More

    ಸರ್ಕಾರಿ ಗೋಮಾಳಕ್ಕೆ ಬೆಳೆ ವಿಮೆ ಮಾಡಿಸಿ ವಂಚನೆ

    ಮಂಜುನಾಥ ಅಂಗಡಿ ಧಾರವಾಡ
    ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ತಂತ್ರಜ್ಞಾನದ ಮೊರೆ ಹೋದರೂ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಿದರ್ಶನ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿರುವ ಅವ್ಯವಹಾರ. ಇಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ತಂತ್ರಜ್ಞಾನವನ್ನು ಬೇಕಾದಂತೆ ಬಳಸಿಕೊಂಡು ಹಣ ಲೂಟಿ ಮಾಡಲಾಗಿದೆ.
    ಅತಿವೃಷ್ಟಿ ಮತ್ತು ಅನಾವೃಷ್ಟಿಗಳಾದರೆ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ – ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ. ರೈತರು ಜಮೀನುಗಳಲ್ಲಿ ಬೆಳೆದ ಬೆಳೆಯ ದಾಖಲೆ ನೀಡಿ ವಿಮೆಯ ಕಂತು ತುಂಬಿ ಫಲಾನುಭವಿ ಆಗುವುದು ಸಾಮಾನ್ಯ. ಈ ಪ್ರಕ್ರಿಯೆ ಡಿಜಿಟಲೀಕರಣವಾಗಿರುವುದರಿಂದ ಜಮೀನಿನಲ್ಲಿ ಬೆಳೆದ ಬೆಳೆಯ ಬದಲು ಬೇರೆಯದ್ದನ್ನು ತೋರಿಸಲಾಗುವುದಿಲ್ಲ. ಆದರೂ ಮನಗುಂಡಿ ಗ್ರಾಮದ ಕೆಲವರು ಸರ್ಕಾರದ ಜಮೀನಿನ ಮೇಲೆ ಹಕ್ಕು ಸಾಧಿಸಿ ಬೆಳೆ ಬೆಳೆಯಲಾಗಿದೆ ಎಂದು ಸುಳ್ಳು ದಾಖಲೆ ತೋರಿಸಿ ವಿಮಾ ಕಂತು ಕಟ್ಟಿದ್ದಾರೆ. ಅಷ್ಟೇ ಅಲ್ಲ, ಬೆಳೆ ವಿಮೆ ಪರಿಹಾರವನ್ನೂ ಪಡೆದಿರುವುದು ಅಚ್ಚರಿ ಮೂಡಿಸಿದೆ.
    61 ಎಕರೆ ಸರ್ಕಾರಿ ಗೋಮಾಳ: ಮನಗುಂಡಿ ಗ್ರಾಮ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 48/ 1ರಲ್ಲಿ 61 ಎಕರೆ 34 ಗುಂಟೆ ಸರ್ಕಾರಿ ಗೋಮಾಳ (ಮೊಫತ್ ಗೈರಾಣ) ಇದೆ. ಇದರಲ್ಲಿ ಭತ್ತ ಬೆಳೆದಿರುವುದಾಗಿ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಯನ್ನು ನಂಬಿಸಿ 13 ಜನರು ಬೆಳೆ ವಿಮೆ ತುಂಬಿದ್ದಾರೆ. ಓರ್ವ ರೈತ ಬಿತ್ತನೆ ಮಾಡಿದ ಬೆಳೆ ವಿಮೆಗೆ ಆಯ್ಕೆಯಾಗಬೇಕಾದರೆ ಸ್ಥಳೀಯ ಮಟ್ಟದಲ್ಲಿ ಸರ್ವೆ ಆಗಬೇಕು. ಈ ಪ್ರಕ್ರಿಯೆ ಜಿಪಿಎಸ್ ಮೂಲಕ ನಡೆಯುವುದರಿಂದ ಪ್ರತಿ ಸರ್ವೆ ನಂಬರ್​ನಲ್ಲಿ ಬೆಳೆಯಲಾದ ಬೆಳೆ ಗೊತ್ತಾಗುತ್ತದೆ. ಆದರೂ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡ 13 ಜನರು ಸರ್ಕಾರಿ ಗೋಮಾಳಕ್ಕೆ ವಿಮಾ ಕಂತು ತುಂಬಿದ್ದಾರೆ. 2019- 0ನೇ ಸಾಲಿನಲ್ಲಿ ಮಹೇಶ ಹೆಬ್ಬಾಳ ಎಂಬುವರಿಗೆ 17,000 ರೂ. ಹಾಗೂ ಸಂತೋಷ ಕುಸುಗಲ್ ಎಂಬುವರಿಗೆ 37,749 ರೂ. ಪರಿಹಾರದ ಹಣ ಜಮೆಯಾಗಿದೆ.
    ಕಂಪ್ಯೂಟರ್ ಕೇಂದ್ರದ ಮೇಲೆ ದಾಳಿ: ಅಕ್ರಮದ ಬಗ್ಗೆ ಗ್ರಾಮಸ್ಥ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ನಾಗಾನಂದ ಗುಂಡಗೋವಿ ಎಂಬುವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಅವರು ತನಿಖೆಗೆ ಸೂಚಿಸಿದ್ದರು. ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪ್ರಕರಣದ ಕೇಂದ್ರಬಿಂದುವಾಗಿರುವ ಸಿಎಸ್​ಸಿ (ಕಾಮನ್ ಸರ್ವೀಸ್ ಸೆಂಟರ್) ಮೇಲೆ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಕಂಪ್ಯೂಟರ್ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
    ಅವ್ಯವಹಾರ ಬೆಳಕಿಗೆ ತಂದು ದೂರು ನೀಡಿದವರ ಮೇಲೆ ಅಕ್ರಮ ಎಸಗಿದವರಿಂದ ಬೆದರಿಕೆ ಎದುರಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಭದ್ರತೆ ನೀಡಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.


    ಸರ್ಕಾರಿ ಜಮೀನನ್ನೂ ಬಿಡದವರ ಮೇಲೆ ಕ್ರಮ ಆಗಬೇಕು. ಇಂಥವರನ್ನು ಹಾಗೆಯೇ ಬಿಟ್ಟರೆ ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಾರೆ. ಇದೇ ಸರ್ವೆ ನಂಬರ್​ನಲ್ಲಿ ಹಲವರು ಕಟ್ಟಡ ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ.
    | ನಾಗಾನಂದ ಗುಂಡಗೋವಿ ಮಾಹಿತಿ ಹಕ್ಕು ಹೋರಾಟಗಾರ

    ಕಂತು ಪಾವತಿಸಿದವರು
    ಮಹೇಶ ಹೆಬ್ಬಾಳ (2019- 20ರ ಮುಂಗಾರು), ಸಂತೋಷ ಕುಸುಗಲ್ಲ (2019- 20ರ ಮುಂಗಾರು), ಮಹೇಶ ಹೆಬ್ಬಾಳ (2019- 20ರ ಹಿಂಗಾರು), ಮಲ್ಲಪ್ಪ ಕಲ್ಲಪ್ಪ ನಾಲಗಟ್ಟಿ (2019- 20ರ ಹಿಂಗಾರು), ಮಲ್ಲಪ್ಪ ಚಿಟ್ಟೆ, ನಿಂಗಪ್ಪ ಹಡಪದ, ನಾಗಪ್ಪ ನೇಕಾರ, ಶೇಖಪ್ಪ ನಿಂಗಪ್ಪ ಸಾಲಗಟ್ಟಿ, ಚನಬಸಪ್ಪ ಅಮ್ಮಿನಭಾವಿ, ಸಂತೋಷ ಕುಸುಗಲ್ಲ, ಫಕೀರಪ್ಪ ಬುಡ್ಡಿಕಾಯಿ (2 ಬಾರಿ ವಿಮೆ) ಹಾಗೂ ರಮೇಶ ಕನ್ನಿಕೊಪ್ಪ (ಎಲ್ಲರೂ 2020- 21ರ ಮುಂಗಾರು) ಸರ್ಕಾರಿ ಗೈರಾಣಕ್ಕೆ ವಿಮಾ ಕಂತು ಪಾವತಿಸಿದ್ದಾರೆ ಎಂದು ಮನಗುಂಡಿ ಗ್ರಾಮದ 10ಕ್ಕೂ ಹೆಚ್ಚು ಜನ ಉಪ ವಿಭಾಗಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


    ಅಕ್ರಮ ಎಸಗಿದ 13 ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರಿ ನೌಕರರು ಭಾಗಿಯಾಗಿರುವ ದೂರು ಕೇಳಿಬಂದಿದ್ದು, ಸೂಕ್ತ ತನಿಖೆ ನಡೆಸಿ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಗೋಮಾಳ ಅತಿಕ್ರಮಣ ಮತ್ತು ಬೆಳೆ ವಿಮೆ ಪಾವತಿಸಿದವರಿಗೆ ನೋಟಿಸ್ ನೀಡಲು ತಹಸೀಲ್ದಾರ್​ಗೆ ಸೂಚಿಸಿದ್ದೇನೆ.
    | ಡಾ. ಗೋಪಾಲಕೃಷ್ಣ ಉಪ ವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts