More

    ಪಿಎಂ ಉದ್ಯೋಗ ಸೃಷ್ಟಿ ಯೋಜನೆಯಡಿ ಸಾಲದ ನೆಪದಲ್ಲಿ ಯುವತಿಗೆ ವಂಚನೆ

    ಬೆಂಗಳೂರು: ಪ್ರಧಾನಮಂತ್ರಿಯವರ ಉದ್ಯೋಗ ಸೃಷ್ಟಿ ಯೋಜನೆಯಡಿ ಸಾಲ ಕೊಡಿಸುವುದಾಗಿ ಯುವತಿಗೆ ನಂಬಿಸಿ 1.51 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮೈಕೋ ಲೇಔಟ್ ನಿವಾಸಿ 24 ವರ್ಷದ ಯುವತಿ ವಂಚನೆಗೆ ಒಳಗಾಗಿದ್ದು, ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಿಎಂ ಉದ್ಯೋಗ ಸೃಷ್ಟಿ ಯೋಜನೆಯಡಿ ಸಾಲ ಪಡೆಯಲು ಯುವತಿ, ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ 13ರಂದು ನಿಕೇಶ ಎಂಬಾತ ಯುವತಿಗೆ ಕರೆ ಮಾಡಿ ಪ್ರಧಾನಮಂತ್ರಿಯವರ ಉದ್ಯೋಗ ಸೃಷ್ಟಿ ಯೋಜನೆ ಕಚೇರಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸಿ ಆಧಾರ್, ಪಾನ್, ವೋಟರ್ ಐಡಿ ಇನ್ನಿತ್ತರ ದಾಖಲೆಗಳ ನಕಲನ್ನು ವಾಟ್ಸ್‌ಆ್ಯಪ್ ಮಾಡಿಸಿಕೊಂಡಿದ್ದ.

    ಅ.16ರಂದು ಮತ್ತೊಬ್ಬ ಯುವತಿಗೆ ಕರೆ ಮಾಡಿ ನಿಮಗೆ ಸಾಲ ಮಂಜೂರು ಆಗಿದೆ. ದಾಖಲೆ ಪರಿಶೀಲನೆ ಆಗಬೇಕಾಗಿದೆ. ನಿಮ್ಮ ಬ್ಯಾಂಕ್ ಕಡೆಯಿಂದ ಕರೆ ಬರಲಿದೆ ಎಂದು ಹೇಳಿದ್ದಾನೆ. ಮತ್ತೊಬ್ಬ ಕರೆ ಮಾಡಿ ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ಅರ್ಜಿ ಪರಿಶೀಲನ ಶುಲ್ಕ, ತೆರಿಗೆ ಸೇರಿದಂತೆ ನಾನಾ ನೆಪದಲ್ಲಿ ಹಂತ ಹಂತವಾಗಿ 1.51 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ನೊಂದ ಯುವತಿ, ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts