More

    ನಾಲ್ಕು ರೈತ ಉತ್ಪಾದಕ ಸಂಸ್ಥೆ ರಚನೆ

    |ಗೋಪಾಲಕೃಷ್ಣ ಪಾದೂರು ಉಡುಪಿ
    ಕೇಂದ್ರ ಸರ್ಕಾರ 2016ರ ಬಜೆಟ್‌ನಲ್ಲಿ 6,865 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ಹೊಸ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಸ್ಥಾಪನೆಯ ಯೋಜನೆ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ತೆಂಗು, ಗೇರು ಮತ್ತು ಮಲ್ಲಿಗೆ ಬೆಳೆಗೆ ಸಂಬಂಧಿಸಿ ಹೊಸದಾಗಿ ನಾಲ್ಕು ಎಫ್‌ಪಿಒ ರಚನಾ ಪ್ರಕ್ರಿಯೆ ಪ್ರಗತಿಯಲ್ಲಿದೆ.
    ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಬಹುಸಂಖ್ಯೆಯಲ್ಲಿದ್ದು, ರೈತರಿಗೆ ಸುಧಾರಿತ ತಂತ್ರಜ್ಞಾನ ಲಭ್ಯತೆ, ಸಾಲ, ಹೆಚ್ಚಿನ ಮಾರುಕಟ್ಟೆ ಸಂಪರ್ಕ ಕಲ್ಪಿಸಿ, ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ರೂಪಿಸಲಾಗುತ್ತಿದೆ. ಉಡುಪಿ ತಾಲೂಕಿನ ಎಫ್‌ಪಿಒಗೆ ತೆಂಗು ಮತ್ತು ತೋಟಗಾರಿಕಾ ಬೆಳೆ, ಕಾಪು ತಾಲೂಕಿನ ಎಫ್‌ಪಿಒಗೆ ಮಲ್ಲಿಗೆ, ಕುಂದಾಪುರ ಎಫ್‌ಪಿಒಗೆ ಗೇರು, ಕಾರ್ಕಳ ಎಫ್‌ಪಿಒಗೆ ತೆಂಗು ಮತ್ತು ತೋಟಗಾರಿಕಾ ಬೆಳೆ ಆಯ್ಕೆ ಮಾಡಲಾಗಿದೆ. ಕಾರ್ಕಳದ ನಿಟ್ಟೆ, ಉಡುಪಿಯ ಹಿರಿಯಡ್ಕ, ಕುಂದಾಪುರದ ವಂಡ್ಸೆ, ಕಾಪುವಿನ ಶಂಕರಪುರದಲ್ಲಿ ಈ ರೈತ ಉತ್ಪಾದಕ ಸಂಸ್ಥೆಗಳ ಕೇಂದ್ರ ಕಚೇರಿ ಕಾರ್ಯನಿರ್ವಹಿಸಲಿದೆ.
    ಸಂಸ್ಥೆಯ ಸ್ವರೂಪ: ಯಾವ ಬೆಳೆ ಎಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಎಂದು ಗಮನಿಸಿ, ಆಯಾ ಭಾಗದಲ್ಲಿ ಕೃಷಿ ಉತ್ಪನ್ನಗಳ ಕ್ಲಸ್ಟರ್‌ಗಳಲ್ಲಿ ಎಫ್‌ಪಿಒಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆ ಅಸ್ತಿತ್ವಕ್ಕೆ ತರಲು ಕನಿಷ್ಠ 300 ರೈತರ ಅಗತ್ಯವಿದೆ. ಗರಿಷ್ಠ 1,000 ಸದಸ್ಯರು ಇರಬಹುದು. ಪ್ರತಿ ಸದಸ್ಯರು ಸಂಸ್ಥೆಯಲ್ಲಿ 1 ಸಾವಿರ ರೂ. ಪಾಲು ಬಂಡವಾಳ ತೊಡಗಿಸಬೇಕು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸಹಿತ 15 ನಿರ್ದೇಶಕರ ಆಡಳಿತ ಮಂಡಳಿ ರಚನೆಯಾಗುತ್ತದೆ. ಸಂಘದ ದೈನಂದಿನ ಕಾರ್ಯನಿರ್ವಹಣೆಗೆ ಸಿಇಒ ಹಾಗೂ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಸದಸ್ಯರ ಉತ್ಪನ್ನಗಳನ್ನು ಮಾರುಕಟ್ಟೆಯ ಗರಿಷ್ಠ ಮೌಲ್ಯಕ್ಕೆ ಖರೀದಿಸಲಾಗುತ್ತದೆ. ಜತೆಗೆ ಸರ್ಕಾರದ ಸಹಾಯಧನದೊಂದಿಗೆ ಕೃಷಿಗೆ ಬೇಕಾದ ಎಲ್ಲ ಅಗತ್ಯವಸ್ತುಗಳನ್ನು ನೀಡಲಾಗುತ್ತದೆ. ವ್ಯವಹಾರ ಸಂಸ್ಥೆಗಳ ಜತೆ ತೊಡಗಿಸಿಕೊಂಡು 5 ವರ್ಷ ಪ್ರತಿ ಎಫ್‌ಪಿಒಗೆ ವೃತ್ತಿಪರ ಬೆಂಬಲ ನೀಡಲು ಅನುಷ್ಠಾನ ಏಜೆನ್ಸಿಗಳನ್ನು ಗುರುತಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ನಿಟ್ಟೆ ಇನ್ಕುಬೇಷನ್ ಸೆಂಟರ್ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಪ್ರತಿ ಸಂಸ್ಥೆಗೆ 3 ವರ್ಷದವರೆಗೆ ಸುಮಾರು 30 ಲಕ್ಷ ರೂ. ನೆರವು ನೀಡುತ್ತದೆ.

    ಮಲ್ಲಿಗೆಗೆ ಮಹಿಳೆಯರ ಸಂಘ: ಕಾಪು ತಾಲೂಕಿನ ಶಂಕರಪುರದಲ್ಲಿ ಉಡುಪಿ ಮಲ್ಲಿಗೆ ಬೆಳೆಗಾರರ ಸಂಘ ರಚಿಸಲಾಗಿದ್ದು, ಇದರಲ್ಲಿರುವ ಎಲ್ಲ 1 ಸಾವಿರ ಸದಸ್ಯರೂ ಮಹಿಳೆಯರಾಗಿರುವುದು ವಿಶೇಷ. ರಾಜ್ಯದಲ್ಲೇ ಮೊದಲ ಬಾರಿ ಆಡಳಿತ ನಿರ್ವಹಣೆಗೂ ಮಹಿಳೆಯರದ್ದೇ ಸಾರಥ್ಯ. ಹೀಗಾಗಿ ನಿರ್ದೇಶಕರು, ಸಿಇಒ, ಸಿಬ್ಬಂದಿ ಎಲ್ಲರೂ ಮಹಿಳೆಯರು. ಇಂದು (ಸೆ.25 ) ಸಂಸ್ಥೆಯನ್ನು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು.

    ಕಾರ್ಕಳದಲ್ಲಿ ರಾಜ್ಯದ ಪ್ರಥಮ ಎಫ್‌ಪಿಒ: ರಾಜ್ಯದ ಪ್ರಥಮ ಎಫ್‌ಪಿಒ ಕಾರ್ಕಳ ತೋಟಗಾರಿಕಾ ರೈತ ಉತ್ಪಾದಕ ಕಂಪನಿ 2016ರಿಂದ ಕಾರ್ಯಾಚರಿಸುತ್ತಿದೆ. ಇದರಲ್ಲಿ 1 ಸಾವಿರ ಸದಸ್ಯರಿದ್ದು, 3 ಸೇವಾ ಕೇಂದ್ರಗಳನ್ನು ಹೊಂದಿದೆ. 2016-17ನೇ ಸಾಲಿನಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ 25 ಲಕ್ಷ ರೂ. ಅನುದಾನ ನೀಡಿದೆ. ಜತೆಗೆ 10 ಲಕ್ಷ ರೂ. ಇಕ್ವಿಟಿ ಗ್ರಾೃಂಟ್ ಕೂಡ ಲಭಿಸಿದೆ. ತೆಂಗು ಬೆಳೆಗೆ ಆದ್ಯತೆ ನೀಡಲಾಗಿದ್ದು, ಪ್ರತಿ ತಿಂಗಳು ಸುಮಾರು 10 ಸಾವಿರ ತೆಂಗಿನಕಾಯಿ ಖರೀದಿಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಸಂಸ್ಥೆ 2.5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ.

    ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಾಗಿ ಎಫ್‌ಪಿಒಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 4 ರೈತ ಉತ್ಪಾದಕ ಸಂಸ್ಥೆಗಳನ್ನು ನೋಂದಣಿ ಮಾಡಲಾಗಿದ್ದು, ತೆಂಗು, ಮಲ್ಲಿಗೆ, ಕಾಳುಮೆಣಸು ಉತ್ಪನ್ನಗಳಿಗೆ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ರಫ್ತು ಉತ್ತೇಜಿಸಲು ರೈತರಿಗೆ ಸಂಸ್ಥೆ ನೆರವಾಗಲಿದೆ. ಜಿಲ್ಲೆಗೆ ನಿಟ್ಟೆ ಇನ್ಕುಬೇಷನ್ ಸೆಂಟರ್ ನೋಡಲ್ ಸಂಸ್ಥೆಯಾಗಿದ್ದು, ಎಫ್‌ಪಿಒಗಳನ್ನು ಮುನ್ನಡೆಸಲು 3 ವರ್ಷ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲಿದೆ.
    | ಕೆಂಪೇಗೌಡ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ

    |

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts