More

    ಫ್ರೀ ಬಸ್ ಫುಲ್ ರಶ್

    ಹಾವೇರಿ: ರಾಜ್ಯ ಸರ್ಕಾರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳಿಗೆ ಭಾರಿ ಡಿಮಾಂಡ್ ಸೃಷ್ಟಿಯಾಗಿದೆ. ಖಾಲಿ ಸಂಚರಿಸುತ್ತಿದ್ದ ಕೆಲ ರೂಟ್ ಬಸ್‌ಗಳು ಜನರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ 80 ಹೊಸ ಬಸ್‌ಗಳಿಗೆ ಬೇಡಿಕೆ ಬಂದಿದೆ.

    ಶಕ್ತಿ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆ ಹಾವೇರಿ ವಿಭಾಗೀಯ ಕಚೇರಿ ವ್ಯಾಪ್ತಿಯ ಜಿಲ್ಲೆಯಲ್ಲಿ ಒಟ್ಟು 500 ಸಾರಿಗೆ ಬಸ್‌ಗಳಿವೆ. ನಿತ್ಯ 500 ಬಸ್‌ಗಳಲ್ಲಿ ಈ ಮೊದಲು 1.80ರಿಂದ 1.90 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದೀಗ ದಿಢೀರ್ ಆಗಿ 80ರಿಂದ 90 ಸಾವಿರ ಪ್ರಯಾಣಿಕರು ಹೆಚ್ಚಳವಾಗಿದ್ದಾರೆ. ಪ್ರತಿದಿನ 2.70ರಿಂದ 2.80 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಳವಾಗಿದೆ.

    ಸರ್ಕಾರ ಕೂಡಲೇ ಹೊಸ ಬಸ್‌ಗಳನ್ನು ಖರೀದಿಸಿ ಜಿಲ್ಲೆಗೆ ಹಂಚಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಹಳೆಯ ಡಕೋಟಾ ಬಸ್‌ಗಳನ್ನು ಕೊಡಬಾರದು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

    ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ: ಶಿಗ್ಗಾಂವಿ- ಸವಣೂರ, ಹಾನಗಲ್ಲ, ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಬ್ಯಾಡಗಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮರ್ಪಕ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ಗ್ರಾಮಗಳಿಗೆ ಬಸ್ ಸಂಪರ್ಕವೇ ಇಲ್ಲವಾಗಿದೆ. ಇದ್ದರೂ ಸಮಯಕ್ಕೆ ಸರಿಯಾಗಿ, ಅಗತ್ಯಕ್ಕೆ ತಕ್ಕಷ್ಟು ಟ್ರಿಪ್ ಬರುತ್ತಿಲ್ಲ ಎಂಬ ಗಂಭಿರ ಆರೋಪವಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಕೂಡ ಇತ್ತೀಚೆಗೆ ಶಿಗ್ಗಾಂವಿಯ ಸಭೆಯೊಂದರಲ್ಲಿ ಎಚ್ಚರಿಸಿದ್ದರು. ಈ ಕುರಿತು ಸಾರಿಗೆ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

    ಕೆಲ ಲಾಂಗ್ ರೂಟ್ ಕೈಬಿಟ್ಟು ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿರುವ ಕಡೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಈ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಜಿಲ್ಲೆಗೆ 80 ಬಸ್‌ಗಳ ಬೇಡಿಕೆಯ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕ್ರಿಯಾಯೋಜನೆ ಸಿದ್ಧವಾಗಿದ್ದು, ಟೆಂಡರ್ ಹಂತದಲ್ಲಿದೆ. ಸರ್ಕಾರ ಹಂಚಿಕೆ ಮಾಡಿದ ಕೂಡಲೇ ಬೇಡಿಕೆ ಇದ್ದ ಕಡೆ ಸೇವೆ ವಿಸ್ತರಿಸಲಾಗುವುದು.
    I ಶಶಿಧರ ಮರಿದೇವರಮಠ ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts