More

    ಐಪಿಎಲ್‌ನಲ್ಲಿ ಕ್ರಿಕೆಟಿಗರ ಪತ್ನಿ-ಮಕ್ಕಳು, ಗೆಳತಿಗೆ ನಿರ್ಬಂಧ?

    ಮುಂಬೈ: ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ 13ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿರುವ ನಡುವೆ ಫ್ರಾಂಚೈಸಿಗಳು ಗೊಂದಲದಲ್ಲಿವೆ. ಟೂರ್ನಿ ಆಯೋಜನೆ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ತಮಗೆ ಲಭಿಸಿಲ್ಲ ಎಂದು ಐಪಿಎಲ್ ಫ್ರಾಂಚೈಸಿಗಳು ತಿಳಿಸಿವೆ. ಇದಲ್ಲದೆ ಇನ್ನೂ ಕೆಲ ವಿಷಯಗಳ ಬಗ್ಗೆ ಫ್ರಾಂಚೈಸಿ ಮಾಲೀಕರು ಗೊಂದಲದಲ್ಲಿದ್ದಾರೆ.

    ಟೂರ್ನಿಯ ವೇಳೆ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲು ಆಟಗಾರರ ಪತ್ನಿ-ಮಕ್ಕಳು ಅಥವಾ ಗೆಳತಿಗೆ (ವ್ಯಾಗ್ಸ್) ನಿರ್ಬಂಧ ಹೇರುವ ಬಗ್ಗೆ ಚಿಂತನೆಗಳು ನಡೆದಿವೆ. ಆದರೆ ಆಟಗಾರರನ್ನು 2 ತಿಂಗಳು ಕಾಲ ಕುಟುಂಬದಿಂದ ಸಂಪೂರ್ಣವಾಗಿ ಹೊರಗಿಡುವುದು ಸರಿಯಲ್ಲ ಎಂಬ ಮಾತುಗಳು ಕೂಡ ಕೇಳಿಬಂದಿರುವ ಕಾರಣ ಫ್ರಾಂಚೈಸಿಗಳು ಜೈವಿಕ-ಸುರಕ್ಷಾ ವಾತಾವರಣ ಕಾಯ್ದುಕೊಳ್ಳುವ ಸವಾಲಿನ ಬಗ್ಗೆ ಚಿಂತೆಯಲ್ಲಿವೆ.

    ಈ ಹಿಂದೆ ಐಪಿಎಲ್ ವೇಳೆ ನಿರ್ದಿಷ್ಟ ಸಮಯದ ವೇಳೆಗೆ ಪತ್ನಿ, ಗೆಳತಿ, ಮಕ್ಕಳ ಸಹಿತ ಕುಟುಂಬದ ಜತೆಗೆ ಬೆರೆಯಲು ಅವಕಾಶ ನೀಡಲಾಗುತ್ತಿತ್ತು. ಆದರೆ ಕರೊನಾ ಭೀತಿಯಿಂದಾಗಿ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಆಟಗಾರರೊಂದಿಗೆ ಕುಟುಂಬದವರೂ ಯುಎಇಗೆ ಪ್ರಯಾಣಿಸಿದರೆ ಆಗ ಹೋಟೆಲ್ ರೂಂಗಳಲ್ಲಿ ಜಾಗದ ವ್ಯವಸ್ಥೆ ಮಾಡುವುದು ಕಷ್ಟಕರವಾಗಲಿದೆ. ಇನ್ನು ಕೆಲ ಆಟಗಾರರ ಮಕ್ಕಳು 3-5 ವರ್ಷ ವಯಸ್ಸಿನವರಾಗಿದ್ದು, ಅವರನ್ನು ಜೈವಿಕ-ಸುರಕ್ಷಾ ವಾತಾವರಣದ ಕಾರಣ ಹೋಟೆಲ್ ರೂಂಗಳಲ್ಲಿ 2 ತಿಂಗಳ ಕಾಲ ಕೂಡಿಹಾಕುವುದು ಕೂಡ ಸಾಧ್ಯವಾಗದು ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಬಿಸಿಸಿಐ ಮಾರ್ಗಸೂಚಿಗಳ ಗುಣಮಟ್ಟದ ಕಾರ್ಯವಿಧಾನ (ಎಸ್‌ಒಪಿ) ಬಿಡುಗಡೆಯಾದ ಬಳಿಕ ಎಲ್ಲವೂ ಸ್ಪಷ್ಟವಾಗಲಿವೆ.

    ಇದನ್ನೂ ಓದಿ: ಮನೆಯ ವಿದ್ಯುತ್ ಬಿಲ್ ನೋಡಿ ಹರ್ಭಜನ್ ಸಿಂಗ್‌ಗೆ ಶಾಕ್!

    ಪೂರ್ವ ನಿಗದಿಯ ಪ್ರಕಾರ ಐಪಿಎಲ್ ಟೂರ್ನಿ ಮಾರ್ಚ್ 29ರಿಂದ ಮೇ 17ರವರೆಗೆ ನಡೆಯಬೇಕಾಗಿತ್ತು. ಹೀಗಾಗಿ ಫ್ರಾಂಚೈಸಿಗಳು ಪ್ರಾಯೋಜಕರ ಜತೆಗೆ ಆ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದವು. ಇದೀಗ ಟೂರ್ನಿ ಮರುನಿಗದಿಯಾದಾಗ ಪ್ರಾಯೋಜಕರ ಜತೆಗೆ ಫ್ರಾಂಚೈಸಿಗಳು ಮತ್ತೆ ಚರ್ಚೆ ನಡೆಸಬೇಕಾಗಿದೆ. ಅಲ್ಲದೆ ಈಗ ಭಾರತೀಯ ಅಭಿಮಾನಿಗಳಿಗೆ ಟಿವಿಯಲ್ಲಷ್ಟೇ ಪಂದ್ಯಗಳನ್ನು ನೋಡುವ ಭಾಗ್ಯ ಸಿಗಲಿದ್ದು, ಹಾಲಿ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ವಿವಿಧ ಪ್ರಾಯೋಜಕರೂ ಹಿಂದೆ ಸರಿಯುತ್ತಿದ್ದಾರೆ. ಈ ಸವಾಲುಗಳನ್ನು ಫ್ರಾಂಚೈಸಿಗಳು ನಿಭಾಯಿಸಬೇಕಾಗಿವೆ.

    ಸಾಮಾನ್ಯವಾಗಿ ಐಪಿಎಲ್ ತಂಡಗಳಿಗೆ ಟಿಕೆಟ್ ಮಾರಾಟದ ಲಾಭವೂ ಪ್ರಮುಖ ಆದಾಯ ಮೂಲವಾಗಿರುತ್ತದೆ. ಇದು ಇಲ್ಲದೆ ಪ್ರತಿ ಫ್ರಾಂಚೈಸಿ ಪ್ರತಿ ಪಂದ್ಯದಿಂದ 2.5ರಿಂದ 3.5 ಕೋಟಿ ರೂ. ಅಥವಾ ಪ್ರತಿ ಟೂರ್ನಿಯ ಒಟ್ಟಾರೆ 20-25 ಕೋಟಿ ರೂ. ಮೊತ್ತದಷ್ಟು ಟಿಕೆಟ್ ಮಾರಾಟ ಆದಾಯವನ್ನು ಕಳೆದುಕೊಳ್ಳಲಿದೆ. ಇದಕ್ಕೆ ಬಿಸಿಸಿಐ ಸೂಕ್ತ ಪರಿಹಾರವನ್ನು ನೀಡಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

    ಇನ್ನು ಭಾರತದಲ್ಲಿ ಹೋಟಲೆ ಮತ್ತಿತರ ವ್ಯವಸ್ಥೆಗಳ ಬಲ್ಕ್ ಬುಕಿಂಗ್ ವೇಳೆ ಸ್ವಲ್ಪಮಟ್ಟಿಗೆ ರಿಯಾಯಿತಿಗಳು ಲಭಿಸುತ್ತವೆ. ಆದರೆ ಯುಎಇಯಲ್ಲಿ ಈ ವ್ಯವಸ್ಥೆಗಳು ದುಬಾರಿಯಾಗುತ್ತವೆ ಮತ್ತು ಪ್ರತಿ ಫ್ರಾಂಚೈಸಿಯ ನಿರ್ವಹಣಾ ವೆಚ್ಚವೂ ಏರಿಕೆಯಾಗುತ್ತದೆ.

    ಆಟಗಾರರ ಮಾಹಿತಿ ಕೊರತೆ
    ಯುಎಇಗೆ ಕರೆದೊಯ್ಯವುದು, ವಾಪಸ್ ತರುವುದು, ವಿದೇಶಿ ಆಟಗಾರರ ಲಭ್ಯತೆ, ಬದಲಿ ಆಟಗಾರರ ವ್ಯವಸ್ಥೆ ಮತ್ತಿತರ ಆಟಗಾರರಿಗೆ ಸಂಬಂಧಿತ ವಿಷಯಗಳ ಬಗ್ಗೆಯೂ ಫ್ರಾಂಚೈಸಿಗಳು ಸ್ಪಷ್ಟ ಮಾಹಿತಿ ಹೊಂದಿಲ್ಲ. ಕರೊನಾ ಹಾವಳಿಯ ಹಾಲಿ ಪರಿಸ್ಥಿತಿಯಲ್ಲಿ ಆಟಗಾರರ ಫಿಟ್ನೆಸ್ ಬಗ್ಗೆಯೂ ಫ್ರಾಂಚೈಸಿಗಳು ಗೊಂದಲದಲ್ಲಿವೆ. ಆಟಗಾರರನ್ನು ಯುಎಇಗೆ ಕರೆದೊಯ್ಯುವುದು ಮತ್ತು ವಾಪಸ್ ತರುವುದು ತನ್ನ ಹೊಣೆಯೇ ಅಥವಾ ಬಿಸಿಸಿಐ ಜವಾಬ್ದಾರಿ ವಹಿಸುವುದೇ, ಜೈವಿಕ ಸುರಕ್ಷಾ ವಾತಾವರಣದ ನಿರ್ವಹಣೆ ಹೇಗೆ ಮುಂತಾದ ವಿಷಯಗಳ ಬಗ್ಗೆಯೂ ಫ್ರಾಂಚೈಸಿಗಳಿಗೆ ಗೊಂದಲವಿದೆ.

    ಬಿಸಿಸಿಐನಿಂದ ಯುಎಇಗೆ ಪತ್ರ
    ಯುಎಇಯಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನೀಡಿದ್ದ ಆಹ್ವಾನವನ್ನು ಬಿಸಿಸಿಐ ಒಪ್ಪಿಕೊಂಡಿದೆ. ಈ ಬಗ್ಗೆ ಇಸಿಬಿಗೆ ಪತ್ರ ಬರೆಯುವ ಮೂಲಕ ಬಿಸಿಸಿಐ ಮಾಹಿತಿ ನೀಡಿದೆ. ಭಾರತ ಸರ್ಕಾರದಿಂದ ಅಂಗೀಕಾರ ಸಿಕ್ಕ ಬಳಿಕ ಎಲ್ಲವೂ ಅಂತಿಮವಾಗಲಿದೆ ಎಂದು ಇಸಿಬಿ ಪ್ರಧಾನ ಕಾರ್ಯದರ್ಶಿ ಮುಬಶ್‌ಶಿರ್ ಉಸ್ಮಾನಿ ತಿಳಿಸಿದ್ದಾರೆ. 2014ರಲ್ಲಿ ಐಪಿಎಲ್‌ನ ಮೊದಲ 20 ಪಂದ್ಯಗಳಿಗೆ ಆತಿಥ್ಯ ವಹಿಸಿದ ಅನುಭವದಲ್ಲಿ ಈ ಬಾರಿ ಪೂರ್ಣ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿಕೊಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಯುಎಇಯಲ್ಲಿ ಸದ್ಯ ಕರೊನಾ ವೈರಸ್ ನಿಯಂತ್ರದಲ್ಲಿದ್ದು, 6 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಷ್ಟೇ ಇವೆ.

    ಎಲ್ಲಿಸ್ ಪೆರ‌್ರಿ ವಿಚ್ಛೇದನಕ್ಕೆ ಮುರಳಿ ವಿಜಯ್ ಕಾರಣವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts