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ವಿವರಿಸಿದರು.ಹಿರಿಯ ಪತ್ರಕರ್ತರಾದ ಸು.ತ.ರಾಮೇಗೌಡ, ಅಬ್ಬೂರು ರಾಜಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುಸಿದ್ದಯ್ಯ, ಪ್ರಾಂಶುಪಾಲರಾದ ಶಿವಣ್ಣ ಎಸ್.ರಾಮಲಿಂಗಪ್ಪ, ಕೆ.ಪಿ.ರಾಜು, ಪುಟ್ಟಲಿಂಗಯ್ಯ, ಶಿವಲಿಂಗಯ್ಯ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ. ನಾರಾಯಣ ಸೇರಿ ಹಲವರು ಉಪಸ್ಥಿತರಿದ್ದರು.

    ಕಾರ್ಯಕ್ರಮಕ್ಕೂ ಮುನ್ನ ನಗರದ ಗಾಂಧಿ ಸ್ಮಾರಕ ಭವನದಲ್ಲಿ ಹಲವು ಗಣ್ಯರು ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಾಥಾಗೆ ಚಾಲನೆ ನೀಡಿದರು.ಕಾಲೇಜು ಮಕ್ಕಳಿಂದ ಗಾಂಧಿ ಭವನದಿಂದ ಶತಮಾನೋತ್ಸವ ಭವನದವರಗೆ ಜಾಥಾ ನಡೆಸಲಾಯಿತು.

    ಗಾಂಧೀಜಿ ಅವರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಈ ಗಾಂಧಿ ಸ್ಮಾರಕ ಭವನ ಮೊದಲು ಕೇವಲ ಸಾರ್ವಜನಿಕ ಗುಡಿಸಾಲಿಗಿತ್ತು. ಗಾಂಧೀಜಿಯವರು ನೆಲೆಸಿ ಹೋದ ಮೇಲೆ ಗಾಂಧಿ ಸ್ಮಾರಕ ಭವನವಾಗಿ ಬದಲಾಯಿತು. ಇದು ಇಂದು ಶಿಥಿಲಾವಸ್ಥೆ ತಲುಪಿರುವುದು ವಿಷಾಧನೀಯ. ಆದಷ್ಟೂ ಬೇಗ ಈ ಭವನಕ್ಕೆ ಕಾಯಕಲ್ಪ ಕಲ್ಪಿಸಬೇಕು. ಸ್ಥಳದಲ್ಲಿ ದೇಶಭಕ್ತಿ ಕುರಿತು ಹೆಚ್ಚು ಹೆಚ್ಚು ವಿಚಾರ ಸಂಕಿರಣ, ಚರ್ಚೆ ವಿನಿಮಯ ಕಾರ್ಯಕ್ರಮಗಳು ನಡೆಯಬೇಕು.
    ಸು.ತ.ರಾಮೇಗೌಡ ಹಿರಿಯ ಪತ್ರಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts