More

    ಮಣಿಪಾಲದಲ್ಲಿ ಕೆಎಫ್‌ಡಿಗೆ ಉಚಿತ ಚಿಕಿತ್ಸೆ

    ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ (ಕೆಎಫ್‌ಡಿ) ಉಚಿತವಾಗಿ ಚಿಕಿತ್ಸೆ ನೀಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಶುಕ್ರವಾರದಿಂದ ರೋಗಿಗಳ ವೆಚ್ಚವನ್ನು ಆರೋಗ್ಯ ಇಲಾಖೆ ಭರಿಸಲು ಆರಂಭಿಸಿದೆ.

    ಮಲೆನಾಡಿನ ಸಾಗರ, ತೀರ್ಥಹಳ್ಳಿ, ಸೊರಬ ತಾಲೂಕು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಹಾವಳಿ ತೀವ್ರವಾಗಿದ್ದು, ಸೋಂಕು ತಗುಲಿದ ಮಂದಿ ಮಣಿಪಾಲ ಕೆಎಂಸಿ ಆಸ್ಪತ್ರೆ ಕಡೆದೆ ಧಾವಿಸಿ ಬರುತ್ತಿದ್ದಾರೆ. ಮಲೆನಾಡಿನ ಹಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಭೀಕರ ಸ್ವರೂಪ ಪಡೆದುಕೊಂಡಿದೆ. ಗ್ರಾಮಸ್ಥರು ಪ್ರತೀವರ್ಷ ಮಂಗನ ಕಾಯಿಲೆಯಿಂದ ನರಳುವಂತಾಗಿದೆ. ಜನವರಿಯಿಂದ ಇಲ್ಲಿವರೆಗೆ 40 ರಿಂದ 50 ಕೆಎಫ್‌ಡಿ ಸೋಂಕಿತರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಕೆಎಫ್‌ಡಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕಿತರಿಗೆ ಕಳೆದ ವರ್ಷದಂತೆ ಈ ಬಾರಿಯೂ ಉಚಿತ ಆರೋಗ್ಯ ಸೇವೆ ಕಲ್ಪಿಸಲು ವ್ಯವಸ್ಥೆ ಮಾಡುವಂತೆ ಬೇಡಿಕೆ ಇದ್ದರೂ ಸರ್ಕಾರ ಸ್ಪಂದಿರಲಿಲ್ಲ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಬಳಿಕ ಸರ್ಕಾರ ಮಾ.16ರಂದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಿಂದಿನ ಬಾಕಿ ಇರುವ ಬಿಲ್ ಪಾವತಿಸಬೇಕು. ಈ ವರ್ಷದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ರೆಫರ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮಣಿಪಾಲ ಕೆಎಂಸಿ ಆಸ್ಪತ್ರೆ ಅವರೊಂದಿಗೆ ಡಿಎಚ್‌ಒ ಮಾತುಕತೆ ನಡೆಸಿ, ಕೆಎಫ್‌ಡಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವುದು ಮತ್ತು ಆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುವ ಬಗ್ಗೆ ತಿಳಿಸಿದ್ದಾರೆ.

    ಕೆಎಂಸಿಗೆ 18.50 ಲಕ್ಷ ರೂ.ಬಾಕಿ: 2019ರಲ್ಲಿ 421 ಶಂಕಿತ ಪ್ರಕರಣಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದರಲ್ಲಿ 210 ಪಾಸಿಟಿವ್ ವರದಿ ಬಂದಿತ್ತು. 18 ಮಂದಿ ಸಾವನ್ನಪ್ಪಿದ್ದರು. ಸರ್ಕಾರ ಬಹುತೇಕ ಮಂದಿಯ ವೆಚ್ಚ ಪಾವತಿಸಿದ್ದರೂ, 18.50 ಲಕ್ಷ ರೂ.ಬಾಕಿ ಮೊತ್ತವನ್ನು ಒಂದು ವರ್ಷ ಕಳೆದರೂ ಪಾವತಿಸಿಲ್ಲ. ಬಾಕಿ ಹಣವನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಈ ಬಗ್ಗೆ ಮಾತುಕತೆ ನಡೆಸಿದ್ದು, ಇಲಾಖೆ ವತಿಯಿಂದ ಕೂಡಲೇ ಆಸ್ಪತ್ರೆಗೆ ಬಾಕಿ ಮೊತ್ತ ಪಾವತಿಯಾಗಲಿದೆ ಎಂದು ಶಿವಮೊಗ್ಗ ಡಿಎಚ್‌ಒ ತಿಳಿಸಿದ್ದಾರೆ.

    ಕೆಎಫ್‌ಡಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ಆ ವೆಚ್ಚವನ್ನು ಸರ್ಕಾರವೇ ಭರಿಸುವ ಬಗ್ಗೆ ಸರ್ಕಾರದ ಸೂಚನೆಯಂತೆ ಮಣಿಪಾಲ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಾಗಿದೆ. ಇಲಾಖೆಯ ವೈದ್ಯಾಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿ, ಲಿಖಿತವಾಗಿಯೂ ತಿಳಿಸಲಾಗಿದೆ. ಶುಕ್ರವಾರದಿಂದಲೇ ಆಸ್ಪತ್ರೆ ಖಾತೆಗೆ ಹಣ ಜಮೆ ಮಾಡಿದ್ದೇವೆ. ಈ ಹಿಂದೆ ಹಣ ಪಾವತಿಸಿ ಚಿಕಿತ್ಸೆ ಪಡೆದ ರೋಗಿಗಳಿಗೆ ಸರ್ಕಾರದಿಂದ ಆಸ್ಪತ್ರೆ ಬಿಲ್ ಮೊತ್ತವನ್ನು ನೀಡಲಾಗುವುದು.

    ಡಾ.ರಾಜೇಶ್ ಸುರ್ಗಿಹಳ್ಳಿ
    ಡಿಎಚ್‌ಒ, ಶಿವಮೊಗ್ಗ

    ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಸತ್ತ ಮಂಗಗಳ ಪರೀಕ್ಷೆ ನಡೆಸಲಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ವರದಿ ಬಂದಿದೆ. ಮಂಗಗಳು ಸತ್ತು ಬಿದ್ದಲ್ಲಿ ಕೂಡಲೇ ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು.

    ಡಾ.ವಾಸುದೇವ
    ಜಿಲ್ಲಾ ಸರ್ವೇಕ್ಷಣಾಧಿಕಾರಿ, ಆರೋಗ್ಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts