More

    ಹಳ್ಳಿ ಮಕ್ಕಳ ಕಲಿಕೆಗೆ ಬುನಾದಿ


    ಗದಗ: ಪ್ರಾಯೋಗಿಕ ಕಲಿಕೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಬೌದ್ಧಿಕ ವಿಕಾಸಕ್ಕಾಗಿ ಹಿಂದುಳಿದ ವರ್ಗದ ಇಲಾಖೆಯು ‘ಬುನಾದಿ’ ಎಂಬ ವಿಭಿನ್ನ ಕಾರ್ಯಕ್ರಮ ಪರಿಚಯಿಸಿದೆ.
    ಖಾಸಗಿ ಶಾಲೆಗಳಲ್ಲಿ ಏರ್ಪಡಿಸುವ ಬೇಸಿಗೆ ಶಿಬಿರಗಳ ಮಾದರಿಯಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿರುವ ಪ್ರೌಢಶಾಲೆಗಳ ಮಕ್ಕಳಿಗೆ ‘ಬುನಾದಿ’ ಕಾರ್ಯಕ್ರಮ ಮೂಲಕ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ ಆಯ್ದ 300 ಸರ್ಕಾರಿ ಶಾಲೆಗಳ ಮಕ್ಕಳಿಗೆ ತಾಲೂಕಿನ ಲಕ್ಕುಂಡಿ ಗ್ರಾಮದ ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ತರಬೇತಿ ನೀಡಲಾಗುತ್ತಿದೆ.
    ಏನಿದು ಕಾರ್ಯಕ್ರಮ: ಸರ್ಕಾರಿ ಪ್ರೌಢಶಾಲೆಯ 8ರಿಂದ 10ನೇ ತರಗತಿಯ 300 ಮಕ್ಕಳನ್ನು ಆಯ್ಕೆ ಮಾಡಿ ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ಮಕ್ಕಳಿಗೆ ಗಣಿತ, ಇಂಗ್ಲಿಷ್ ಭಾಷೆ ಮತ್ತು ವಿಜ್ಞಾನ ವಿಷಯಗಳ ಪ್ರಾಯೋಗಿಕ ಕಲಿಕೆ ಮತ್ತು ಕ್ರೀಡಾಸಕ್ತಿ ಬೆಳೆಸಲು ಚಿತ್ರಕಲೆ, ಸಂಗೀತ, ಸಾಹಿತ್ಯ, ಯೋಗಾಸನ ಹೇಳಿಕೊಟ್ಟು ಅವರಲ್ಲಿ ಕಲಿಕಾಸಕ್ತಿ ವೃದ್ಧಿಸಲಾಗುತ್ತಿದೆ. ಶಿಕ್ಷಣ ತಜ್ಞರು, ವಿಷಯ ತಜ್ಞರಿಂದ ಮಾಹಿತಿ ನೀಡುವುದು, ಯುಟ್ಯೂಬ್ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಈಗಾಗಲೇ ಆನ್‌ಲೈನ್ ಪಾಠ ಮಾಡಿದ್ದಾರೆ. ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ಸೋಮೇಶ್ವರ ಕೂಡ ಪಾಠ ಮಾಡಲಿದ್ದಾರೆ.
    ಜಿಲ್ಲಾಧಿಕಾರಿಗಳಿಂದ ಸಂವಾದ: ಒಂದು ತಿಂಗಳು ಜರುಗುವ ಕಾರ್ಯಕ್ರಮದಲ್ಲಿ ಯುಟ್ಯೂಬ್ ಮೂಲಕವೇ ಶಿಕ್ಷಣ ತಜ್ಞರು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಲೇಖಕರು, ಸಂಪನ್ಮೂಲ ವ್ಯಕ್ತಿಗಳು ಪಾಠ ಮಾಡಲಿದ್ದಾರೆ. ಜಿಲ್ಲಾ ಮತ್ತು ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳಿಂದ ಪ್ರೇರಣಾದಾಯಕ ಭಾಷಣ ಮಾಡಿಸಲಾಗುತ್ತಿದೆ. ವಿಶೇಷವೆಂದರೆ ಜಿಲ್ಲಾಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಯಾರು ಪಾಠ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಸೋಮವಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿರುವುದು ವಿಶೇಷ.
    ಹೊಟ್ಟೆ ತುಂಬ ಊಟ: ಪ್ರಾಯೋಗಿಕ ಕಲಿಕೆಯ ಅವಧಿಯಲ್ಲಿ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡುವುದರಲ್ಲೂ ಇಲಾಖೆ ಹಿಂದೆ ಬಿದ್ದಿಲ್ಲ. ಅಡುಗೆ ಕಾರ್ಯಕ್ಕಾಗಿಯೇ 30 ಸಿಬ್ಬಂದಿಯನ್ನು ನೇಮಿಸಲಾಗಿದೆ. ರೊಟ್ಟಿ, ಚಪಾತಿ ಜತೆಗೆ ಜೀರಾ ರೈಸ್, ಬಿರಿಯಾನಿ, ಜಾಮೂನು, ಪಾಯಸ, ಗೋಧಿ ಹುಗ್ಗಿ, ಪ್ರತಿದಿನ ಮಧ್ಯಾಹ್ನ ಮಜ್ಜಿಗೆ, ಬೆಳಗ್ಗೆ ಇಡ್ಲಿ ವಡಾ, ಸಂಜೆ ಮಂಡಕ್ಕಿ, ಬಜಿ ನೀಡಲಾಗುತ್ತಿದೆ.


    ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಯೋಗಿಕ ಕಲಿಕೆ ಮುಖ್ಯ. ವಿಜ್ಞಾನ ಮತ್ತು ಗಣಿತದಲ್ಲಿ ಪ್ರಯೋಗಾತ್ಮಕ ಕಲಿಕೆ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಮಕ್ಕಳು ಬರಬೇಕು. ತರಬೇತಿ ಪಡೆಯಬೇಕು
    ಎಂ. ತುಂಬರಮಟ್ಟಿ
    ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ


    ಪ್ರತಿ ಇಲಾಖೆಯಿಂದಲೂ ಅಧಿಕಾರಿ ಗಳನ್ನು ಕರೆಸಿ ಮಕ್ಕಳೊಂದಿಗೆ ಸಂವಾದ ಏರ್ಪಡಿಸಲಾಗುತ್ತಿದೆ. ಮಕ್ಕಳಿಗೆ ಇದೊಂದು ವಿಶೇಷ ಕಾರ್ಯಕ್ರಮ. ಹೊಸ ಹೊಸ ವಿಷಯಗಳನ್ನು ಕಲಿಯಲು ಇದು ಉತ್ತಮ ವೇದಿಕೆಯಾಗಿದೆ.
    ಬಸವರಾಜ ಬಳ್ಳಾರಿ
    ಕಾರ್ಯಕ್ರಮದ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts