More

    ಚತುಷ್ಪಥಕ್ಕೆ ಸಾಲು ಸಾಲು ಮರಗಳ ಮಾರಣಹೋಮ!

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಪುತ್ತೂರು – ಉಪ್ಪಿನಂಗಡಿ ರಸ್ತೆ ಮೇಲ್ದರ್ಜೆಗೇರುವ ಜತೆಗೆ ಚತುಷ್ಪಥ ರಸ್ತೆಯನ್ನಾಗಿಸುವ ಭರದಲ್ಲಿ ಸಾಲು ಸಾಲು ಬೃಹತ್ ಮರಗಳ ಮಾರಣಹೋಮ ನಡೆಸಲಾಗುತ್ತಿದೆ.

    ನಗರದ ಬೊಳುವಾರು ಬಳಿಯಿಂದ ಪುತ್ತೂರು ಉಪ್ಪಿನಂಗಡಿ ರಸ್ತೆ ಸಂಪರ್ಕ ಪಡೆಯುತ್ತಿದ್ದು, ಈ ರಸ್ತೆಯ ಹಾರಾಡಿಯಿಂದ ಕೃಷ್ಣ ನಗರದವರೆಗಿನ ಭಾಗ ಶಕುಂತಳಾ ಟಿ. ಶೆಟ್ಟಿ ಶಾಸಕತ್ವದ ಅವಧಿಯಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಿತ್ತು. ಕೆಮ್ಮಾಯಿಯಿಂದ ಸೇಡಿಯಾಪುವರೆಗಿನ 4 ಕಿ.ಮೀ ದೂರದ ರಸ್ತೆ ಪ್ರಸ್ತುತ ಶಾಸಕ ಸಂಜೀವ ಮಠಂದೂರು ಚತುಷ್ಪಥ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಸೇಡಿಯಾಪು ಬಳಿಯಿಂದ ನೆಕ್ಕಿಲಾಡಿ ತನಕವೂ ರಸ್ತೆಯನ್ನು ಚತುಷ್ಪಥಗೊಳಿಸಲು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಭಾಗದಲ್ಲಿ ಬೆಳೆದು ನಿಂತಿದ್ದ ಮಾವು, ಹಲಸು ಮುಂತಾದ ಮರಗಳನ್ನು ಧರೆಗುರುಳಿಸಲಾಗುತ್ತಿದೆ.
    ಮೊದಲ ಹಂತದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿ ಸಂದರ್ಭ ಸುಮಾರು 80ಕ್ಕೂ ಹೆಚ್ಚು ಮರಗಳ ಹನನ ಮಾಡಲಾಗಿದೆ. ಎರಡನೇ ಹಂತದಲ್ಲಿ 104 ಮರಗಳ ಹನನವಾಗಲಿದೆ. ಇದರಲ್ಲಿ ಬಹುತೇಕ ಮರಗಳನ್ನು ಈಗಾಗಲೇ ಕಡಿದುರುಳಿಸಲಾಗಿದೆ. ಈ ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆ 8.87ಲಕ್ಷ ರೂ.ಗಳನ್ನು ಅರಣ್ಯ ಇಲಾಖೆಗೆ ಪಾವತಿಸಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರಸ್ತೆಯ ಮಧ್ಯೆ ಭಾಗದಿಂದ ಎರಡೂ ಕಡೆ 7 ಮೀಟರ್ ಡಾಂಬರು ರಸ್ತೆ, 2 ಮೀಟರ್ ರಸ್ತೆ ಬದಿ ಹಾಗೂ ಚರಂಡಿ ಸೇರಿದಂತೆ ಒಟ್ಟು 22 ಮೀಟರ್ ಅಗಲ ರಸ್ತೆ ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಬದಲಾವಣೆಗೆ ಸುಮಾರು 70 ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕಾಗಿದೆ.

    ಒಂದು ಗಿಡವನ್ನೂ ನೆಟ್ಟಿಲ್ಲ
    ಲೋಕೋಪಯೋಗಿ ಇಲಾಖೆಯಿಂದ ಮರ ಕಡಿಯುವ ಮೊದಲು ಅರಣ್ಯ ಇಲಾಖೆಗೆ 8.87 ಲಕ್ಷ ರೂ. ಹಣ ಪಾವತಿಸಲಾಗಿದೆ. ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 10 ಪಟ್ಟು ಗಿಡಗಳನ್ನು ಬೆಳೆಸುವ ಕೆಲಸ ಅರಣ್ಯ ಇಲಾಖೆಯಿಂದ ನಡೆಯಬೇಕಾಗಿತ್ತು. ಹಾರಾಡಿಯಿಂದ ಕೃಷ್ಣ ನಗರದ ವರೆಗಿನ ಚತುಷ್ಪಥ ರಸ್ತೆ ನಿರ್ಮಾಣವಾಗಿ ವರ್ಷ ಎರಡು ಕಳೆದಿದೆ. ಆದರೆ ಈ ಭಾಗದಲ್ಲಿ ಒಂದು ಗಿಡವನ್ನೂ ಅರಣ್ಯ ಇಲಾಖೆ ನೆಡುವ ಕೆಲಸ ಮಾಡಿಲ್ಲ.

    12 ಕೋಟಿ ರೂ. ಮೊತ್ತದ ದ್ವಿಪಥ ರಸ್ತೆ
    ಕೆಮ್ಮಾಯಿಯಿಂದ ಸೇಡಿಯಾಪು ತನಕದ ರಸ್ತೆಯನ್ನು ಚತುಷ್ಪಥಗೊಳಿಸಲು ಸರ್ಕಾರ 12 ಕೋಟಿ ರೂ. ಮಂಜೂರು ಮಾಡಿದೆ. ಇದರ ನಂತರ ಉಳಿಕೆಯಾಗುವ ಸೇಡಿಯಾಪು-ನೆಕ್ಕಿಲಾಡಿ ರಸ್ತೆಯನ್ನು ಚತುಷ್ಪಥಗೊಳಿಸಲು ಇನ್ನಷ್ಟೇ ಅನುದಾನ ಮಂಜೂರಾಗಬೇಕಾಗಿದೆ. ಈಗ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯ ಭಾಗದಲ್ಲಿ ಒಂದು ಗಿಡಕ್ಕೆ 300ರೂ.ನಂತೆ ಒಂದು ಕಿ.ಮೀ ರಸ್ತೆ ಕಾಮಗಾರಿಗೆ 3ಲಕ್ಷ ರೂ.ನಂತೆ ಅರಣ್ಯ ಇಲಾಖೆ ದರ ವಿಧಿಸಿದೆ. ಒಟ್ಟು 17 ಲಕ್ಷ ರೂ. ಹಣ ಅರಣ್ಯ ಇಲಾಖೆಗೆ ಲೋಕೋಪಯೋಗಿ ಇಲಾಖೆ ಪಾವತಿಸಬೇಕಾಗುತ್ತದೆ.

    ಪುತ್ತೂರು – ಉಪ್ಪಿನಂಗಡಿ ರಸ್ತೆ ಮೇಲ್ದರ್ಜೆಗೇರುವ ಜತೆಗೆ ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳುತ್ತಿದೆ. ಅಭಿವೃದ್ಧಿ ದೃಷ್ಠಿಯಲ್ಲಿ ಮರ ಕಡಿಯುವುದು ಅನಿವಾರ್ಯ. ಈ ಕಾರ್ಯ ಕಾನೂನು ಪ್ರಕ್ರಿಯೆಯಂತೆಯೇ ನಡೆಯುತ್ತಿದೆ.
    ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts