More

    ಪಚ್ಚನಾಡಿಯಲ್ಲಿ ಉಚಿತ ವಾಹನ ವ್ಯವಸ್ಥೆ

    ಮಂಗಳೂರು: ರೈಲ್ವೆ ಮೇಲ್ಸೇತುವೆ ಕಾಮಗಾರಿ ಮತ್ತು ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಯಿಂದಾಗಿ ಪಚ್ವನಾಡಿ ಭಾಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಹಲವು ಕಿ.ಮೀ. ನಡೆದುಕೊಂಡು ಹೋಗಿ ಬಸ್ ಹಿಡಿಯಬೇಕಿತ್ತು. ಸ್ಥಳೀಯರ ಈ ಸಮಸ್ಯೆ ಅರಿತ ಸ್ಥಳೀಯ ಕಾರ್ಪೋರೇಟರ್ ಸಂಗೀತಾ ಆರ್.ನಾಯಕ್, ಕಾರ್ಯಕರ್ತರ ಮೂಲಕ ಉಚಿತ ವಾಹನ ವ್ಯವಸ್ಥೆ ಕಲ್ಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕಾಮಗಾರಿ ಹಿನ್ನೆಲೆಯಲ್ಲಿ ಅ.10ರಿಂದ ಪಚ್ಚನಾಡಿ ಮುಖ್ಯರಸ್ತೆ ಮುಚ್ಚಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಕಾರ್ಪೋರೇಟರ್ ಕಳೆದ 13 ದಿನಗಳಿಂದ ಕಾರ್ಯಕರ್ತರ ನೆರವಿನಿಂದ 5 ಕಾರು ಹಾಗೂ ಒಂದು ಟಿ.ಟಿ. ವಾಹನವನ್ನು ಸಂಚಾರಕ್ಕೆ ವ್ಯವಸ್ಥೆ ಮಾಡುವ ಮೂಲಕ ಜನರ ಕಷ್ಟ ನಿವಾರಿಸಿದ್ದಾರೆ.

    ಪಚ್ಚನಾಡಿ ದೇವಿನಗರದಿಂದ ಮುಖ್ಯ ರಾಜರಾಜಕಾಲುವೆವರೆಗೆ ಒಂದು ಭಾಗದಲ್ಲಿ ಕ್ಯಾಬ್ ವ್ಯವಸ್ಥೆ ಇದ್ದರೆ, ವೈದ್ಯನಾಥ ನಗರದಿಂದ ಬೋಂದೆಲ್ ಚರ್ಚ್‌ವರೆಗೆ ಇನ್ನೊಂದು ಭಾಗದಲ್ಲಿ ವಾಹನ ಇದೆ. ಮಧ್ಯದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರು ನಡೆದುಕೊಂಡು ಹೋಗಬೇಕಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆವರೆಗೆ ಮತ್ತು ಸಾಯಂಕಾಲ 3ರಿಂದ ರಾತ್ರಿ 9 ಗಂಟೆವರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ.

    ಶಾಲಾ ಮಕ್ಕಳಿಗಾಗಿ ಅರ್ಧದವರೆಗೆ ಬಸ್: ಈ ನಡುವೆ ಸೋಮವಾರದಿಂದ ಶಾಲೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವುದರಿಂದ ಈ ಹಿಂದೆ ಪಚ್ಚನಾಡಿ ಭಾಗಕ್ಕೆ ಬರುತ್ತಿದ್ದ ಬಸ್‌ಗಳನ್ನು ದೇವಿನಗರದವರೆಗೆ ಟ್ರಿಪ್ ಮಾಡುವಂತೆ ಮಾಲೀಕರಲ್ಲಿ ವಿನಂತಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸಾಯಂಕಾಲ ಮಕ್ಕಳಿಗಾಗಿ 3.35ಕ್ಕೆ ಬೋಂದೆಲ್ ಎಂಜಿಸಿ ಶಾಲೆ ಬಳಿಯಿಂದ ಹೊರಡುವ ಬಸ್ ದೇವಿನಗರ ಹಂಪ್‌ವರೆಗೆ ಬರುತ್ತದೆ.

    ಪರ್ಯಾಯ ರಸ್ತೆ ವ್ಯವಸ್ಥೆ: ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿರುವ ಪರ್ಯಾಯ ರಸ್ತೆಯನ್ನೂ ಅಭಿವೃದ್ಧಿ ಮಾಡಲಾಗಿದೆ. ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳಿಗೆ ಮಂಜಲ್‌ಪಾದೆಯಾಗಿ ಬೋಂದೆಲ್ ಸಂಪರ್ಕಿಸುವ ಬದಲಿ ರಸ್ತೆಯನ್ನು 6 ತಿಂಗಳ ಹಿಂದೆಯೇ ಡಾಂಬರೀಕರಣಗೊಳಿಸಲಾಗಿತ್ತು. ಮುಖ್ಯ ರಸ್ತೆ ಬಂದ್ ಆಗುವ ಮೊದಲೇ ಅಲ್ಲಿ ಹೊಸ ಎಲ್‌ಇಡಿ ದಾರಿದೀಪ ಅಳವಡಿಸಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.

    ಕಡುಬಡವರು, ಶ್ರಮಿಕರು ನಮ್ಮ ಏರಿಯಾದಲ್ಲಿ ವಾಸವಾಗಿದ್ದು, ಅವರಿಗೆ ತೊಂದರೆ ಆಗಬಾರದೆಂದು ಈ ಕ್ರಮ ವಹಿಸಲಾಗಿದೆ. ಜನಪ್ರತಿನಿಧಿಯಾಗಿ ವಿಶೇಷವಾದ ಜನಸೇವೆ ಮಾಡಬೇಕು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡಲು ತುಂಬಾ ಸಂತೋಷವಾಗುತ್ತಿದೆ. ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಅವಕಾಶವಾಗುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ

    ಸಂಗೀತಾ ಆರ್.ನಾಯಕ್, ಕಾರ್ಪೋರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts